
ಬೆಂಗಳೂರು: ಮೈತ್ರಿ ಮೂಲಕ ಚುನಾವಣೆ ಎದುರಿಸಲು ಸಜ್ಜಾಗಿರುವ ಮೈತ್ರಿ ಪಕ್ಷಗಳು ಇಂದು ಬೃಹತ್ ಸಮಾವೇಶಕ್ಕೆ ಸಿದ್ಧತೆಯಲ್ಲಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರದ ರಣಕಹಳೆ ಮೊಳಗಿಸಲಿದ್ದಾರೆ.
ಈ ಹಿಂದೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬೃಹತ್ ಸಮಾವೇಶ ಕುರಿತು ಮಾತನಾಡಿದ ನಾಯಕರು, ರಾಹುಲ್ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ನಡೆಸುವ ಕುರಿತು ತಿಳಿಸಿದ್ದರು. ಅದರಂತೆ ಇಂದು ನೆಲಮಂಗಲದ ಬಿಐಇಸಿ ಮೈದಾನದಲ್ಲಿ ಸಮಾವೇಶ ನಡೆಸಲು ಸಕಲ ಸಿದ್ಧತೆ ನಡೆಸಿದ್ದಾರೆ.
ಇಂದು ಸಿಎಂ ಕುಮಾರಸ್ವಾಮಿಯವರೇ ಖುದ್ದು, ಮೈದಾನಕ್ಕೆ ಭೇಟಿ ನೀಡಿ ಸಮಾವೇಶದ ಸಿದ್ಧತೆ ನಡೆಸಿದರು. ಕಾಂಗ್ರೆಸ್ ಶಾಸಕ ಎಸ್ ಟಿ ಸೋಮಶೇಖರ್, ಮುನಿರತ್ನ ಸ್ಥಳದಲ್ಲಿ ಮೊಕ್ಕ ಹೂಡಿದ್ದು ಅಂತಿಮ ಹಂತದ ಸಿದ್ದತೆ ಕಾರ್ಯ ನಡೆಸುತ್ತಿದ್ದಾರೆ.
ರಾಜ್ಯದಲ್ಲಿ ರಾಹುಲ್ ಮೊದಲ ಪ್ರಚಾರ
ಚುನಾವಣೆ ಘೋಷಣೆಯಾದ ಬಳಿಕ ರಾಜ್ಯದಲ್ಲಿ ರಾಹುಲ್ ಮೊದಲ ಪ್ರಚಾರ ಇದಾಗಿದೆ. ರಾಹುಲ್ ಪ್ರಚಾರ ಮಾಡಬೇಕು ಎಂಬುದು ಜೆಡಿಎಸ್ ನಾಯಕರ ಪಟ್ಟು ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷ ದೊಡ್ಡ ಮಟ್ಟದಲ್ಲಿ ಸಮಾವೇಶ ಆಯೋಜನೆ ಮಾಡಿದೆ.
ಸಭೆಯಲ್ಲಿ ರಾಹುಲ್ ಗಾಂಧಿ, ದೇವೇಗೌಡರು, ಸಿಎಂ ಎಚ್ ಡಿಕುಮಾರಸ್ವಾಮಿ, ದಿನೇಶ್ ಗುಂಡೂರಾವ್ ಸೇರಿದಂತೆ ಎರಡು ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ. ರಾಹುಲ್ ಭಾಷಣ ಕೇಳಲು ಲಕ್ಷಾಂತರ ಕಾರ್ಯಕರ್ತರು ಕೂಡ ಆಗಮಿಸಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಆರಂಭವಾಗುವ ಸಮಾವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಈಗಾಗಲೇ ಸಿಎಂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ರಾಹುಲ್ ಪ್ರಚಾರಕ್ಕೆ ಈಗಾಗಲೇ ಹಾಸನದಲ್ಲಿ ರೇವಣ್ಣ ಅವರು ಕೂಡ ಬೇಡಿಕೆ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಅನೇಕ ಕಡೆ ಅವರು ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
ಈ ಬಾರಿ ಚುನಾವಣೆಯಲ್ಲಿ ಪ್ರಚಾರ ನಡೆಸಲಿರುವ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕೂಡ ಪಕ್ಷ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ ಸಿಂಗ್, ಪ್ರಿಯಾಂಕಾ ವಾದ್ರಾ, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಖುಶ್ಬೂ, ಸಚಿನ್ ಪೈಲಟ್, ಗುಲಾಂ ನಬಿ ಆಜಾದ್ ಸೇರಿ 20 ಸ್ಟಾರ್ ಪ್ರಚಾರಕರು ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
Comments are closed.