ಕರ್ನಾಟಕ

ನಿಖಿಲ್ ನಾಮಪತ್ರ ಗೊಂದಲ: ಚುನಾವಣೆ ಮುಗಿಯುವವರೆಗೂ ದೂರು ಅಪ್ರಯೋಜಕ?

Pinterest LinkedIn Tumblr


ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರದ ದೋಷದ ವಿರುದ್ಧ ಸುಮಲತಾ ಅಂಬರೀಷ್ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಜಿಲ್ಲಾಡಳಿತವನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ ಎಂದೂ ಸುಮಲತಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಅವರು ಮನವಿ ಮಾಡಿದ್ದಾರೆ. ಆದರೆ, ಸುಮಲತಾ ನೀಡಿರುವ ದೂರಿನಿಂದ ನಿಖಿಲ್ ಅವರಿಗೆ ಅಪಾಯ ಕಾದಿದೆಯಾ ಎಂಬ ಸಹಜ ಪ್ರಶ್ನೆ ಏಳುತ್ತದೆ. ಆದರೆ, ಖ್ಯಾತ ವಕೀಲ ಎಸ್. ಶ್ಯಾಮಸುಂದರ್ ಪ್ರಕಾರ, ಚುನಾವಣೆ ಮುಗಿಯುವವರೆಗೂ ನಾಮಪತ್ರ ವಿಚಾರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.

ರಿಟರ್ನಿಂಗ್ ಆಫೀಸರ್ ಅವರು ನಾಮಪತ್ರ ಅಂಗೀಕರಿಸಿದ ನಂತರ ಅದನ್ನು ಮರುಪರಿಶೀಲಿಸುವ ಸಾಧ್ಯತೆ ಇಲ್ಲ. ಚುನಾವಣೆ ಮುಗಿದ ನಂತರವಷ್ಟೇ ಅದರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಶ್ಯಾಮ್ ಸುಂದರ್ ಹೇಳುತ್ತಾರೆ. ನಾಮಪತ್ರ ಅಂಗೀಕರಿಸುವುದು ಹಾಗೂ ತಿರಸ್ಕರಿಸುವುದು ಚುನಾವಣಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು. ಅರ ನಿರ್ಧಾರವನ್ನು ಚುನಾವಣೆ ಮುಗಿಯುವವರೆಗೂ ಪ್ರಶ್ನಿಸುವಂತಿಲ್ಲ ಎಂದವರು ಅಭಿಪ್ರಾಯಪಟ್ಟರು.

ಇದೇ ವೇಳೆ, ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರೂ ಈ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದು, ನಿಖಿಲ್ ನಾಮಪತ್ರ ಅಂಗೀಕರಿಸುವ ಚುನಾವಣಾಧಿಕಾರಿಗಳ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಾಮಪತ್ರದಲ್ಲಿ ಯಾವುದೇ ದೋಷವಾಗಿಲ್ಲ. ಚುನಾವಣಾಧಿಕಾರಿಗಳು ನಿಯಮದ ಪ್ರಕಾರವೇ ನಡೆದುಕೊಂಡಿದ್ದಾರೆ. ಒಂದು ವೇಳೆ ತಪ್ಪಾಗಿದ್ದರೆ ಕೋರ್ಟ್​ಗೆ ಹೋಗುವ ಅವಕಾಶ ಇದೆ. ಯಾರು ಬೇಕಾದರೂ ಕೋರ್ಟ್​​ನಲ್ಲಿ ಇದನ್ನು ಪ್ರಶ್ನಿಸಬಹುದು ಎಂದು ಹೆಚ್​ಡಿಕೆ ಹೇಳಿದರು.

