ಕರ್ನಾಟಕ

ಜೆಡಿಎಸ್​​ಗೆ ನಮ್ಮ ಬೆಂಬಲವಿಲ್ಲ ಎಂದು ಖಡಕ್​​​ ಸಂದೇಶ ನೀಡಿದ ಮಂಡ್ಯ ಕಾಂಗ್ರೆಸ್ಸಿಗರು!

Pinterest LinkedIn Tumblr


ಬೆಂಗಳೂರು: ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಈಗಾಗಲೇ ಕೇಂದ್ರ ಚುನಾವಣೆ ಆಯೋಗವು ದಿನಾಂಕ ಘೋಷಿಸಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ಬಿಜೆಪಿಯೂ ಬಿರುಸಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದೆ. ಮೂರು ರಾಜಕೀಯ ಪಕ್ಷಗಳು ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿದ್ದು, ಟಿಕೆಟ್​​ ಯಾರಿಗೆ ನೀಡಬೇಕೆಂಬುದರ ಸುತ್ತ ಅಂತಿಮ ಸುತ್ತಿನ ಮಾತುಕತೆ ನಡೆಸುತ್ತಿವೆ. ಈ ಮಧ್ಯೆ ಕಾಂಗ್ರೆಸ್​​-ಜೆಡಿಎಸ್​​​​ ಮೈತ್ರಿಯಾಗಿ ಚುನಾವಣೆಗೆ ಹೋಗುತ್ತಿದ್ದು, ಕ್ಷೇತ್ರಗಳ ಹಂಚಿಕೆ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಶುರುವಾಗಿದೆ.

ಇನ್ನು ಮಂಡ್ಯದಲ್ಲಿ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಪುತ್ರ ನಿಖಿಲ್​​ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ನಿಖಿಲ್​​​ಗೆ ಎದುರಾಳಿ ಅಭ್ಯರ್ಥಿಯಾಗಿ ಈಗಾಗಲೇ ಸುಮಲತಾ ಅಂಬರೀಶ್​​ ಅಖಾಡದಲ್ಲಿದ್ದು, ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಿ ಎಂದು ಸಚಿವ ಡಿ.ಕೆ ಶಿವಕುಮಾರ್​​ ಸ್ಥಳೀಯ ಕಾಂಗ್ರೆಸ್ಸಿಗರ ಸಭೆ ಆಯೋಜಿಸಿದ್ದಾರೆ. ಇಲ್ಲಿ ಸ್ಥಳೀಯ ಕಾಂಗ್ರೆಸ್​​ ನಾಯಕರಿಂದಲೇ ನಿಖಿಲ್​​​ಗೆ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೇ ನಾವು ಸುಮಲತಾ ಅವರಿಗೆ ಬೆಂಬಲಿಸುತ್ತೇವೆ, ಗೋ ಬ್ಯಾಕ್​​ ಡಿಕೆಶಿ ಎಂದು ಕ್ಯಾಂಪೇನ್​​​ ಶುರು ಮಾಡಿದ್ದಾರೆ.

ಸಕ್ಕರೆ ಜಿಲ್ಲೆಯ ಕಾಂಗ್ರೆಸ್ ಟಿಕೆಟ್ ವಿಚಾರ ಕಂಗ್ಗಟ್ಟಾಗುತ್ತಿದೆ. ಜೆಡಿಎಸ್ ಮೈತ್ರಿ ಧರ್ಮ ಪಾಲಿಸುವಂತೆ ಸಚಿವ ಡಿ.ಕೆ.ಶಿವಕುಮಾರ್ ಮಂಡ್ಯ ಕಾಂಗ್ರೆಸ್ಸಿಗರಿಗೆ ಸೂಚಿಸಿದ್ದಾರೆ. ಒಂದು ವೇಳೆ ಸುಮಲತಾ ಅಂಬರೀಶ್​​ ವಿರುದ್ಧವಾಗಿಯೇ ಡಿ.ಕೆ.ಶಿವಕುಮಾರ್ ಅಖಾಡಕ್ಕೆ ಇಳಿದರೆ ನಾವು ಗೋ ಬ್ಯಾಕ್ ಡಿಕೆಶಿ ಹೋರಾಟ ಶುರು ಮಾಡುತ್ತೇವೆ ಎಂದಿದ್ದಾರೆ. ನಗರಸಭೆಯ ಕಾಂಗ್ರೆಸ್ ಮಾಜಿ ಸದಸ್ಯ ಅನಿಲ್ ಕುಮಾರ್ ಅವರೇ ಖುದ್ದು, ಗೋ ಬ್ಯಾಕ್ ಡಿಕೆಶಿ ಹೋರಾಟ ಮಾಡಲು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬಿ ಅಭಿಮಾನಿಗಳು ಬೆಂಬಲವಾಗಿಯೂ ನಿಂತಿದ್ದಾರೆ.

ನಾವು ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ನೀವು ಮೈತ್ರಿಧರ್ಮ ಪಾಲಿಸಿ ಎಂದು ಸಂಧಾನ ಮಾಡಲಿಕ್ಕೆ ಬರಬೇಡಿ. ಒಂದು ವೇಳೆ ನೀವು ಬಂದಲ್ಲಿ ಗೋ ಬ್ಯಾಕ್​​ ಡಿಕೆಶಿ ಹೋರಾಟ ಮಾಡುತ್ತೇವೆ. ಇಲ್ಲಿನ ಸಮಸ್ಯೆ ನಾವೇ ನೋಡಿಕೊಳ್ಳುತ್ತೇವೆ, ನೀವು ಈ ವಿಚಾರದಲ್ಲಿ ತಲೆ ಹಾಕಬೇಡಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಎಚ್ಚರಿಕಾ ಸಂದೇಶ ರವಾನಿಸಿದ್ದಾರೆ.

ಮಂಡ್ಯದಲ್ಲಿ ನಾವು ನಿಖಿಲ್​​​ಗೆ ಬೆಂಬಲ ನೀಡುವುದಿಲ್ಲ, ಬೇಕಿದ್ದರೆ ಡಿಕೆ ಶಿವಕುಮಾರ್ ಅವರು ರಾಮನಗರದಲ್ಲಿ ನಿಲ್ಲಿಸಿ ಗೆಲ್ಲಿಸಲಿ. ಒಂದು ವೇಳೆ ಡಿಕೆಶಿ ಜೆಡಿಎಸ್​​ಗೆ ಬೆಂಬಲಿಸಿ ಎಂದು ಬಂದರೇ ಗೋ ಬ್ಯಾಕ್ ಡಿಕೆಶಿ ಅಂತ ಅಭಿಯಾನ ಮಾಡುವುದಾಗಿ ಎಚ್ಚರಿಸಿದ್ದಾರೆ.

Comments are closed.