ಕರ್ನಾಟಕ

ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಪರ ಹೆಚ್ಚಿದ ಅನುಕಂಪದ ಅಲೆ!

Pinterest LinkedIn Tumblr


ಮಂಡ್ಯ: ಹೆದ್ದಾರಿಗೆ ಹೊಂದಿಕೊಂಡಿರುವ ಎಪಿಎಂಸಿ ಯಾರ್ಡ್ ನ ಸಣ್ಣ ಟೀ ಅಂಗಡಿಯಲ್ಲಿ ಜೆಡಿಎಸ್ ಮತ್ತು ಸುಮಲತಾ ಅಂಬರೀಷ್ ನಡುವಿನ ಸ್ಪರ್ಧೆ ಬಗ್ಗೆ ಚರ್ಚೆ ನಡೆಯುತ್ತೆ, ಮಂಡ್ಯ ಜನರ ನಾಡಿ ಮಿಡಿತ, ಭಾವನೆಗಳು ಎಲ್ಲವೂ ಸುಮಲತಾ ಪರವಾಗಿವೆ, ಸುಮಲತಾ ಮತ್ತು ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಮಂಡ್ಯದ 8ವಿಧಾನಸಭೆ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದು, ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದೆ, ರಾಜಕೀಯಕ್ಕೆ ಶೀಘ್ರವೇ ಕಾಲಿರಿಸಿರುವ ನಿಖಿಲ್ ಕುಮಾರ್ ಹೊರಗಿನವರು ಎಂಬ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಸುಮಲತಾ ಪರವಾಗಿ ಅನುಕಂಪದ ಅಲೆ ಹೆಚ್ಚಾಗಿದೆ, ಸುಮಲತಾಗೆ ಸಿಗುತ್ತಿರುವ ಅಭೂತ ಪೂರ್ವ ಬೆಂಬಲ ಜೆಡಿಎಸ್ ಗೆ ನಡುಕ ಹುಟ್ಟಿಸಿದೆ, ಸುಮಲತಾ ಅಂಬರೀಷ್ ಪ್ರತಿಯೊಬ್ಬ ಮತದಾರರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ.
ಸುಮಲತಾ ಅಂಬರೀಷ್ ಕೇವಲ ಅಂಬರೀಷ್ ಅಭಿಮಾನಿಗಳ ಸಂಘದೊಂದಿಗೆ ತಮ್ಮ ಪ್ರಚಾರ ಮುಂದುವರಿಸಿದ್ದಾರೆ. ಮಂಡ್ಯದ 8 ವಿಧಾನಸಭೆ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರಿದ್ದಾರೆ, ಅದರಲ್ಲಿ ಮೂವರು ಸಚಿವರಿದ್ದಾರೆ, ಇದರ ಜೊತೆಗೆ ಡಿ.ಕೆ ಶಿವಕುಮಾರ್ ನಿಖಿಲ್ ಕುಮಾರ್ ಬೆನ್ನಿಗೆ ನಿಂತಿದ್ದಾರೆ.
ನಿಖಿಲ್ ಕುಮಾರ್ ಇನ್ನೂ ಯುವಕ, ಆತನಿಗೆ ಇನ್ನೂ ಹಲವು ಅವಕಾಶಗಳಿವೆ, ಆದರೆ ಸುಮಲತಾ ಅವರಿಗೆ ಇದು ಸರಿಯಾದ ಸಮಯ, ಆಕೆ ವಿದ್ಯಾವಂತೆ, ಪ್ರಬುದ್ಧವಾಗಿ ಚಿಂತನೆ ಹಾಗೂ ಮಾತನಾಡುವ ಮಹಿಳೆ, ನಮಗೆ ನಿಖಿಲ್ ಬಗ್ಗೆ ಯಾವ ದ್ವೇಷವಿಲ್ಲ, ಆದರೆ ಅಂಬರೀಷ್ ಕುಟುಂಬದವರೊಬ್ಬರು ಸಂಸದರಾಗಬೇಕೆಂಬುದು ನಮ್ಮ ಬಯಕೆ ಎಂದು ದೊಡ್ಡರಸಿಕೆರೆ ಸೋಮಾರಿ ಟೀ ಅಂಗಡಿಯ 68 ವರ್ಷದ ಪುಟ್ಟಸ್ವಾಮಿ ಎಂಬುವರು ಹೇಳಿದ್ದಾರೆ.