ನಿಖಿಲ್ ನಾಮಪತ್ರ ವಿವಾದದ ಹಿನ್ನೆಲೆಯಲ್ಲೇ ಇವತ್ತು ಮಂಡ್ ಜಿಲ್ಲಾಧಿಕಾರಿ ಕಚೇರಿಯಲ್ಲಿ 2 ತಾಸುಗಳ ಕಾಲ ಸಭೆ ಕೂಡ ನಡೆಯಿತು. ಸಭೆಯ ನಂತರ ಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ನಾಮಪತ್ರ ಕುರಿತು ಪ್ರಶ್ನಿಸಲು ಕೋರ್ಟ್ ಮುಖಾಂತರವಷ್ಟೇ ಸದ್ಯಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಒಂದು ಬಾರಿ ರಿಟರ್ನಿಂಗ್ ಆಫೀಸರ್ ನಾಮಪತ್ರ ಸ್ಕ್ರೂಟಿನಿ ಮಾಡಿ ಮುಗಿಸಿದ ಬಳಿಕ ಆರೋಪ ಕೇಳಿಬಂದರೆ ಅದನ್ನು ಎಲೆಕ್ಷನ್ ಪೆಟಿಶನ್ ಮೂಲಕ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿದೆ. ಆಡಳಿತಾತ್ಮಕ ಅಡಚಣೆ ಇದ್ದರಷ್ಟೇ ನಾವು ಕ್ರಮ ಜರುಗಿಸಬಹುದು. ನಾಮಪತ್ರ ಕುರಿತು ಗೊಂದಲಗಳಿದ್ದರೆ ನ್ಯಾಯಾಲಯದ ಮುಖಾಂತರವಷ್ಟೇ ಪ್ರಶ್ನಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸ್ಪಷ್ಟಪಡಿಸಿದರು. ಹಾಗೆಯೇ, ಜಿಲ್ಲಾಧಿಕಾರಿ ವಿರುದ್ಧ ಕೇಳಿಬಂದಿರುವ ಪಕ್ಷಪಾತದ ಆರೋಪದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಂಜೀವ್ ಕುಮಾರ್ ಭರವಸೆ ನೀಡಿದರು.

ಹಾಗೆಯೇ, ಮಂಡ್ಯ ಚುನಾವಣಾ ಕಣದಲ್ಲಿರುವ ರೆಕಗ್ನೈಸ್ಡ್ ಪಕ್ಷಗಳೆಂದರೆ ಜೆಡಿಎಸ್ ಮತ್ತು ಬಿಎಸ್​ಪಿ ಮಾತ್ರವೇ. ಇಲ್ಲಿ ಆಲ್ಫಬೆಟಿಕಲ್ ಆರ್ಡರ್​ನಲ್ಲಿ ಪಟ್ಟಿ ಮಾಡಿದ್ದಾರೆ ಎಂದೂ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಇವಿಎಂ ಮೆಷೀನ್​ನ ಆರ್ಡರ್​ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಮೊದಲು ಬಂದಿದೆ. ಬಿಎಸ್​ಪಿ ಪಕ್ಷದ ಅಭ್ಯರ್ಥಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಬಗ್ಗೆ ಬಿಎಸ್​ಪಿ ಕೂಡ ಆಕ್ಷೇಪ ಎತ್ತಿದೆ. ತಮ್ಮದು ರಾಷ್ಟ್ರಿಯ ಪಕ್ಷವಾಗಿದ್ದು, ತಮ್ಮ ಹೆಸರು ಮೊದಲು ಬರಬೇಕಿತ್ತು ಎಂಬುದು ಬಿಎಸ್​ಪಿ ಅಭ್ಯರ್ಥಿಯ ವಾದವಾಗಿದೆ.

ಮಂಡ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದಾರೆ. ಬಿಜೆಪಿ ಯಾವುದೇ ಅಭ್ಯರ್ಥಿ ಹಾಕದೇ ಸುಮಲತಾ ಅಂಬರಿಷ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. ಉತ್ತಮ ಪ್ರಜಾಕೀಯ ಪಕ್ಷ ಮೊದಲಾದ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಲತಾ ಅಂಬರೀಷ್ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಸುಮಲತಾ ಹೆಸರಿನ ಇನ್ನೂ ಮೂವರು ಪಕ್ಷೇತರರು ಕಣದಲ್ಲಿರುವುದು ಆಸಕ್ತಿ ಮೂಡಿಸಿದೆ. ಇನ್ನೂ ಕುತೂಹಲದ ವಿಷಯವೆಂದರೆ ಸುಮಲತಾ ಹೆಸರಿನ ಅಭ್ಯರ್ಥಿಗಳ ಹೆಸರು ಇವಿಎಂ ಮೆಷೀನ್​ನಲ್ಲಿ ಅಕ್ಕಪಕ್ಕದಲ್ಲೇ ಇರಿಸಲಾಗಿದೆ. ಸುಮಲತಾ ಅಂಬರೀಷ್ ಅವರಿಗೆ ರೈತ ಕಹಳೆ ಊದುತ್ತಿರುವ ಚಿಹ್ನೆ ಸಿಕ್ಕಿದೆ.

Comments are closed.