ನವದೆಹಲಿ: ಮಂಡ್ಯದಿಂದ ಸುಮಲತಾ ಅವರನ್ನು ಕಣಕ್ಕೆ ಇಳಿಸುವುದಕ್ಕೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿರುವುದು ಗೊತ್ತೇ ಇದೆ. ಆದರೆ, ಸುಮಲತಾಗೆ ಸಿದ್ದರಾಮಯ್ಯ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂಬ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು.
ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಸುಮಲತಾಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದೇ ನಾನು. ಅಲ್ಲಿನ ಸ್ಪರ್ಧೆಯ ಬಗ್ಗೆ ಈ ಮೊದಲೇ ನಿರ್ಧಾರವಾಗಿತ್ತು. ಹಾಗಿದ್ದಮೇಲೆ ನಾನ್ಯಾಕೆ ಸುಮಲತಾಗೆ ಪರೋಕ್ಷ ಬೆಂಬಲ ನೀಡುತ್ತೇನೆ? ಹಾಗೇನಾದರೂ ಇದ್ದಿದ್ದರೆ ನೇರವಾಗೇ ಹೇಳುತ್ತಿದ್ದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸುತ್ತಿದ್ದು, ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ಕ್ರೀನಿಂಗ್ ಸಮಿತಿ ಸಭೆ ನಡೆಯಲಿದೆ. ಇಂದು ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಸಿಇಸಿ(ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉನ್ನತ ಸಮಿತಿ)ಗೆ ಕಳುಹಿಸಲಾಗುವುದು. ಈ ಸಭೆಯಲ್ಲಿ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಸೀಟು ಹಂಚಿಕೆಯ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು. ಸಭೆಯಲ್ಲಿ ಸಿದ್ದರಾಮಯ್ಯ, ಡಿಸಿಎಂ ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಾಯಕರಾದ ಈಶ್ವರ ಖಂಡ್ರೆ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಹಾಲಿ ಸಂಸದರಿಗೆ ಟಿಕೆಟ್ ನೀಡಲಿದೆಯಾ ಎಂಬ ಬಗ್ಗೆಯೂ ಇಂದು ನಿರ್ಧಾರವಾಗಲಿದೆ. ಈ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಿದ್ದರಾಮಯ್ಯ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ಜೆಡಿಎಸ್ನ ಕುಟುಂಬ ರಾಜಕಾರಣ ಮೈತ್ರಿ ಸರ್ಕಾರದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಮಂಡ್ಯದಲ್ಲಿ ನಿಖಿಲ್, ಹಾಸನದಲ್ಲಿ ಪ್ರಜ್ವಲ್ ಸ್ಪರ್ಧಿಸಲಿರುವ ನಿರ್ಧಾರ ಜೆಡಿಎಸ್ಗೆ ಬಿಟ್ಟಿದ್ದು. ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಾವು ಹೇಳೋಕಾಗೊಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Comments are closed.