ಡಿ.ಸಿ ತಮ್ಮಣ್ಣ ಹಾಗೂ ರೇವಣ್ಣ ಅವರ ಹೇಳಿಕೆ ಸುಮಲತಾ ಪರವಾಗಿ ಕೆಲಸ ಮಾಡುತ್ತಿದೆ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಸಿಎಂ ಕುಮಾರ ಸ್ವಾಮಿ ಧನ ಸಹಾಯ ಮಾಡಿದರು, ಅವರು ನೆರವು ನೀಡಿದ್ದು ಸರ್ಕಾರದ ಹಣದಿಂದ, ಆದರೆ ಸುಮಲತಾ ತಮ್ಮ ಸ್ವಂತ ಜಮೀನನನ್ನು ಗುರು ಕುಟುಂಬಕ್ಕೆ ನೀಡಿದ್ದಾರೆ, ಜನ ಇದನ್ನು ಮರೆಯಬರಾದು ಎಂದು ಮದ್ದೂರಿನ ಟೀ ಅಂಗಡಿ ಮಾಲೀಕ ಶಿವಣ್ಣ ಹೇಳಿದ್ದಾರೆ.
ಸುಮಲತಾ ಪರವಾಗಿ ಅನುಕಂಪದ ಅಲೆ ಮಂಡ್ಯದಲ್ಲಿ ಜೋರಾಗಿಯೇ ಇದೆ, ಮಂಡ್ಯದಲ್ಲಿ ಯಾರೂ ಸ್ಥಳೀಯ ನಾಯಕರಿರಲಿಲ್ಲವೇ, ಮುಖ್ಯಮಂತ್ರಿ ಪುತ್ರ ನಿಖಿಲ್ ನನ್ನು ಏಕೆ ಕರೆ ತರಬೇಕಾಗಿತ್ತು? ಹೊರಗನಿಂದ ಬಂದವರು ಮಂಡ್ಯ ಪ್ರತಿನಿಧಿಸುವುದು ಮಂಡ್ಯ ಜನತೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಪದಾಧಿಕಾರಿ ಡಾ. ರವೀಂದ್ರ ಎಂಬುವರು ಅಭಿಪ್ರಾಯ ಪಟ್ಟಿದ್ದಾರೆ, ಮೈತ್ರಿ ಸರ್ಕಾರದ ನಿಯಮಗಳು ಸ್ಥಳೀಯ ಕಾರ್ಯಕರ್ತರ ಉಸಿರು ಕಟ್ಟಿಸುತ್ತಿವೆ, ಸುಮಲತಾ ಸ್ಪರ್ಧೆ ಸ್ವಲ್ಪ ಮಟ್ಟಿನ ಭರವಸೆ ತಂದಿದೆ.
ಯಾವುದೇ ಅಧಿಕೃತ ಪಕ್ಷದ ಟಿಕೆಟ್ ಇಲ್ಲದೆ ಸಂಸತ್ ಚುನಾವಣೆ ಗೆಲ್ಲುವುದು ಕಷ್ಟ, ಯಾವುದೇ ಸಂಘಟನೆಯಿಲ್ಲದೇ ಜನರನ್ನು ತಲುಪುವುದು ಕಷ್ಟದ ಕೆಲಸ, ಯಾವುದೇ ಪಕ್ಷದ ಬೆಂಬಲ ಇದ್ದಿದ್ದರೇ ಸುಮಲತಾ ಗೆಲ್ಲುವುದು ಸುಲಭವಾಗುತ್ತಿತ್ತು ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ, ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸಿದ್ದರೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಬಿಜೆಪಿ ನಿರ್ಧರಿಸಿದೆ,
ಅಂಬರೀಷ್ ಮೇಲಿನ ಪ್ರೀತಿಯಿಂದಾಗಿ ಜೆಡಿಎಸ್ ಮತ್ತು ಕಾಂಗ್ರೆಸ ಕಾರ್ಯಕರ್ತರು ಪಕ್ಷದ ಲಕ್ಷ್ಮಣ ಗೆರೆ ದಾಟಲು ಮುಂದಾಗಿದ್ದಾರೆ, ನಾನು ಇಲ್ಲಿಯವರೆಗೆ ಜೆಡಿಎಸ್ ಗೆ ಮತ ಚಲಾಯಿಸುತ್ತಾ ಬಂದಿದ್ದೇನೆ, ನನ್ನ ಚಿಕ್ಕಪ್ಪ ಕೂಡ ಜೆಡಿಎಸ್ ಜಿಲ್ಲಾ ಪಂಚಾಯಿತಿ ಸದಸ್ಯ,ಸ ಆದರೆ ಈ ಬಾರಿ ಸುಮಲತಾ ಅವರಿಗೆ ಮತ ಚಲಾಯಿಸುತ್ತೇನೆ ಎಂದು ನಗರಕೆರೆ ರೈತ ಪುಟ್ಟಸ್ವಾಮಿ ಎಂಬುವರು ತಿಳಿಸಿದ್ದಾರೆ.

Comments are closed.