ಕರ್ನಾಟಕ

ಕೆಂಪೆಗೌಡ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ 7 ಅಡಿಯಲ್ಲೇ ನೀರು: ಇದಕ್ಕೆ ಕಾರಣವೇನು ಗೊತ್ತಾ?

Pinterest LinkedIn Tumblr


ಬೆಂಗಳೂರು: ಭೂಮಿಯನ್ನು ಸಾವಿರ ಅಡಿ ಬಗೆದರೂ ಬೊಗಸೆ ನೀರು ಸಿಗದ ಊರಲ್ಲಿರುವ ಪ್ರದೇಶ ಅದು. ಬಹುತೇಕ ಪ್ರತಿ ವರ್ಷ ರಾಜ್ಯದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಅದೂ ಬರುತ್ತದೆ. ಆದರೆ, ಆ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕೇವಲ ಆಳು ಅಡಿಯಷ್ಟು ಭೂಮಿ ಕೊರೆದರೂ ನೀರು ಚಿಮ್ಮುತ್ತದೆ! – ಇದು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ “ಭಗೀರಥನ ಕತೆ’.

ಒಂದೂವರೆ ದಶಕದ ಹಿಂದಿನ ಮಾತು. ಆಗಷ್ಟೇ ಸರ್ಕಾರದಿಂದ ವಿಮಾನ ನಿಲ್ದಾಣಕ್ಕಾಗಿ ಸುಮಾರು ನಾಲ್ಕುಸಾವಿರ ಎಕರೆ ಭೂಮಿಯನ್ನು ಹಸ್ತಾಂತರ ಮಾಡಿದಾಗ, ಅಲ್ಲಿ ಒಂದೇ ಒಂದು ಕೆರೆ ಇರಲಿಲ್ಲ. ಭೂಮಿಯಲ್ಲೂ ಆಗಲೇ ನೀರು ಪಾತಾಳಕ್ಕೆ ಕುಸಿಯುತ್ತಿತ್ತು. ಆದರೆ, ಈಗ ಅದೇ ನಿಲ್ದಾಣದ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲೂ 70 ಎಕರೆ ಜಾಗದಲ್ಲಿ ತಲೆಯೆತ್ತಿದ ಬೃಹದಾಕಾರದ ನಾಲ್ಕೂ ಕೆರೆಗಳು ತುಂಬಿ ತುಳುಕುತ್ತಿವೆ. ಭೂಮಿಯನ್ನು ಮೂರ್‍ನಾಲ್ಕು ಮೀಟರ್‌ನಷ್ಟು ಬಗೆದರೂ ಸಾಕು, ನೀರು ಜಿನುಗುತ್ತದೆ. ಇದರಿಂದ ನಿತ್ಯ ಬಂದುಹೋಗುವ ಲಕ್ಷಾಂತರ ಪ್ರಯಾಣಿಕರ ದಾಹ ಇಂಗಿಸುತ್ತಿದೆ. ಇದು ಅಲ್ಲಿ ನಿರ್ಮಿಸಿದ ಇಂಗು ಗುಂಡಿಗಳು ಮತ್ತು ಮಳೆ ನೀರು ಕೊಯ್ಲಿನ ಚಮತ್ಕಾರ.

ಸ್ವತಃ ಉದ್ಯಾನ ನಗರಿಯ ಹೃದಯಭಾಗದಲ್ಲೇ ಸಾವಿರ ಅಡಿ ಆಳಕ್ಕಿಳಿದರೂ ನೀರೂ ಬರುತ್ತಿಲ್ಲ. ಬೇಸಿಗೆ  ಯಲ್ಲಿ ಇರುವ ಬಾವಿಗಳೂ ಬತ್ತುತ್ತಿವೆ ಹಾಗೂ ನೀರಿನ ಇಳುವರಿಯೂ ಕುಸಿಯುತ್ತಿದೆ. ಆದರೆ, ನಿಲ್ದಾಣದಾದ್ಯಂತ ನಿರ್ಮಿಸಿದ 316 ಇಂಗು ಗುಂಡಿಗಳು, ಕೆರೆಗಳ ನಿರ್ಮಾಣ, ಜತೆಗೆ ಹೆಚ್ಚಿನ ನೀರನ್ನು ಅಂತರ್ಜಲ ಮರುಪೂರಣಕ್ಕೆ ಬಳಕೆ ಮಾಡುತ್ತಿರುವುದರ ಫ‌ಲವಾಗಿ ನಿತ್ಯ ಎರಡೂವರೆ ದಶಲಕ್ಷ ಲೀ. ನೀರು ಪೂರೈಕೆ ಆಗುತ್ತಿದೆ. ತೆರೆದ ಬಾವಿಗಾಗಿ ಮೂರ್‍ನಾಲ್ಕು ಮೀಟರ್‌ ಆಳಕ್ಕಿಳಿದರೆ ಸಾಕು, ಅದೇ ರೀತಿ ಕೊಳವೆಬಾವಿಗಾಗಿ 30ರಿಂದ 35 ಮೀಟರ್‌ ಭೂಮಿ ಕೊರೆದರೆ ನೀರು ಪುಟಿಯುತ್ತದೆ.

ಕಟ್ಟಡಗಳ ಮೇಲೆ ಬಿದ್ದ ಮಳೆ ನೀರು ಈ ಟ್ಯಾಂಕ್‌ಗಳಲ್ಲಿ ಸಂಗ್ರಹ ಆಗುತ್ತದೆ. ಈ ನೀರನ್ನು ಸಂಸ್ಕರಣೆ ಮಾಡಿ, ಮರುಬಳಕೆ ಮಾಡಲಾಗುತ್ತಿದೆ. ಹೆಚ್ಚಾದ ನೀರನ್ನು ಒಳಚರಂಡಿ ಮೂಲಕ ಅಂತರ್ಜಲ ಮರುಪೂರಣಕ್ಕೆ ಪೂರೈಸಲಾಗುತ್ತದೆ. ಇದಲ್ಲದೆ, ನಿಲ್ದಾಣದ ವ್ಯಾಪ್ತಿಯಲ್ಲಿರುವ 1,22,500 ಚದರ ಮೀಟರ್‌ನಲ್ಲಿ ಬೆಳೆದ ಉದ್ಯಾನ ಸೇರಿದಂತೆ ಹುಲ್ಲುಹಾಸಿಗೆ ಅಟೋಮೆಟಿಕ್‌ ಯಂತ್ರೋಪರಕರಣಗಳ ನೆರವಿನಿಂದ ನೀರುಣಿಸಲಾಗುತ್ತಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್‌)ದ ಕಾರ್ಪೋರೇಟ್‌ ಕಮ್ಯುನಿಕೇಷನ್‌ ಮುಖ್ಯಸ್ಥೆ ಅರ್ಚನಾ ಮುತ್ತಪ್ಪ ತಿಳಿಸಿದರು. ನಿಲ್ದಾಣದ ವ್ಯಾಪ್ತಿಯಲ್ಲಿ ನಿರ್ಮಿಸಿದ ಬೃಹದಾಕಾರದ ಕೆರೆಗಳಿಂದ ಸುತ್ತಲಿನ ಪ್ರದೇಶದಲ್ಲೂ ಅಂತರ್ಜಲ ಮಟ್ಟ ವೃದ್ಧಿ ಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲ ಆಗುತ್ತಿದೆ.

Comments are closed.