ಕರ್ನಾಟಕ

ಸುಮಲತಾ ಭಾಷಣದಲ್ಲಿ ‘ಆ ನೋವು’ ಕಾಣಲಿಲ್ಲ: ಕುಮಾರಸ್ವಾಮಿ

Pinterest LinkedIn Tumblr


ಮಂಡ್ಯ: ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾರ ಭಾಷಣ ನೋಡಿದೆ. ಎಲ್ಲಿಯೂ ಅವರ ಭಾಷಣದಲ್ಲಿ ನೋವಿನ ಛಾಯೆ ಕಾಣಲಿಲ್ಲ. ಕನಿಷ್ಠ ಮಂಡ್ಯ ಜಿಲ್ಲೆಯ ಜನರ ಸಮಸ್ಯೆಯಾಗಲೀ, ನೋವಿನ ಬಗ್ಗೆಯಾಗಲೀ ಮಾತನಾಡುತ್ತಿದ್ಧಾರೆ ಎಂದು ಅನಿಸಲಿಲ್ಲ ಎಂದು ಸಿಎಂ ಎಚ್​​​.ಡಿ ಕುಮಾರಸ್ವಾಮಿ ಸುಮಲತಾರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಸಿಎಂ ಪರೋಕ್ಷವಾಗಿ ಸುಮಲತಾರ ಭಾಷಣದಲ್ಲಿ ಅಂಬಿ ಅಗಲಿಕೆ ನೋವು ಕಾಣಲಿಲ್ಲ? ಎಂದು ತಿರುಗೇಟು ನೀಡಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇಂದು ಮಂಡ್ಯದ ಹಿರಿಯ ಕಾಂಗ್ರೆಸ್​​ ನಾಯಕ ಮಾದೇಗೌಡರ ನಿವಾಸಕ್ಕೆ ಸಿಎಂ ಎಚ್​​​.ಡಿ ಕುಮಾರಸ್ವಾಮಿಯವರು ಭೇಟಿ ನೀಡಿದ್ದರು. ಕಾಂಗ್ರೆಸ್​​​-ಜೆಡಿಎಸ್​​ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ನಿಖಿಲ್​​​ಗೆ ಬೆಂಬಲ ನೀಡುವಂತೆ ಸಿಎಂ ಮನವಿ ಮಾಡಿದರು. ಜತೆಗೆ ಚುನಾವಣೆ ಗೆಲ್ಲಲು ಹೇಗೆ? ಕಾರ್ಯತಂತ್ರ ರೂಪಿಸಬೇಕು ಎಂಬುದರ ಸುತ್ತ ಹಿರಿಯ ಮುತ್ಸದ್ದಿ ಮಾದೇಗೌಡರ ಬಳಿ ಸಿಎಂ ಸುದೀರ್ಘವಾಗಿ ಚರ್ಚಿಸಿದರು.

ಭೇಟಿ ಬಳಿಕ ಸುದ್ದಿಗಾರರ ಜತೆಗೆ ಮಾತಾಡಿದ ಸಿಎಂ, ನಿಖಿಲ್​ಗೆ ಬೆಂಬಲಿಸುವಂತೆ ಮಾದೇಗೌಡರಿಗೆ ಮನವಿ ಮಾಡಿದ್ದೇವೆ. ಮಂಡ್ಯ ರಾಜಕಾರಣದಲ್ಲಿಯೇ ಮಾದೇಗೌಡರು ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿ. ನಮ ತಂದೆಯ ಸಮಕಾಲೀನರಾಗಿ ರಾಜಕೀಯ ಮಾಡಿದ್ದಾರೆ. ನಿಖಿಲ್​​ ಮತ್ತು ನಾನು ಇವರ ಆಶೀರ್ವಾದ ಪಡೆಯಲು ಬಂದಿದ್ದೇನೆ. ನಿಖಿಲ್​​ ಕೂಡ ಮಾದೇಗೌಡರ ಆಶೀರ್ವಾದ ಪಡೆದು ಹೋಗಿದ್ದಾನೆ. ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿದ್ಧಾರೆ ಎಂದರು.

ಇನ್ನು ಜಿಲ್ಲೆಯ ಅಭಿವೃದ್ಧಿ ಹಾಗೂ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಪಾಲಹಳ್ಳಿಯ ಭಾಷಣ ನೋಡಿದೆ. ಅವರ ಭಾಷಣದಲ್ಲಿ ಯಾವುದೇ ನೋವಿನ ಛಾಯೆಗಳು ಕಾಣಲ್ಲ. ಸಿನಿಮಾದವರು ನಾಟಕ ಮಾಡೋ ರೀತಿಯಲ್ಲಿ ಮಾತನಾಡಿದ್ದಾರೆ. ಹಣ ತೆಗೆದುಕೊಂಡು ಮಜಾ ಮಾಡಿ, ಮತ ಮಾತ್ರ ನನಗೆ ಹಾಕಿ ಎಂದಿದ್ದಾರೆ. ಜಿಲ್ಲೆಯ ಜನರಿಗೆ ಹಣ ಸದುಪಯೋಗವಾಗಲೀ ಎಂದು ಕೊಟ್ಟಿದ್ದೇನೆ ಎಂದು ಗುಟುರಿದರು.

ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಅವರ ಮಗ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಶತಾಯಗತಾಯ ಕ್ಷೇತ್ರ ಗೆಲ್ಲಲು ಜೆಡಿಎಸ್ ಪಣ ತೊಟ್ಟಂತಿದೆ. ಪಕ್ಷೇತರರಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಹಾದಿಗೆ ಅಡ್ಡಿಯಾಗಿ ನಿಂತಿದ್ದಾರೆ. ಈಗ ಅದೇ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹೆಸರಿನಲ್ಲಿ ಮೂವರು ವ್ಯಕ್ತಿಗಳು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂವರು ‘ಸುಮಲತಾ’ರನ್ನು ಹುಟ್ಟುಹಾಕಿದ್ದೇ ಜೆಡಿಎಸ್ ಎಂಬ ಮಾತು ದಟ್ಟವಾಗಿ ಹರಡಿದೆ. ಮತದಾರರ ದಿಕ್ಕು ತಪ್ಪಿಸಲು ದಳಪತಿಗಳು ಹೂಡಿರುವ ಸಂಚು ಇದು ಎಂದು ವಿಶ್ಲೇಷಿಸಲಾಗುತ್ತಿದೆ.

ಈಗಾಗಲೇ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್​​ಗೆ ಈಗಾಗಲೇ ರೈತ ಸಂಘ, ಕನ್ನಡ ಪರ ಸಂಘಟನೆಗಳು ಬೆಂಬಲ ಘೋಷಿಸಿವೆ. ಜಿಲ್ಲೆಯಲ್ಲಿ ಅಂಬಿ ಅಭಿಮಾನಿಗಳು ಹಾಗೂ ಸ್ಥಳೀಯ ಕೈ ಕಾರ್ಯಕರ್ತರು ನೇರವಾಗಿಯೇ ತಮ್ಮ ಬೆಂಬಲ ನೀಡಿದ್ದಾರೆ. ಬಿಜೆಪಿ ಕೂಡ ಇಲ್ಲಿ ಅಭ್ಯರ್ಥಿ ಹಾಕದೇ ಸುಮಲತಾ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. ಇವೆಲ್ಲವುಗಳ ನಡುವೆ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ದೋಸ್ತಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

Comments are closed.