ಕರ್ನಾಟಕ

ಮುಸ್ಲಿಮರ ಮತ ಬೇಡವೆಂದಿದ್ದ ಅನಂತಕುಮಾರ ಹೆಗಡೆ, ಈಗ ಅವರ ಓಲೈಕೆಯಲ್ಲೇ ತೊಡಗಿದ್ದಾರೆ: ಜೆಡಿಎಸ್‌

Pinterest LinkedIn Tumblr


ಶಿರಸಿ: ಮುಸ್ಲಿಮರ ವೋಟು ಬೇಡ ಎಂದ ಸಚಿವ ಅನಂತಕುಮಾರ ಹೆಗಡೆ ಈಗ ಅವರ ಒಲೈಕೆಯಲ್ಲಿ ತೊಡಗಿದ್ದಾರೆ. ಅವರ ಮನೆಗೆ ತೆರಳಿ ಪಕ್ಷಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಜೆಡಿಎಸ್ ಅಲ್ಪ ಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಾಫ್ ಮಿರ್ಜಾನಕರ್ ಅರೋಪಿಸಿದರು.

ಇಲ್ಲಿನ ‌ಆರಾಧನಾ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಲ್ಲಾಪುರ, ಮುಂಡಗೋಡ ಸೇರಿದಂತೆ ವಿವಿಧೆಡೆ ಮುಸ್ಲಿಂ ಮುಖಂಡರ ಮನೆಗೆ ಭೇಟಿ ನೀಡಿ ಅವರಿಗೆ ಪಕ್ಷದಲ್ಲಿ ಹುದ್ದೆ ನೀಡುವುದಾಗಿ ಆಸೆ ತೋರಿಸಿ ಪಂಚಾಯತಿಗೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

5 ಬಾರಿ ಸಂಸದರಾಗಿದ್ದರೂ ಹೆಗಡೆ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿಲ್ಲ. ಸ್ವತಃ ಬಿಜೆಪಿಯವರೇ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೇವಲ ಗಲಾಟೆ ಮಾಡಿಸುವುದು, ಇಲ್ಲ ಸಲ್ಲದ ಹೇಳಿಕೆ ನೀಡುವುದು ಅವರ ಕೆಲಸವಾಗಿದೆ. ಜಿಲ್ಲೆಗೆ ಅಭಿವೃದ್ಧಿ ಹರಿಕಾರರ ಅಗತ್ಯವಿದೆ. ಅದಕ್ಕಾಗಿ ದೋಸ್ತಿ ಸರ್ಕಾರದ ಅಸ್ನೋಟಿಕರ್ ಗೆ ಬೆಂಬಲ ನೀಡಬೇಕಾಗಿದೆ ಎಂದರು.

ವೈದ್ಯರನ್ನು ಹೊಡೆಯಲು ಹೋದವರಿಗೆ, ನಾಲಿಗೆ ಮೇಲೆ ಹಿಡಿತ ಇಲ್ಲದವರಿಂದ ಕೆಲಸ ಆಗುವುದಿಲ್ಲ. ಅಭಿವೃದ್ಧಿ ಆಗಬೇಕಾಗಿದೆ. ಆದ ಕಾರಣ ಆರ್.ವಿ.ದೇಶಪಾಂಡೆ ಮುಂದಾಳತ್ವದಲ್ಲಿ ಚುನಾವಣೆ ಎದುರಿಸಿ ಗೆಲುವು ಸಾಧಿಸುತ್ತೇವೆ ಎಂದರು.

ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಲಿಯಾಸ್ ಇಬ್ರಾಹಿಂ ಸಾಬ ಮಾತನಾಡಿ, ಜಿಲ್ಲೆಗೆ ಸಚಿವ ಹೆಗಡೆಯದ್ದು ಶೂನ್ಯ ಕೊಡುಗೆಯಾಗಿದೆ. ಯುವಕರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಪಕ್ಕದ ಜಿಲ್ಲೆಯ ಪ್ರಹ್ಲಾದ್ ಜೋಶಿ 600 ಕೋಟಿ ರೂ.ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ. ಆದರೆ ಇವರು ಸಂಸದರ ನಿಧಿಯನ್ನೇ ಪೂರ್ಣ ಪ್ರಮಾಣದಲ್ಲಿ ಬಳಸಿಲ್ಲ. ಅವರಿಂದ ಜಿಲ್ಲೆ ಅಭಿವೃದ್ಧಿ ಕಾಣದೇ ಅನಾಥವಾಗಿದೆ.‌ ಆದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಿ ಸಭೆ ನಡೆಸಿ, ಪ್ರಚಾರ ನಡೆಸಿ ಅಸ್ನೋಟಿಕರ್ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.

Comments are closed.