ಕರ್ನಾಟಕ

ರಾಹುಲ್​​ ಹೆಸರು ಹೇಳಿ ಜಯ ಗಳಿಸಲಿ; ಕುಲಕರ್ಣಿಗೆ ಜೋಶಿ ಸವಾಲ್​​​

Pinterest LinkedIn Tumblr


ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ವಾಕ್ಸಮರ ಶುರುವಾಗಿದೆ. ಪ್ರಲ್ಹಾದ್ ಜೋಶಿಯವರಿಗೆ ತಾಕತ್ತಿದ್ರೆ ಮೋದಿ ಹೆಸರು ಹೇಳುವುದು ಬಿಟ್ಟು ತಮ್ಮದೇ ಹೆಸರು ಹೇಳಿಕೊಂಡು ಮತಯಾಚನೆ ಮಾಡಲಿ ಎಂದು ವಿನಯ್‌ ಕುಲಕರ್ಣಿ ಸವಾಲು ಹಾಕಿದ್ದಾರೆ. ಇನ್ನೊಂದೆಡೆ ವಿನಯ ಕುಲಕರ್ಣಿಯವರಿಗೆ ತಾಕತ್ತಿದ್ರೆ ರಾಹುಲ್‌ ಗಾಂಧಿ ಹೆಸರಲ್ಲಿ ಮತಯಾಚನೆ ಮಾಡಲಿ ಎಂದು ಪ್ರಲ್ಹಾದ್ ಜೋಶಿ ತಿರುಗೇಟು ನೀಡುತ್ತಿದ್ದಾರೆ.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿನಯ ಕುಲಕರ್ಣಿಯವರು ನಾಮಪತ್ರ ಸಲ್ಲಿಸುತ್ತಿದ್ದಂತೆ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ವಿರುದ್ಧ ವಿನಯ ಕುಲಕರ್ಣಿಯವರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಪ್ರಲ್ಹಾದ್ ಜೋಶಿಯವರು ಸತತವಾಗಿ ಮೂರುಬಾರಿ ಧಾರವಾಡ ಸಂಸದರಾಗಿ ಆಯ್ಕೆಯಾಗಿದ್ದಾರೆ. ವಾಜಪೇಯಿ, ಯಡಿಯೂರಪ್ಪ, ನರೇಂದ್ರ ಮೋದಿಯವರ ಅಲೆಯ ಮೇಲೆ ಮೂರು ಚುನಾವಣೆಗಳನ್ನು ಗೆದ್ದಿದ್ದಾರೆ ಎಂದರು

ಈ ಬಾರಿಯೂ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಹದಿನೈದು ವರ್ಷಗಳಿಂದ ಸಂಸದರಾಗಿದ್ದರೂ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹೀಗಾಗಿ ಮೋದಿಯವರ ಹೆಸರು ಹೇಳಿ ಮತ ಕೇಳುತ್ತಿದ್ದಾರೆ ಎಂದು ಕೈ ಹುರಿಯಾಳು ವಿನಯ್ ಕುಲಕರ್ಣಿ ಟೀಕಿಸಿದ್ದಾರೆ.

ಧಾರವಾಡ ಕ್ಷೇತ್ರದಲ್ಲಿ ಪ್ರಲ್ಹಾದ್ ಜೋಶಿ ವರ್ಸಸ್ ವಿನಯ್ ಕುಲಕರ್ಣಿ ನಡುವೆ ಪೈಟ್ ನಡೆಯಲಿ ಅಂತಾ ಸವಾಲು ಹಾಕುತ್ತಿದ್ದಾರೆ. ಕೈ ಅಭ್ಯರ್ಥಿಯ ಸವಾಲಿಗೆ ಕಮಲ ಪಡೆಯ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಪ್ರತಿಸವಾಲು ಹಾಕಿದ್ದಾರೆ. ಮೋದಿಯವರು ನಮ್ಮ ನಾಯಕರು ಅವರ ಹೆಸರು ಹೇಳಿ ಮತಕೇಳಲು ನನಗೆ ಯಾವುದೇ ಸಂಕೋಚವಿಲ್ಲ. ಮೋದಿ ಹೆಸರಿನಲ್ಲೇ ಚುನಾವಣೆ ಮಾಡ್ತೀನಿ. ಕಾಂಗ್ರೆಸ್‌ ಅಭ್ಯರ್ಥಿಗೆ ತಾಕತ್ತಿದ್ರೆ ರಾಹುಲ್ ಗಾಂಧಿ ಹೆಸರಲ್ಲಿ ಮತ ಕೇಳಲಿ ಎಂದರು.

ರಾಹುಲ್ ಹೆಸರು ಹೇಳಲು ನಿಮಗೇಕೆ ಸಂಕೋಚ. ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ರಿಪೋರ್ಟ್‌ ಕಾರ್ಡ್ ಜನರ ಮುಂದಿಟ್ಟಿದ್ದೇನೆ. ಪ್ರಧಾನಿ ಮೋದಿಯವರು ಹಲವು ಜನಪರ ಕೆಲಸ ಮಾಡಿದ್ದು, ನಾನು ಅವರ ಅಭಿಮಾನಿ ಅಂತ ಹೇಳಿಕೊಳ್ಳಲು ಯಾವುದೇ ಹಿಂಜರಿಕೆಯಿಲ್ಲ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ರಾಹುಲ್‌ ಗಾಂಧಿಯವರ ಹೆಸರಲ್ಲಿ ಮತಕೇಳಿ ಎಂದು ಕೈ ಅಭ್ಯರ್ಥಿ ವಿನಯ ಕುಲಕರ್ಣಿಗೆ ತಿರುಗೇಟು ನೀಡಿದ್ದಾರೆ.

ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಮಾತಿನ ಅಬ್ಬರ ಜೋರಾಗಿದೆ. ಪರಸ್ಪರ ವಾಗ್ದಾಳಿ ನಡೆಸುತ್ತಿರುವ ಹುರಿಯಾಳುಗಳು ನೀನಾ ನಾನಾ ಎನ್ನುತ್ತಿದ್ದಾರೆ. ಮತದಾರರ ಮುಂದೆ ತಮ್ಮ ವಾಕ್‌ ಚಾತುರ್ಯ ಮತ್ತು ರಾಜಕೀಯ ಪ್ರಾಭಲ್ಯವನ್ನು ಪ್ರದರ್ಶಿಸಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ. ಮತದಾರರು ಮಾತ್ರ ಎಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದು ಯಾರಿಗೆ ಮಣೆ ಹಾಕುತ್ತಾರೆ ಕಾಯ್ದು ನೋಡಬೇಕು.

Comments are closed.