ಕರ್ನಾಟಕ

ಲೋಕಪಾಲ್​ ನೇಮಕ ಮಾಡಿದ್ದು ಚುನಾವಣಾ ಗಿಮಿಕ್: ಖರ್ಗೆ

Pinterest LinkedIn Tumblr


ಕಲಬುರ್ಗಿ: ಕೇಂದ್ರ ಸರ್ಕಾರ ಲೋಕಪಾಲ್​ ನೇಮಕ ಮಾಡಿದ್ದು ಕೇವಲ ಚುನಾವಣಾ ಗಿಮಿಕ್​ ಎಂದು ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. 5 ವರ್ಷಗಳ ಕಾಲ ನೇಮಕ ಮಾಡದೇ ಇದ್ದವರು ಚುನಾವಣೆ ಸಂದರ್ಭದಲ್ಲಿ ನೇಮಿಸುತ್ತಿರುವುದೇಕೆ? ನೀಡಿದ ಭರವಸೆಯಂತೆ ಮಾಡಿದ್ದೇನೆಂದು ತೋರಿಕೆಗೆ ಲೋಕಪಾಲ್ ನೇಮಕ ಮಾಡಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಇಷ್ಟು ದಿನ ಯಾಕೆ ನೇಮಕ ಮಾಡಲಿಲ್ಲ ಎಂಬುದಕ್ಕೆ ಕಾರಣ ಕೊಡಲಿ ಎಂದು ಪ್ರಧಾನಿ ಮೋದಿಗೆ ಈ ವೇಳೆ ಖರ್ಗೆ ಆಗ್ರಹ ಮಾಡಿದರು. ಲೋಕಪಾಲ್​​ನಲ್ಲಿ ವಿರೋಧ ಪಕ್ಷದವರಿಗೆ ಸದಸ್ಯರನ್ನಾಗಿಸಬೇಕೆಂಬ ಬೇಡಿಕೆ ಇತ್ತು. ವಿರೋಧ ಪಕ್ಷದ ನಾಯಕ ಅಥವಾ ಎರಡನೇ ಅತಿ ಹೆಚ್ಚು ಸ್ಥಾನ ಹೊಂದಿದ ಪಕ್ಷದವರಿಗೆ ಸದಸ್ಯರನ್ನಾಗಿಸಬೇಕೆಂದು ಆಗ್ರಹಿಸಿದ್ದೆವು. ಆದರೆ ಅದನ್ನು ತಿದ್ದುಪಡಿ ಮಾಡಲೇ ಇಲ್ಲ. ಲೋಕಪಾಲ್ ನೇಮಕವನ್ನು ಬದ್ಧತೆಯಿಂದ ಮಾಡಿಲ್ಲ. ಲೋಕಪಾಲ್ ನೇಮಕ ಚುನಾವಣಾ ಗಿಮಿಕ್ ಬಿಟ್ಟರೆ ಬೇರೇನೂ ಅಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮೋದಿಯಿಂದ ಮೈ ಚೌಕೀದಾರ್ ಅಭಿಯಾನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚೌಕೀದಾರ್ ಎಂದು ಹೇಳಿಕೊಳ್ಳುವ ಮೋದಿ, ಜನರ ಹಣ ಲೂಟಿ ಮಾಡಿ ಕಾರ್ಪೋರೇಟ್ ಸಂಸ್ಥೆಗಳಿಗೆ ಹಂಚುತ್ತಿದ್ದಾರೆ. ಅದಕ್ಕಾಗಿಯೇ ನಾವು ಚೌಕಿದಾರ್ ಚೋರ್ ಹೈ ಎಂದು ಹೇಳುತ್ತಿರುವುದು. ಇದೀಗ ಮೈ ಚೌಕಿದಾರ್ ಎಂದು ತನಗೆ ತಾನೇ ನಾಮಕರಣ ಮಾಡಿಕೊಂಡಿದ್ದಾರೆ. ತನಗೆ ತಾನು ಏನು ಬೇಕಾದರೂ ಹೆಸರಿಟ್ಟುಕೊಳ್ಳಲಿ. ಆದರೆ ಈ ಚೌಕಿದಾರ ದೇಶದ ರಕ್ಷಣೆ ಮಾಡಬೇಕಿತ್ತು. ಬದಲಿಗೆ ದೇಶದ ಹಣವನ್ನು ಕೊಳ್ಳೆ ಹೊಡೆದು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಬಂದಿದೆ ಎಂದು ರೈತರ ಖಾತೆಗಳಿಗೆ ಎರಡು ಸಾವಿರ ಹಣ ಬಿಡುಗಡೆಗೊಳಿಸಿದ್ದಾರೆ. ಒಬ್ಬ ರೈತನಿಗೆ ಪ್ರತಿ ದಿನಕ್ಕೆ 16.40 ರೂಪಾಯಿ ಸಿಗಲಿದೆ. ಇದರಿಂದ ಒಂದು ಚಹಾನೂ ಸಿಗುವುದು ಕಷ್ಟ. ತಾನು ರೈತ ಪರ ಎಂದು ಹೇಳಿಕೊಳ್ಳುತ್ತಲೇ ಕಾರ್ಪೋರೇಟ್ ಸಂಸ್ಥೆಗಳ ಪರ ನಿಲ್ಲುತ್ತಾರೆ. ಹೀಗಿರಬೇಕಾದರೆ ಮೈ ಚೌಕಿದಾರ್ ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಕಿಡಿಕಾರಿದರು.

Comments are closed.