ಬೆಂಗಳೂರು: ಸಾಲ ಮನ್ನಾ ಕುರಿತು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಣಕಾಸು ಇಲಾಖೆ ಅಧಿಕಾರಿಗಳು ರೈತರ ಸಾಲ ಮನ್ನಾ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾದ ಅವರ ಹೇಳಿಕೆಯು ಸತ್ಯಕ್ಕೆ ದೂರವಾದುದು.
ಈ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂದು ಸ್ವತಃ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟ ಪಡಿಸಿದ್ದಾರೆ. ಈ ಬಗ್ಗೆ ನಾನು ಕೂಡ ಅವರೊಂದಿಗೆ ಚರ್ಚಿಸಿದ್ದು, ತಾವು ಅಂಥ ಮಾತುಗಳನ್ನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯು ಇಂತಹ ಗೊಂದಲಕಾರಿ ಹೇಳಿಕೆ ನೀಡಿ ನಾಡಿನ ಜನರ ಅದರಲ್ಲೂ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಮಂಡ್ಯದ ಪಕ್ಷೇತರ ಅಭ್ಯರ್ಥಿ ಯಾವುದೇ ಮಾಹಿತಿ ಇಲ್ಲದೆ ಜನರ ದಿಕ್ಕು ತಪ್ಪಿಸುವ ಮಾತಾಡಿದ್ದಾರೆ. ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳ 15.58 ಲಕ್ಷ ರೈತರಿಗೆ 6223.48 ಕೋಟಿ ರೂ. ಸಾಲ ಮನ್ನಾ ಮೊತ್ತ ಮಂಜೂರು ಮಾಡಲಾಗಿದೆ. 2019-20 ರ ಆಯವ್ಯಯದಲ್ಲಿ 12000 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಈ ಮಾಹಿತಿ ವೆಬ್ ಸೈಟಿನಲ್ಲಿಯೂ ಲಭ್ಯವಿದೆ ಎಂದು ಸಿಎಂ ಮಾಹಿತಿ ನೀಡಿದರು.
ಕೃಷಿಕರ ಕುರಿತು ನನ್ನ ಬದ್ಧತೆಯ ಕುರಿತು ಅವರು ಮಾತನಾಡುವ ಅಗತ್ಯವಿಲ್ಲ. ಕಳೆದ ಎರಡು ಆಯವ್ಯಯಗಳಲ್ಲಿ ಘೋಷಿಸಿ, ಜಾರಿಗೊಳಿಸುತ್ತಿರುವ ದೂರದೃಷ್ಟಿಯ ಕಾರ್ಯಕ್ರಮಗಳೇ ನಮ್ಮ ರೈತಪರ ಕಾಳಜಿಗೆ ಸಾಕ್ಷಿ. ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ನಮ್ಮ ಮೈತ್ರಿ ಸರ್ಕಾರ ಕೈಗೊಂಡಿರುವ ಕ್ರಮ ಸಾಲ ಮನ್ನಾ ಒಂದೇ ಅಲ್ಲ. ಬಿತ್ತನೆಯಿಂದ ಬೆಳೆ ಸಂಸ್ಕರಣೆ, ಸಂಗ್ರಹಣೆವರೆಗೆ ಎಲ್ಲ ಹಂತದಲ್ಲೂ ನೆರವು ನೀಡಲು ನಮ್ಮ ಸರ್ಕಾರ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 46 ಸಾವಿರ ಕೋಟಿ ರೂ. ಗಳಿಗೂ ಅಧಿಕ ಮೊತ್ತವನ್ನು ಒದಗಿಸಿದೆ ಎಂದು ಅವರು ತಿಳಿಸಿದ್ದಾರೆ.
ಸುಮ್ಮನೆ ಹುರುಳಿಲ್ಲದ ಗಂಭೀರ ಆರೋಪ ಮಾಡುವ ಮುನ್ನಾ ವಸ್ತು ಸ್ಥಿತಿ ಅರಿತು ಮಾತನಾಡುವುದು ಸೂಕ್ತ ಎಂದು ಸಿಎಂ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನೆನ್ನೆ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು, ಸಾಲ ಮನ್ನಾ ಯೋಜನೆ ಬಗ್ಗೆ ಮಾತನಾಡಿದ್ದರು. ಒಮ್ಮೆ ಅಂಬರೀಷ್ ಅವರು 45000 ಕೋಟಿ ಸಾಲ ಮನ್ನಾ ಮಾಡೋಕೆ ಆಗುತ್ತಾ ಎಂದು ಆರ್ಥಿಕ ಇಲಾಖೆ ಕಾರ್ಯದರ್ಶಿಗೆ ಕೇಳಿದ್ರು. ಆಗ ಅವರು ಇದು ಸಾಧ್ಯವಾಗಲ್ಲ. ಸಾಲ ಮನ್ನಾ ಸುಳ್ಳು ಭರವಸೆ ಆಗುತ್ತೆ. ನಿಮ್ಮ ಫ್ರೆಂಡ್ ಆಗಿರುವ ಸಿಎಂಗೆ ಹೇಳಿ ಎಂದು ಅಂಬರೀಷ್ಗೆ ಹೇಳಿದ್ರು ಎಂದು ಸುಮಲತಾ ಹೇಳಿದ್ದರು.
Comments are closed.