ಕರ್ನಾಟಕ

ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡರ ಮನವೊಲಿಸಲು ಯತ್ನ​; ದೇವೇಗೌಡರೇ ನಾಮಪತ್ರ ವಾಪಾಸ್​ ಪಡೆಯಲಿ ಎಂದ ಅಭ್ಯರ್ಥಿ

Pinterest LinkedIn Tumblr


ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಎಚ್​.ಡಿ. ದೇವೇಗೌಡರ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ಮುದ್ದಹನುಮೇಗೌಡರ ಮನವೊಲಿಸಲು ಕೈ ನಾಯಕರು ಹರಸಾಹಸ ಪಡುತ್ತಿದ್ದಾರೆ. ಆದರೆ, ಸಂಜೆಯೊಳಗೆ ನಾನು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು ಎನ್ನುವ ಮೂಲಕ ಮುದ್ದಹನುಮೇಗೌಡರು ಕಾಂಗ್ರೆಸ್​ ನಾಯಕರ ತಲೆನೋವು ಹೆಚ್ಚಿಸಿದ್ದಾರೆ.

ಇಂದು ನಾಮಪತ್ರ ವಾಪಾಸ್​ ಪಡೆಯಲು ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡರು ನಾಮಪತ್ರ ವಾಪಾಸ್​ ಪಡೆಯಲಿದ್ದಾರಾ ಅಥವಾ ದೇವೇಗೌಡರ ವಿರುದ್ಧ ಸಮರ ಸಾರಲಿದ್ದಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಮುದ್ದಹನುಮೇಗೌಡರು ಇಂದು ಬೆಂಬಲಿಗರ ಸಭೆ ಕರೆದಿದ್ದಾರೆ. ಈಗಾಗಲೇ ಸಭೆ ಮುಗಿದಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಮುದ್ದಹನುಮೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ದಿನೇಶ್ ಗುಂಡೂರಾವ್​ ಹೇಳಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಮುದ್ದಹನುಮೇಗೌಡರನ್ನು ಗೌರವಯುತವಾಗಿ ನೋಡಿಕೊಳ್ಳುತ್ತೇವೆ. ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ. ನಾಮಪತ್ರ ವಾಪಾಸ್ ಪಡೆಯುವಂತೆ ಕೇಳಿಕೊಂಡಿದ್ದೇನೆ. ಅವರ ಸ್ಪರ್ಧೆಯಿಂದ ನೆರೆಯ ಕ್ಷೇತ್ರಗಳಲ್ಲೂ ತಪ್ಪು ಸಂದೇಶ ರವಾನೆಯಾಗುತ್ತದೆ. ಅವರು ಸರಿಯಾದ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.

ಇನ್ನು ಡಿಸಿಎಂ ಡಾ.ಜಿ. ಪರಮೇಶ್ವರ್​ ಕೂಡ ಈ ವಿಚಾರವಾಗಿ ಮುದ್ದಹನುಮೇಗೌಡರೊಂದಿಗೆ ಚರ್ಚೆ ನಡೆಸಿದ್ದು, ಚುನಾವಣೆ ಪ್ರಾರಂಭವಾದಾಗಿನಿಂದಲೂ ಜೆಡಿಎಸ್​ನೊಂದಿಗೆ ಸೇರಿ ಚುನಾವಣೆ ಎದುರಿಸುವ ತೀರ್ಮಾನ ಮಾಡಿದ್ದೇವೆ. ಸೀಟು ಹಂಚಿಕೆ ಚರ್ಚೆ ಆದಾಗಿಂದ ಜೆಡಿಎಸ್ ನಾಯಕರು ತುಮಕೂರು ಕ್ಷೇತ್ರವನ್ನು ಕೇಳಿದಾಗ ನನಗೆ ಆತಂಕ ಆಗಿತ್ತು. ಮುದ್ದಹನುಮೇಗೌಡ 2004ರಿಂದ ಇಲ್ಲಿಯವರೆಗೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ ಜನ ಮನ್ನಣೆ ಗಳಿಸಿದ್ದರು. ಈ ಚುನಾವಣೆಯಲ್ಲಿ ಅವರು ಮತ್ತೆ ಗೆದ್ದು ಬರ್ತಾರೆ ಎಂಬ ವಿಶ್ವಾಸವಿತ್ತು. ಆದರೆ, ಜೆಡಿಎಸ್​ಗೆ ತುಮಕೂರು ಬಿಟ್ಟುಕೊಡಬೇಕಾದಾಗ ನಮಗೆ ಆತಂಕವಾಗಿತ್ತು. ಮುದ್ದಹನುಮೇಗೌಡರು ಸ್ವಾಭಾವಿಕವಾಗಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ನಾಮಪತ್ರ ಹಾಕಿದ್ದಾರೆ. ಅವರ ಮನವೊಲಿಸುವಂತೆ ಕೆ.ಸಿ. ವೇಣುಗೋಪಾಲ್, ರಾಹುಲ್ ಗಾಂಧಿ ಇಬ್ಬರೂ ಸೂಚನೆ ನೀಡಿದ್ದರು. ಅವರ ನಿರ್ಧಾರವೇನೆಂದು ನೋಡುತ್ತೇವೆ ಎಂದಿದ್ದಾರೆ.

