ಕರ್ನಾಟಕ

ತನ್ನ ಬಳಿ ಚಿನ್ನ, ಆಸ್ತಿ ಎಷ್ಟಿದೆ ಎಂದು ಆಯೋಗಕ್ಕೆ ಮಾಹಿತಿ ಸಲ್ಲಿಸಿದ ಸುಮಲತಾ!

Pinterest LinkedIn Tumblr


ಮಂಡ್ಯ: ಜಿಲ್ಲೆಯ ರಾಜಕೀಯ ಅಕ್ಷರಶಃ ಸ್ಟಾರ್ ರಣರಂಗವಾಗಿ ಮಾರ್ಪಟ್ಟಿದ್ದು, ಸುಮಲತಾ ಅಂಬರೀಶ್ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ನಿಯಮಗಳಂತೆ ನಾಮಪತ್ರದೊಂದಿಗೆ ತಮ್ಮೊಂದಿಗೆ ಇದ್ದ ಹಣ, ಆಸ್ತಿ, ಸಂಪತ್ತಿನ ವಿವರದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ.

ಸುಮಲತಾ ಬಳಿ ಐದೂವರೆ ಕೆಜಿ ಚಿನ್ನ, 31 ಕೆಜಿ ಬೆಳ್ಳಿ ಹಾಗೂ 5 ಕೋಟಿ ರೂ. ಚರಾಸ್ತಿ, 17 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 23 ಕೋಟಿ 41 ಲಕ್ಷ ರೂ. ಆಸ್ತಿ ಇದೆ. ಇದರ ಜೊತೆಯಲ್ಲಿ ಒಂದೂವರೆ ಕೋಟಿ ರೂ. ಸಾಲವೂ ಇದೆ.

ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ನಿವಾಸದಿಂದ ನೇರವಾಗಿ ಮಂಡ್ಯ ಡಿಸಿ ಕಚೇರಿಗೆ ಆಗಮಿಸಿದ ಸುಮಲತಾ ಅವರು 3 ಸೆಟ್‍ಗಳಲ್ಲಿ ನಾಮಪತ್ರ ಸಲ್ಲಿಸಿದರು. ಪ್ರತಿ ಸೆಟ್ ನಲ್ಲೂ ತಲಾ 10 ಸೂಚಕರ ಹೆಸರನ್ನು ಉಲ್ಲೇಖಿಸಿದ್ದರು.

ಅಹಿಂದ ಅಸ್ತ್ರ:
ನಾಮಪತ್ರ ಸಲ್ಲಿಕೆ ವೇಳೆಯೇ ಅಹಿಂದ ಅಸ್ತ್ರ ಪ್ರಯೋಗಿಸಿರುವ ಸುಮಲತಾ ಅವರು, ದಲಿತ, ಕುರುಬ, ಗಂಗಾಮತಸ್ಥ, ಮುಸ್ಲಿಂ ನಾಯಕರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿ ಮಂಜುಶ್ರೀ ಅವರಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಡಿಸಿ ಕಚೇರಿ ಹೊರಗಡೆ ಸುಮಲತಾ ಪರ ಜೈಕಾರ, ಘೋಷಣೆಗಳು ಮುಗಿಲು ಮುಟ್ಟಿದ್ದವು. ಸುಮಲತಾ ಅವರಿಗೆ ಪುತ್ರ ಅಭಿಷೇಕ್, ಅಂಬರೀಶ್ ಸಹೋದರ ಪುತ್ರ ಮಧುಸೂದನ್, ಅಂಬಿ ಆಪ್ತರಾದ ರಾಕ್‍ಲೈನ್ ವೆಂಕಟೇಶ್, ಶ್ರೀನಿವಾಸ್ ಅವರು ಸೇರಿದಂತೆ ಆತೃಪ್ತ ಕಾಂಗ್ರೆಸ್ ಮುಖಂಡರು, ಬಿಜೆಪಿಯ ಸತೀಶ್ ರೆಡ್ಡಿ ಸಾಥ್ ನೀಡಿದ್ದರು.

ಬೃಹತ್ ಮೆರವಣಿಗೆ:
ನಾಮಪತ್ರ ಸಲ್ಲಿಕೆ ಬಳಿಕ ಡಿಸಿ ಕಚೇರಿ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸುಮಲತಾ ಅವರು ಸಿಲ್ವರ್ ಜ್ಯುಬಿಲಿ ಪಾರ್ಕ್ ವರೆಗೂ ಸಮಾವೇಶಕ್ಕೆ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ನಟ ದರ್ಶನ್ ಮತ್ತು ಯಶ್ ಅವರು ಸಾಥ್ ನೀಡಿದರು. ಈ ರೋಡ್ ಶೋ ವೇಳೆ ಕೆಂಡದಂತೆ ಸೂರ್ಯ ಪ್ರಕಾಶಿಸುತ್ತಿದ್ದರೂ ಲೆಕ್ಕಿಸದ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇತ್ತ ಮದ್ದೂರಿನಿಂದ ಅಭಿಮಾನಿಗಳು ಒಂದು ಸಾವಿರ ಬೈಕ್‍ಗಳ ಮೂಲಕ ರ್ಯಾಲಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

Comments are closed.