ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯಾಗಿ ಸರಕಾರ ನಡೆಸುತ್ತಿದ್ದರೂ ಸ್ಥಳೀಯ ಮಟ್ಟದಲ್ಲಿ ಎರಡೂ ಬದ್ಧವೈರಿಗಳಂತೆಯೇ ವರ್ತಿಸುತ್ತಿವೆ. ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಹಾಗೂ ಆನಂತರದ ಆರೋಪ ಪ್ರತ್ಯಾರೋಪಗಳಿಂದ ಇದು ಈಗ ಇನ್ನಷ್ಟು ವೇದ್ಯವಾಗಿದೆ. ಮೈತ್ರಿ ಅಭ್ಯರ್ಥಿಗಳಿಗೆ ತಮ್ಮ ಕ್ಷೇತ್ರಗಳಲ್ಲಿ ಸರಿಯಾದ ಬೆಂಬಲ ಸಿಗುವುದಿಲ್ಲವೇನೋ ಎಂಬ ಭಯ ಎರಡೂ ಪಕ್ಷಗಳ ಮುಖಂಡರಿಗೆ ಕಾಡುತ್ತಿದೆ. ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಂತೂ ಸ್ಥಳೀಯ ಕಾಂಗ್ರೆಸ್ಸಿಗರು ಬಹಿರಂಗವಾಗಿಯೇ ಜೆಡಿಎಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ. ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಇದು ಬಹಳ ದೊಡ್ಡ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇವತ್ತು ಇದೇ ವಿಚಾರವಾಗಿ ಪ್ರವಾಸೋದ್ಯಮ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಕೈ ಕೊಟ್ಟರೆ ಮೈಸೂರಿನಲ್ಲಿ ಜೆಡಿಎಸ್ ಕೂಡ ಕೈ ಕೊಡುತ್ತದೆ ಎಂದು ಸಾ.ರಾ. ಮಹೇಶ್ ಸವಾಲು ಹಾಕಿದ್ದಾರೆ.
ಕೆ.ಆರ್. ನಗರದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಸಾ.ರಾ. ಮಹೇಶ್, ಮಂಡ್ಯದಲ್ಲಿ ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತೀರೋ ಅದು ಮೈಸೂರಿನಲ್ಲೂ ಪ್ರತಿಧ್ವನಿಸಲಿದೆ. ಮಂಡ್ಯದಲ್ಲಿ ನೀವು ಒಮ್ಮೆ ತಬ್ಬಿಕೊಂಡರೆ ಮೈಸೂರಿನಲ್ಲಿ ನಿಮ್ಮನ್ನು ನಾವು ಐದು ಬಾರಿ ತಬ್ಬಿಕೊಳ್ಳುತ್ತೇವೆ. ಇದು ಈ ಚುನಾವಣೆಯಿಂದಲೇ ಪ್ರಾರಂಭವಾಗಬೇಕು ಎಂದು ಹೇಳಿದ್ದಾರೆ.
ತನ್ನ ವಿರುದ್ಧ ಕೇಳಿಬಂದ ಜಾತಿ ರಾಜಕಾರಣದ ಆರೋಪಗಳನ್ನು ಸಾರಾ ಮಹೇಶ್ ತಳ್ಳಿಹಾಕಿದ್ದಾರೆ. ತಾನು ಕ್ಷೇತ್ರಕ್ಕೆ ಶಾಸಕ, ರಾಜ್ಯಕ್ಕೆ ಮಂತ್ರಿ. ತಾನು ಯಾವತ್ತೂ ಜಾತಿ ರಾಜಕೀಯ ಮಾಡಿಲ್ಲ. ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಎಂದು ಟೀಕಾಕಾರರ ಬಾಯಿ ಮುಚ್ಚಿಸಲು ಸಚಿವರು ಯತ್ನಿಸಿದ್ದಾರೆ.
ಸುಮಲತಾ ಅಂಬರೀಷ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರವಾಸೋದ್ಯಮ ಸಚಿವರು, ನಿಖಿಲ್ ಅವರನ್ನು ಸುಮಲತಾ ತಮ್ಮ ಮಗ ಎಂದು ಹೇಳುತ್ತಿದ್ದರು. ಮಗನಿಗೆ ಅವರು ಆಶೀರ್ವಾದ ಮಾಡುವ ಬದಲು ಪ್ರವಾರ ಮಾಡಲು ನಿಂತಿದ್ದಾರೆ. ಮಂಡ್ಯ ಕ್ಷೇತ್ರಕ್ಕೆ ನಿಖಿಲ್ ಹೆಸರು ಬಂದಾಗಲಾದರೂ ಸುಮಲತಾ ಯೋಚನೆ ಮಾಡಬೇಕಿತ್ತು ಎಂದು ಟೀಕಿಸಿದ್ದಾರೆ.
ನಿಖಿಲ್ ಮತ್ತು ಅಭಿಷೇಕ್ ಇಬ್ಬರೂ ಆತ್ಮೀಯ ಸ್ನೇಹಿತರು. ಎಲ್ಲರೂ ಅಭಿಷೇಕ್ ಅವರ ಸಿನಿಮಾ ನೋಡಿರಿ. ಹೆಚ್ಚು ಹಣಕೊಟ್ಟು ಟಿಕೆಟ್ ಪಡೆದು ಅವರ ಸಿನಿಮಾ ನೋಡಿರಿ. ಆದರೆ, ಕುಮಾರಣ್ಣನ ಮಗ ಮಾತ್ರ ಈ ರಾಜ್ಯದ ನೇತಾರನಾಗಬೇಕು ಎಂದು ಸಾ.ರಾ. ಮಹೇಶ್ ಹೇಳಿದ್ದಾರೆ.
ಇದೇ ವೇಳೆ, ಜೆಡಿಎಸ್ನಿಂದ ಯಾರೇ ಚುನಾವಣೆಗೆ ಸ್ಪರ್ಧೆ ಮಾಡಿದರೂ ಕಾರ್ಯಕರ್ತರು ನಂಬುವುದು ದೇವೇಗೌಡರ ಕುಟುಂಬಸ್ಥರನ್ನೇ. ಅದಕ್ಕಾಗಿ ನಿಖಿಲ್ ಅವರು ಮಂಡ್ಯದಿಂದ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮೈಸೂರಿನ ಜೆಡಿಎಸ್ ಮುಖಂಡರೂ ಆಗಿರುವ ಅವರು ಸ್ಪಷ್ಟಪಡಿಸಿದ್ದಾರೆ.
ಕೆ.ಆರ್. ನಗರದಲ್ಲಿ ನಡೆದ ಈ ಬಹಿರಂಗ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.
ವರದಿ: ಪುಟ್ಟಪ್ಪ, ಮೈಸೂರು
Comments are closed.