ಕರ್ನಾಟಕ

ಮಂಡ್ಯ ಕಾಂಗ್ರೆಸ್ಸಿಗರ ರಹಸ್ಯ ಸಭೆ: ಸುಮಲತಾ ಬೆಂಬಲಿಸಲು ನಿರ್ಧಾರ!

Pinterest LinkedIn Tumblr


ಮಂಡ್ಯ: ಮಂಡ್ಯದಲ್ಲೀಗ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಅತ್ತ ಕಾಂಗ್ರೆಸ್​​-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರು ಕಣಕ್ಕಿಳಿದಿದ್ದರೇ; ಇತ್ತ ಎದುರಾಳಿಯಾಗಿ ಸುಮಲತಾ ಅಂಬರೀಶ್ ಅಖಾಡದಲ್ಲಿದ್ದಾರೆ. ಈ ಹಿಂದೆಯೇ ತಾನು ಮಂಡ್ಯದ ಜನತೆ ಇಚ್ಚೆಯಂತೆಯೇ ಕಣಕ್ಕಿಳಿಯುವುದಾಗಿ ಹೇಳಿದ್ದರು. ಇದೀಗ ಅಧಿಕೃತವಾಗಿ ಸ್ಪರ್ಧೆಗೆ ಸಿದ್ದ ಎಂದಿರುವ ಸುಮಲತಾ ಅಂಬರೀಶ್​​​ ಈಗಾಗಲೇ ಪ್ರಚಾರ ಕೈಗೊಂಡಿದ್ದಾರೆ.

ಚುನಾವಣೆಗೆ ನಿಲ್ಲುವ ಧೃಡ ನಿರ್ಧಾರಕ್ಕೆ ಬಂದಿರುವ ಸುಮಲತಾ ಮಂಡ್ಯ ಜಿಲ್ಲೆಯಲ್ಲಿ ತುಂಬಾ ಸಕ್ರಿಯ ಓಡಾಟ ನಡೆಸುತ್ತಿದ್ದಾರೆ. ಇಂದು ಕೂಡ ಮೈಸೂರಿನಲ್ಲಿ ಹಲವು ಕಾಂಗ್ರೆಸ್​​ ನಾಯಕರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಚುನಾವಣೆಯಲ್ಲಿ ಯಾರನ್ನು ಎದುರಿಸಬೇಕಾಗಿದೆ ಎಂದು ನಿಮಗೆ ಗೊತ್ತಿದೆ. ಇದಕ್ಕಾಗಿ ನಿಮ್ಮ ಬೆಂಬಲ ಅತ್ಯವಶ್ಯಕ. ಒಳ್ಳೆಯ ನಿರ್ಧಾರ ಜತೆಗೆ ಮತ್ತೆ ಬರುತ್ತೇನೆ. ನೀವು ನನಗೆ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ತಾವು ಕಾಂಗ್ರೆಸ್​ನಿಂದ ಅಲ್ಲದೇ ಹೋದರೂ, ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಅಖಾಡಕ್ಕಿಳಿಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬೆನ್ನಲ್ಲೇ ಸುಮಲತಾ ಅವರ ಮನವಿಗೆ ಸ್ಥಳೀಯ ಕಾಂಗ್ರೆಸ್​​ ನಾಯಕರು ಸ್ಪಂದಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಹಾಸನ ಅಭ್ಯರ್ಥಿಗೆ ತಮ್ಮ ಬೆಂಬಲವಿಲ್ಲ. ಸುಮಲತಾ ಅವರಿಗೆ ನಾವು ಬೆಂಬಲ ನೀಡಲಿದ್ದೇವೆ. ಅಂಬರೀಶ್ ಇದ್ದಾಗಲೂ ಜಿಲ್ಲೆಗೆ ಸಾಕಷ್ಟು ಕೆಲಸ ಆಗಿವೆ. ಸುಮಲತಾ ಕೂಡ ಅವರದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಮಂಡ್ಯ ಜನ ಜಿಲ್ಲೆಯವರಿಗೆ ಬಿಟ್ಟು ಹೊರಗಿನವರಿಗೆ ಮತ ಹಾಕಲ್ಲ ಎನ್ನುವ ಮೂಲಕ ಪರೋಕ್ಷವಾಗಿ ನಿಖಿಲ್​​ಗೆ ತಮ್ಮ ಬೆಂಬಲವಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ಸಿಗರು ಕಿಡಿಕಾರಿದ್ದಾರೆ.

ಈ ಮಧ್ಯೆ ಸುಮಲತಾ ಪರ ಮಂಡ್ಯದ ಕಾಂಗ್ರೆಸ್​​ ನಾಯಕರ ಬ್ಯಾಟಿಂಗ್ ನಡೆಯುತ್ತಿದೆ. ಹೀಗಾಗಿಯೇ ಮದ್ದೂರಿನಲ್ಲಿರುವ ಕಾಂಗ್ರೆಸ್ ನಾಯಕ ವಿ.ಕೆ.ಜಗದೀಶ್ ಮನೆಯಲ್ಲಿ ಕಾರ್ಯಕರ್ತರ ಜೊತೆ ಮಾಜಿ ಶಾಸಕ ಚಲುವರಾಯಸ್ವಾಮಿ ಗೌಪ್ಯ ಸಭೆ ನಡೆಸಿದ್ದಾರೆ. ಈ ಚುನಾವಣೆ ಪ್ರತಿಷ್ಠೆ ಕಣವಾಗಿದೆ. ಅಲ್ಲದೇ ಪಕ್ಷದ ವರ್ಚಸ್ಸಿನ ಪ್ರಶ್ನೆಯಾಗಿದೆ. ನಮ್ಮ ಅಸ್ತಿತ್ವಕ್ಕಾಗಿ ಸುಮಲತಾ ಬೆಂಬಲಿಸಿ ಎಂದು ಕಾಂಗ್ರೆಸ್​​ ಕಾರ್ಯಕರ್ತರಿಗೆ ಚೆಲುವರಾಯಸ್ವಾಮಿ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ಇದೇ ತಿಂಗಳು ಮಾರ್ಚ್​​​ 20ರಂದು ಸುಮಲತಾ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಹಾಗೆಯೇ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ. ಸವಾಲಿನಿಂದಲೇ ಈ ಚುನಾವಣೆ ಎದುರಿಸುವಂತೆ ಕರೆ ನೀಡಿದ್ದಾರೆ. ಸಭೆಯಲ್ಲಿ ಮದ್ದೂರು ಭಾಗದ ಹಲವು ಕೈ ನಾಯಕರು ಭಾಗಿಯಾಗಿದ್ದರು ಎನ್ನುತ್ತಿವೆ ಮೂಲಗಳು.

Comments are closed.