ಕರ್ನಾಟಕ

ಲೋಕಸಭೆ ಚುನಾವಣೆ: ವಾಟ್ಸಪ್‌, ಫೇಸ್ಬುಕ್‌ನಲ್ಲಿ ಏನೇನು ಮಾಡುವಂತಿಲ್ಲ?

Pinterest LinkedIn Tumblr


ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವು ಪ್ರಮುಖ ಮಾಧ್ಯಮವಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕೈಗೊಳ್ಳುವಾಗ ಕೆಲ ತಪ್ಪುಗಳಾಗುತ್ತಿವೆ. ಹೀಗೆ ತಪ್ಪೆಸಗುವವರನ್ನು ಚುನಾವಣಾ ಆಯೋಗವು ಜೈಲಿಗೆ ಕಳುಹಿಸಲಿದೆ ಎಂಬ ಸಂದೇಶಗಳು ಹರಿದಾಡುತ್ತಿವೆ. ಇದಕ್ಕೆ ಚುನಾವಣಾ ಆಯೋಗವು ಕೆಲ ಸ್ಪಷ್ಟನೆಗಳನ್ನು ನೀಡಿದೆ.

*ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಾವುದಕ್ಕೆ ಅವಕಾಶ ಇಲ್ಲ?

ವಾಟ್ಸಪ್‌ ಸೇರಿದಂತೆ ಎಲ್ಲಾ ರೀತಿಯ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಭ್ಯರ್ಥಿಯ ವೈಯಕ್ತಿಕ ನಿಂದನೆ, ತೇಜೋವಧೆ ಮಾಡುವಂತಿಲ್ಲ. ಅವರಿಗೆ ಧಾರ್ಮಿಕವಾಗಿ ಅಪಮಾನ ಮಾಡುವಂತಿಲ್ಲ. ಕಾನೂನಿನ ವಿರುದ್ಧವಾಗಿ ಅಂತಹ ಕೆಲಸ ಮಾಡಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

*ಸಾಮಾಜಿಕ ಜಾಲತಾಣದಲ್ಲಿ ಏನು ಮಾಡಬಹುದು?

ವ್ಯಕ್ತಿಗತವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಾಯಕರ ಅಥವಾ ಪಕ್ಷದ ಪರ ಪ್ರಚಾರ ಮಾಡಲು ಯಾವುದೇ ಅಡ್ಡಿ ಇಲ್ಲ. ಪ್ರಚಾರ ಕೈಗೊಳ್ಳುವುದು ಅಪರಾಧವಲ್ಲ. ಅವರ ಸಾಧನೆಗಳನ್ನು ಬಿಂಬಿಸಬಹುದು. ಆದರೆ, ಮತದಾರರ ಮೇಲೆ ಪ್ರಭಾವ ಬೀರುವಂತಹ ಭರವಸೆಗಳನ್ನು ನೀಡಬಾರದು. ಟೀಕೆಗಳನ್ನು ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು. ಯಾವುದೇ ಪಕ್ಷದ ಮುಖಂಡರ ಹೇಳಿಕೆ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲು ಅವಕಾಶವಿದೆ.

*ನೀತಿ ಸಂಹಿತೆ ಉಲ್ಲಂಘನೆ ಹೇಗೆ ಆಗುತ್ತದೆ?

ಯಾವುದೇ ಅಭ್ಯರ್ಥಿ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಣ ಖರ್ಚು ಮಾಡಿ ಪ್ರಚಾರ ಮಾಡುವ ಮುನ್ನ ಸಂಬಂಧಪಟ್ಟಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆಯಬೇಕು. ಇದಕ್ಕಾಗಿ ಎಷ್ಟುವೆಚ್ಚ ಮಾಡಲಾಗುವುದು ಎಂಬ ಬಗ್ಗೆ ವಿವರ ಸಲ್ಲಿಸಬೇಕು. ಅನುಮತಿ ಪಡೆಯದೇ ಪ್ರಚಾರ ಮಾಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ. ಮತದಾರರನ್ನು ಸೆಳೆಯಲು ಇಲ್ಲದ ಆಮಿಷಗಳನ್ನು ಒಡ್ಡುವಂತಿಲ್ಲ. ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ.

*ಮದುವೆ ಆಮಂತ್ರಣ ಸೇರಿದಂತೆ ಬೇರೆ ಬೇರೆ ರೀತಿಯ ಆಮಂತ್ರಣ ಪತ್ರಿಕೆಗಳಲ್ಲಿ ಪಕ್ಷದ ಮುಖಂಡರ ಭಾವಚಿತ್ರ ಇಲ್ಲವೇ ಗುರುತು ಬಳಸುವುದು ತಪ್ಪಾಗುತ್ತದೆಯೇ?

ವೈಯಕ್ತಿಕವಾಗಿ ಯಾವುದೇ ಪಕ್ಷದ ಗುರುತು ಅಥವಾ ಮುಖಂಡರ ಭಾವಚಿತ್ರ ಬಳಸುವುದು ತಪ್ಪಲ್ಲ.

Comments are closed.