ಕರ್ನಾಟಕ

ಸುಮಲತಾ ವಿರುದ್ಧ ಸುಮಲತಾ ಹೆಸರಿನ ಮೂವರು ಪಕ್ಷೇತರರಿಂದ ನಾಮಪತ್ರ

Pinterest LinkedIn Tumblr


ಮಂಡ್ಯ: ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಅವರ ಮಗ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಶತಾಯಗತಾಯ ಕ್ಷೇತ್ರ ಗೆಲ್ಲಲು ಜೆಡಿಎಸ್ ಪಣ ತೊಟ್ಟಂತಿದೆ. ಪಕ್ಷೇತರರಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಹಾದಿಗೆ ಅಡ್ಡಿಯಾಗಿ ನಿಂತಿದ್ದಾರೆ. ಈಗ ಅದೇ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹೆಸರಿನಲ್ಲಿ ಮೂವರು ವ್ಯಕ್ತಿಗಳು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂವರು ‘ಸುಮಲತಾ’ರನ್ನು ಹುಟ್ಟುಹಾಕಿದ್ದೇ ಜೆಡಿಎಸ್ ಎಂಬ ಮಾತು ದಟ್ಟವಾಗಿ ಹರಡಿದೆ. ಮತದಾರರ ದಿಕ್ಕು ತಪ್ಪಿಸಲು ದಳಪತಿಗಳು ಹೂಡಿರುವ ಸಂಚು ಇದು ಎಂದು ವಿಶ್ಲೇಷಿಸಲಾಗುತ್ತಿದೆ.

ಸುಮಲತಾ ಹೆಸರಿನ ಪಕ್ಷೇತರರು:

1) ಕನಕಪುರದ ರಂಗನಾಥ ಬಡಾವಣೆಯ ಸುಮಲತಾ ದರ್ಶನ್
2) ಕೆ.ಆರ್​.ಪೇಟೆ ತಾಲೂಕಿನ ಗೊರವಿ ಗ್ರಾಮದ ಸುಮಲತಾ ಮಂಜೇಗೌಡ
3) ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರಿನ ಸುಮಲತಾ ಸಿದ್ದೇಗೌಡ

ಪಕ್ಷೇತರ ಅಭ್ಯರ್ಥಿಗಳಾಗಿ ಈ ಮೂವರು ಕೂಡ ಜೆಡಿಎಸ್​ ಮುಖಂಡರ ಜೊತೆ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಮತದಾರರಲ್ಲಿ ಗೊಂದಲ ಸೃಷ್ಟಿಸಲು ಜೆಡಿಎಸ್​ ಇಂತಹ ಷಡ್ಯಂತ್ರದ ರಾಜಕಾರಣ ಮಾಡುತ್ತಿದೆ ಎನ್ನಲಾಗಿದೆ. ಈಗ ಒಟ್ಟಾರೆ ಸುಮಲತಾ ಹೆಸರಿನ ನಾಲ್ವರು ಕಣದಲ್ಲಿ ಸ್ಪರ್ಧೆ ಮಾಡಲಿದ್ದಾರೆ.

ಸಕ್ಕರೆ ನಾಡು ಮಂಡ್ಯದಲ್ಲಿ ಸುಮಲತಾಗೆ ಸಿಕ್ಕ ಬೆಂಬಲಕ್ಕೆ ಹೆದರಿದ ದಳಪತಿಗಳು, ಕೊನೆಗೆ ಮತದಾರರ ದಿಕ್ಕು ತಪ್ಪಿಸಲು ಈ ಹೊಸ ತಂತ್ರ ಹೂಡಿದ್ದಾರೆ. ಆ ಮೂಲಕ ಸುಮಲತಾ ಅಂಬರೀಷ್​​ಗೆ ಬಿಗ್​ ಶಾಕ್​ ಕೊಟ್ಟಿದ್ದಾರೆ. ಇದರಿಂದ ಸುಮಲತಾಗೆ ಹೊಸ ತಲೆ ನೋವು ಶುರುವಾಗಿದೆ.

ಇನ್ನು, ಮಂಡ್ಯದಲ್ಲಿ ಜೆಡಿಎಸ್​​ ಜೊತೆ ಮೈತ್ರಿ ಮಾಡಿಕೊಳ್ಳಲು ಕೈ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಪಾಂಡವಪುರ ತಾಲೂಕಿನ ಕಾಂಗ್ರೆಸ್​ ಘಟಕದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್​​ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ.

ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್​​ಗೆ ಈಗಾಗಲೇ ರೈತ ಸಂಘ, ಕನ್ನಡ ಪರ ಸಂಘಟನೆಗಳು ಬೆಂಬಲ ಘೋಷಿಸಿವೆ. ಜಿಲ್ಲೆಯಲ್ಲಿ ಅಂಬಿ ಅಭಿಮಾನಿಗಳು ಹಾಗೂ ಸ್ಥಳೀಯ ಕೈ ಕಾರ್ಯಕರ್ತರು ನೇರವಾಗಿಯೇ ತಮ್ಮ ಬೆಂಬಲ ನೀಡಿದ್ದಾರೆ. ಬಿಜೆಪಿ ಕೂಡ ಇಲ್ಲಿ ಅಭ್ಯರ್ಥಿ ಹಾಕದೇ ಸುಮಲತಾ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. ಇವೆಲ್ಲವುಗಳ ನಡುವೆ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ದೋಸ್ತಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

Comments are closed.