ಕರ್ನಾಟಕ

ನನ್ನ ತಂದೆ ಡ್ರೈವರ್​​​​, ನಾನು ಡ್ರೈವರ್​​​ ಮಗ, ನನಗೆ ಬಿಸಿಲು ಹೊಸದಲ್ಲ’: ಕುಮಾರಸ್ವಾಮಿಗೆ ಯಶ್​​ ತಿರುಗೇಟು!

Pinterest LinkedIn Tumblr


ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾರ ಪರ ನಟ ಯಶ್​​​ ಭರ್ಜರಿ ಮತಬೇಟೆ ಆರಂಭಿಸಿದ್ಧಾರೆ. ಎರಡನೇ ದಿನವೂ ಪ್ರಚಾರ ಮುಂದುವರಿಸಿದ ಯಶ್​​ ಅವರು, ಸಿಎಂ ಎಚ್​​.ಡಿ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ಧಾರೆ. “ಇವು ಶೋಕಿ ಎತ್ತುಗಳು ಬಿಸಿಲಿಗೆ ಬರಲ್ಲ” ಎಂಬ ಸಿಎಂ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಯಶ್​​, ನಮಗೆ ಬಿಸಿಲು ಹೊಸದೇನಲ್ಲ ಎಂದಿದ್ಧಾರೆ. ಅಷ್ಟೇ ಅಲ್ಲದೇ ನಮ್ಮಪ್ಪ ಡ್ರೈವರ್​​​, ನಾನು ಡ್ರೈವರ್​​ ಮಗ. ಹೀಗಾಗಿ ನಮಗೆ ಬಿಸಿಲು ಹೊಸದಲ್ಲ ಎನ್ನುವ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ಧಾರೆ.

ಪ್ರಚಾರದ ವೇಳೆ ನ್ಯೂಸ್​​-18 ಕನ್ನಡ ಜತೆಗೆ ಮಾತಾಡಿದ ನಟ ಯಶ್​​, ಬಿಸಿಲಿಗೆ ಬರಬೇಕೆಂದು ತೋರಿಸಿಕೊಡೋರು ಜನ. ನಮಗೆ ಬಿಸಿಲು ಹೊಸದೇನಲ್ಲ. ರೋಡ್ನಲ್ಲಿ ಗಲ್ಲಿ ಕ್ರಿಕೆಟ್, ಬುಗುರಿ ಆಡಿ ಬೆಳೆದವನು. ನಾನು ಡ್ರೈವರ್ ಮಗ, ನಮಗೆ ಬಿಸಿಲು ಹೊಸದಲ್ಲ. ಸರ್ಕಾರಿ ಬಸ್ಸಲ್ಲಿ ಓಡಾಡಿಯೇ ಇಲ್ಲಿಗೆ ಬಂದವರು ನಾವು. ಮತ್ತೆ ಬಿಸಿಲಿಗೆ ಬರೋಕೆ ನನಗೇನೂ ಸಮಸ್ಯೆ ಇಲ್ಲ. ಆದರೆ, ಹುಟ್ಟಿದಾಗಿನಿಂದ ನೆರಳಲ್ಲೇ ಇದ್ದವರು ಯಾರು? ಹೀಗೆ ಬೆಳೆದವರು ಮಾತ್ರ ಬಿಸಿಲು ಬಗ್ಗೆ ಯೋಚಿಸಬೇಕು ಎಂದು ಸಿಎಂ ಹೇಳಿಕೆಗೆ ತಪರಾಕಿ ಬಾರಿಸಿದರು.

ಇನ್ನು ಈ ಅಖಾಡದಲ್ಲಿ ಸಿನಿಮಾದವರು ಯಾರೆಲ್ಲಾ ಇದ್ದಾರೇ ಎಂದು ಯೋಚಿಸಲಿ. ನಾನೋಬ್ಬನೇ ಇಲ್ಲಿ ಪ್ರಚಾರ ಮಾಡುತ್ತಿಲ್ಲ. ಸಿಎಂ ಯಾರಿಗೆ ಹೇಳಿಕೆ ಕೊಟ್ಟಿದ್ದಾರೆ ಅಂತ ನೀವೇ ಆಲೋಚಿಸಿ. 6 ಕೋಟಿ ಜನ ಆಯ್ಕೆ ಮಾಡಿರೋ ಸಿಎಂ ಅವರು. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೋ ನನಗಂತು ಅರ್ಥವಾಗಲಿಲ್ಲ. ನಮಗೆ ಹೋದ ಕಡೆಯೆಲ್ಲಾ ಒಳ್ಳೆಯ ಬೆಂಬಲ ಸಿಗುತ್ತಿದೆ. ಜನರನ್ನು ನೇರವಾಗಿ ಭೇಟಿ ಮಾಡುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗ್ತಿದ್ದೇವೆ ಎಂದರು.

ಈ ಹಿಂದೆ ಮಾತಾಡಿದ್ದ ಸಿಎಂ ಎಚ್.ಡಿ ಕುಮಾರಸ್ವಾಮಿ ನಟರಾದ ದರ್ಶನ್ ಹಾಗೂ ಯಶ್ ವಿರುದ್ಧ ಸಿಡಿದೆದ್ದಿದ್ದರು. “ಜನರು ದುಡಿಯುವ ಎತ್ತುಗಳನ್ನು ಉಳಿಸಬೇಕು. ಮೇವು ಹಾಕುವುದು ನಿಮ್ಮ ಕರ್ತವ್ಯ. ಈಗ ಹಲವಾರು ಎತ್ತುಗಳು ಬರುತ್ತೆ ಎಂದು ಹೇಳುತ್ತಾರೆ. ಆದರೆ ಈ ಎತ್ತುಗಳಿಗೆ ಹೊಲ ಉಳುವುದಕ್ಕೆ ಬರುವುದಿಲ್ಲ. ಕಳ್ಳ ಎತ್ತುಗಳು. ನೀವು ಹಾಕಿರುವ ಬೆಳೆಯನ್ನು ತಿಂದುಕೊಂಡು ಹೋಗಲು ಬರುತ್ತಿವೆ ಎಂದು ಕುಹಕವಾಡಿದ್ದರು.

ಹಾಗೆಯೇ ದುಡಿಯುವ ಎತ್ತುಗಳು ಯಾವುದು? ಕಳ್ಳ ಎತ್ತುಗಳ ಯಾವುದು? ಎನ್ನುವುದು ನೀವೇ ಯೋಚನೆ ಮಾಡಿ. ಈಗ ನಿಮ್ಮ ಅಭಿವೃದ್ಧಿಗೆ ನಾವು ಒಂದಾಗಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ. “ಒಹೋ ಇವು ಜೋಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ. ರೈತರು ಬೆಳೆದ ಪೈರನ್ನು ಅರ್ಧ ರಾತ್ರಿ ಹೋಗಿ ತಿನ್ನುವ ಎತ್ತುಗಳು. ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ದರು? ಅಮ್ಮನ ಮೇಲಿನ ಪ್ರೀತಿಯಿಂದ ಅವರನ್ನು ಉಳಿಸಲು ಬಂದಿದ್ದಾರಲ್ಲ. ಅಂದು ನಡೆದ ದುರಂತದಲ್ಲಿ ನೀರಲ್ಲಿ ಬಿದ್ದಿದ್ದ ಶವಗಳನ್ನು ತೆಗೆಯಲು ಅವರು ಬಂದಿದ್ದರಾ” ಎಂದು ಪ್ರಶ್ನಿಸಿ ಸಿಎಂ ದರ್ಶನ್ ಮತ್ತು ಯಶ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

Comments are closed.