ಕರ್ನಾಟಕ

ಶಿವಮೊಗ್ಗ ಕ್ಷೇತ್ರಕ್ಕೆ ಡಿಕೆಶಿ ಪ್ರವೇಶ; ಬಿಜೆಪಿ ಪಾಳಯದಲ್ಲಿ ನಡುಕ!

Pinterest LinkedIn Tumblr


ಶಿವಮೊಗ್ಗ: ಬಿಜೆಪಿಯ ಭದ್ರ ನೆಲೆಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು, ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಈ ಬಾರಿ ಬಿಜೆಪಿಯಿಂದ ಪುನರ್ ಆಯ್ಕೆ ಬಯಸಿದ್ದು, ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ಕಣಕ್ಕಿಳಿದಿದ್ದಾರೆ. ನವೆಂಬರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಇದೇ ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ಮುಖಾಮುಖಿಯಾಗಿದ್ದು, ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ್ದ ಮಧುಬಂಗಾರಪ್ಪ 52,148 ಮತಗಳ ಅಲ್ಪ ಅಂತರದಿಂದ ಸೋಲು ಅನುಭವಿಸಿದ್ದರು.

ನಿನ್ನೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕುರಿತು ಚರ್ಚೆ ನಡೆಸಿ, ಆ ಕ್ಷೇತ್ರದ ಚುನಾವಣಾ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಮೊದಲಿನಿಂದಲೂ ಮಧು ಬಂಗಾರಪ್ಪ ಅವರಿಗೆ ಆಪ್ತರಾಗಿರುವ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿಯವರ ಸಲಹೆ ಮೇರೆಗೆ ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ.

ಯಡಿಯೂರಪ್ಪ ಸಂಸದನಾಗುವುದಕ್ಕಿಂತ ಮುಂಚೆ ಶಿವಮೊಗ್ಗವು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ನಂತರ ಶಿವಮೊಗ್ಗದಲ್ಲಿ ಸಮರ್ಥ ನಾಯಕತ್ವದ ಕೊರತೆಯಿಂದ ಕಾಂಗ್ರೆಸ್ ಪಕ್ಷ ದೊಳಗೆ ಗುಂಪುಗಾರಿಕೆ ಹೆಚ್ಚಾಗುತ್ತಾ ಹೋಯಿತು. ಇದರಿಂದ ಬಿಜೆಪಿ ಬಲವೂ ಹೆಚ್ಚಾಗುತ್ತಾ ಹೋಯ್ತು ಎನ್ನಲಾಗಿದೆ.

ಕಂಗಾಲಾದ ಬಿಜೆಪಿ ನಾಯಕರು

ಈಗ ಸಚಿವ ಡಿ.ಕೆ. ಶಿವಕುಮಾರ್​ ಅವರಿಗೆ ಉಸ್ತುವಾರಿ ವಹಿಸಿರುವುದದರಿಂದ ಬಿಜೆಪಿಯಲ್ಲಿ ನಡುಕ ಉಂಟಾಗಿದೆ. ಡಿಕೆಶಿ ಮಾಡುವ ಚುನಾವಣಾ ತಂತ್ರಗಾರಿಕೆಗಳು ಬಿಜೆಪಿ ನಾಯಕರನ್ನು ಕಂಗಾಲು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಳ್ಳಾರಿ ಉಪ ಚುನಾವಣೆ ಹೊಣೆ ಹೊತ್ತಿದ್ದ ಡಿಕೆಶಿ ತಮ್ಮ ಕಾರ್ಯತಂತ್ರದ ಮೂಲಕ ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರ ಗೆಲುವಿಗೆ ಕಾರಣರಾಗಿದ್ದರು. ಈ ಯಶಸ್ಸಿನ ಕಾರಣದಿಂದಲೇ ಅವರಿಗೆ ಶಿವಮೊಗ್ಗದ ಉಸ್ತುವಾರಿ ನೀಡಲಾಗಿದೆ ಎನ್ನಲಾಗಿದೆ.

ಮಧು ಬಂಗಾರಪ್ಪ ಉಪಚುನಾವಣೆಯಲ್ಲಿ ಸೋತ ಬಳಿಕ ಒಂದೆರೆಡು ಬಾರಿ ಬಿಟ್ಟರೆ ಹೆಚ್ಚಾಗಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿಲ್ಲ. ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಪಕ್ಷ ಸಂಘಟನೆಯಲ್ಲಿ ಅಷ್ಟೊಂದು ಚುರುಕಾಗಿಲ್ಲ. ಅಲ್ಲದೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಸ್ಥಳೀಯರಿಗೆ ಅಪರಿಚಿತ. ಸುಂದರೇಶ್ ಅವರನ್ನು ವಿರೋಧಿಸುವವರೇ ಕ್ಷೇತ್ರದಲ್ಲಿ ಹೆಚ್ಚಾಗಿದ್ದಾರೆ.

ಸ್ಥಳಿಯ ಮಟ್ಟದಲ್ಲಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಲು ನಾಯಕರು ಮುಂದಾಗುತ್ತಿಲ್ಲ. ಮಧುಬಂಗಾರಪ್ಪ ಇನ್ನೂ ಅಖಾಡಕ್ಕೆ ಧುಮುಕಿಲ್ಲ. ಇಂತಹ ರಾಜಕೀಯ ಸನ್ನಿವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರ ಕಾರ್ಯತಂತ್ರಗಳು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಯಾವ ರೀತಿ ಪರಿಣಾಮಕಾರಿಯಾಗಲಿವೆ ಎನ್ನುವ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.

Comments are closed.