ಕರ್ನಾಟಕ

ಬಿಜೆಪಿ ವಿರೋಧಿಗಳು ದೇಶದ್ರೋಹಿಗಳಲ್ಲ: ಅಡ್ವಾಣಿ

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿ ಹಿರಿಯ ನಾಯಕ ಎಲ್​​​.ಕೆ ಅಡ್ವಾಣಿ ತಮ್ಮ ಪಕ್ಷಕ್ಕೆ ಕಿವಿ ಮಾತು ಹೇಳಿದ್ದಾರೆ. ದೇಶ ಮೊದಲು, ಪಕ್ಷ ನಂತರ. ಅಲ್ಲದೇ ನಮ್ಮ ಸಿದ್ದಾಂತ ಒಪ್ಪದವರನ್ನು ಯಾವುದೇ ಕಾರಣಕ್ಕೆ ದೇಶದ್ರೋಹಿ ಎಂದು ಕರೆಯಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯಕ್ಕೆ ಗೌರವ ನೀಡಿ ಎನ್ನುವ ಹಿತನುಡಿ ಬಿಜೆಪಿಗೆ ಹೇಳಿದ್ದಾರೆ.

ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿಯವರ ಭದ್ರಕೋಟೆ ಎಂದೇ ಕರೆಯಲ್ಪಡುವ ಗುಜರಾತಿನ ಗಾಂಧಿನಗರ ಲೋಕಸಭೆ ಕ್ಷೇತ್ರದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕಣಕ್ಕಿಳಿದಿದ್ದಾರೆ. ಎಲ್​.ಕೆ ಅಡ್ವಾಣಿ ಮತ್ತು ಅಟಲ್‌ ಬಿಹಾರಿ ವಾಜಪೇಯಿ ತರಹದ ಧೀಮಂತ ನಾಯಕರೇ ಸ್ಪರ್ಧಿಸಿ ಗೆದ್ದು ಸಂಸದರಾದ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ದೊರೆತಿದ್ದಕ್ಕೆ ಅಮಿತ್​ ಶಾ ಸಂತಸ ವ್ಯಕ್ತಪಡಿಸಿದ್ದರು.

ಈ ಬೆನ್ನಲ್ಲೇ ಬಿಜೆಪಿ ಪಕ್ಷದ ಹಿರಿಯ ಮುತ್ಸದ್ದಿ ಎಲ್​​​.ಕೆ ಅಡ್ವಾಣಿ (91) ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ ಬ್ಲಾಗ್​​ನಲ್ಲಿ ಬರೆದುಕೊಂಡಿರುವ ಅವರು, ಬಿಜೆಪಿ ಎಂದೂ ಸೈದ್ದಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದವರನ್ನು ತನ್ನ ಶತ್ರು ಎಂದು ಭಾವಿಸಿರಲಿಲ್ಲ. ನಮ್ಮ ಭಾರತೀಯ ರಾಷ್ಟ್ರೀಯತಾವಾದದ ಪ್ರಕಾರ ನಮ್ಮ ಸಿದ್ದಾಂತ ಒಪ್ಪದ ಯಾರನ್ನು ದೇಶದ್ರೋಹಿ ಎಂದು ಕರೆಯುವ ಹಾಗಿಲ್ಲ. ಬಿಜೆಪಿ ವ್ಯಕ್ತಿ ಸ್ವಾತಂತ್ರದಲ್ಲಿ ನಂಬಿಕೆಯಿರಿಸಿತ್ತು. ಈ ತತ್ವಕ್ಕೆ ಬಿಜೆಪಿ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ.

ಹಾಗೆಯೇ ತಮ್ಮನ್ನು 1991ರಿಂದ ಇಲ್ಲಿಯವರೆಗೂ ಆರು ಬಾರಿ ಸಂಸದರನ್ನಾಗಿ ಲೋಕಸಭೆಗೆ ಕಳಿಸಿದ ಗಾಂಧಿನಗರ ಜನತೆಗೆ ಎಲ್​​​.ಕೆ ಅಡ್ವಾಣಿಯವರು ಧನ್ಯವಾದ ತಿಳಿಸಿದ್ದಾರೆ. ನನ್ನನ್ನು ಆರು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ ಗಾಂಧಿನಗರ ಜನತೆಗೆ ಧನ್ಯವಾದ. ನಿಮ್ಮ ಪ್ರೀತಿಗೆ ನಾನು ಎಂದೆಂದಿಗೂ ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ಧಾರೆ.

1984ರ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 2 ಲೋಕಸಭಾ ಕ್ಷೇತ್ರ ಗೆದ್ದಿತ್ತು. ಈ ಸಂದರ್ಭದಲ್ಲಿ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಬಳಿಕ ಮೊದಲ ಬಾರಿಗೆ 1991ರಲ್ಲಿ ಗೆದ್ದ ಎಲ್​​​.ಕೆ ಅಡ್ವಾಣಿ ನಂತರದಲ್ಲಿ ಸತತವಾಗಿ ಆರು ಬಾರಿ ಗೆದ್ದರು. ಗಾಂಧಿನಗರ ಕ್ಷೇತ್ರದಿಂದ ಗೆದ್ದು ಬಂದ ನಂತರದಲ್ಲಿ ಆಯೋಧ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಒತ್ತಾಯಿಸಿ ದೇಶಾದ್ಯಂತ ಹಿಂದೂ ರಥ ಯಾತ್ರೆ ನಡೆಸಿದರು.

ಕೊನೆಗೆ ‘ದೇಶ ಮೊದಲು, ಪಕ್ಷ ನಂತರ, ನಾನೆಂಬುದು ಕಡೆಯದಾಗಿರಬೇಕು’ ಎಂಬ ಪಾಠವನ್ನು ಜೀವನ ಕಲಿಸಿದೆ. ಇದನ್ನೇ ನಾನು ಜೀವನದಲ್ಲಿ ಅನುಸರಿಸಿಕೊಂಡಿದ್ದೇನೆ, ನೀವು ಕೂಡ ಇದೇ ತತ್ವವನ್ನು ಅಳವಡಿಸಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ ಎಂದು ಪುನರುಚ್ಚರಿಸಿದ್ದಾರೆ.

Comments are closed.