ಮುದ್ದಹನುಮೇಗೌಡರ ನಿರ್ಧಾರವೇನು?:

ನಿನ್ನೆ ಸಂಜೆ ಸಿದ್ದರಾಮಯ್ಯ ಕೂಡ ಮುದ್ದಹನುಮೇಗೌಡರ ಮನವೊಲಿಸಲು ಪ್ರಯತ್ನಿಸಿದ್ದರು. ಇಂದು ಕಾಂಗ್ರೆಸ್​ ನಾಯಕರು ಸಂಧಾನಕ್ಕೆ ಮುಂದಾಗಿದ್ದರು. ಆದರೆ, ಅದಾವುದಕ್ಕೂ ಸೊಪ್ಪು ಹಾಕದ ಮುದ್ದಹನುಮೇಗೌಡ, ನಾನು ನಾಮಪತ್ರ ವಾಪಾಸ್​ ಪಡೆಯಲು ಸಾಧ್ಯವೇ ಇಲ್ಲ. ಬೇಕಿದ್ದರೆ ಎಚ್​.ಡಿ. ದೇವೇಗೌಡರೇ ಕಣದಿಂದ ಹಿಂದೆ ಸರಿಯಲಿ ಎಂದು ಕಡ್ಡಿ ತುಂಡು ಮಾಡಿದಂತೆ ತಮ್ಮ ನಿರ್ಧಾರ ತಿಳಿಸಿದ್ದಾರೆ.

ದೇವೇಗೌಡರಿಗೆ ಆರೋಗ್ಯ ಸಮಸ್ಯೆ ಇದೆ, ಓಡಾಡಲೂ ಕಷ್ಟ. ಕ್ಷೇತ್ರದಲ್ಲಿ ಪ್ರಚಾರ ಮಾಡೋದೂ ಕೂಡ ಕಷ್ಟ ಇದೆ.ಹೀಗಾಗಿ ದೇವೇಗೌಡರೇ ನಾಮಪತ್ರ ವಾಪಸ್ ಪಡೆಯಲಿ. ನಾನು ಸಂಸದ, ಅವರು ಬೆಂಬಲಿಸಿದರೆ ಗೆಲುವು ಸುಲಭ. ಇದರಲ್ಲಿ ಪ್ರತಿಷ್ಠೆ ವಿಚಾರ ಏನಿಲ್ಲ.ಬೆಂಬಲಿಗರ ಅನಿಸಿಕೆ ಪ್ರಕಾರ ನಾಮಪತ್ರ ಸಲ್ಲಿಸಿದ್ದೆ.ನನ್ನನ್ನು ರಾಜಕೀಯವಾಗಿ ಬೆಳಸಿದ್ದು ಬೆಂಬಲಿಗರು. ಕಳೆದ ಏಳೆಂಟು ದಿನಗಳಿಂದ ಸಾವಿರಾರು ಮಂದಿ ನೋವು ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ಮುಖಂಡರಿಗೆ ನಮ್ಮ ನಾಯಕರ ಅಭಿಪ್ರಾಯ ತಿಳಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ಇಂದು 3 ಗಂಟೆಯ ಒಳಗೆ ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Comments are closed.