ಕರ್ನಾಟಕ

ಪತಿಯನ್ನು ನೆನೆದು ಬಿಕ್ಕಿಬಿಕ್ಕಿ ಅತ್ತ ಸುಮಲತಾ

Pinterest LinkedIn Tumblr


ಮಂಡ್ಯ: ಅಂಬರೀಷ್ ಬದುಕಿದ್ದಾಗ ಮಂಡ್ಯಕ್ಕೆ ಏನೂ ಮಾಡಲಿಲ್ಲ ಎಂಬ ಕೆಲ ವ್ಯಕ್ತಿಗಳ ಆರೋಪಕ್ಕೆ ಸುಮಲತಾ ಅಂಬರೀಷ್ ಇವತ್ತು ಭಾವನಾತ್ಮಕವಾಗಿ ತಿರುಗೇಟು ನೀಡಿದರು. ಮಳವಳ್ಳಿಯಲ್ಲಿ ನಡೆದ ಅಂಬರಿಷ್ ಅಭಿಮಾನಿ ಸಭೆಯ ವೇದಿಕೆಯಲ್ಲಿ ಸುಮಲತಾ ಅಂಬರೀಷ್ ಅವರು ತಮ್ಮ ಪತಿಯನ್ನು ನೆನೆದು ಇವತ್ತು ಗದ್ಗದಿತರಾದರು. ಅಂಬರೀಷ್ ಅವರು ಕಳಂಕರಹಿತ ರಾಜಕಾರಣಿಯಾಗಿದ್ದರು. ಇವತ್ತು ಭ್ರಷ್ಟಾಚಾರ ಆರೋಪ ಇಲ್ಲದ ರಾಜಕಾರಣಿಗಳು ಯಾರಿದ್ದಾರೆ ಹೇಳಿ? ಅಂಬರೀಷ್ ಅವರು ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದರು ಎಂದು ಸುಮಲತಾ ಅವರು ತಮ್ಮ ಪತಿಯ ಕಾರ್ಯವನ್ನು ನೆನೆದು ಶ್ಲಾಘಿಸಿದರು. ಅಂಬಿ ಬಗ್ಗೆ ಒಂದು ಮಾತು ಹೇಳಿದರೂ ಈಗ ನನಗೆ ತಡೆದುಕೊಳ್ಳಲು ಆಗುವುದಿಲ್ಲ ಎಂದು ಹೇಳುವ ಮೂಲಕ ಅಂಬಿ ಟೀಕಾಕಾರರ ವಿರುದ್ಧ ಸುಮಲತಾ ಆಕ್ರೋಶ ತೋರ್ಪಡಿಸಿದರು.

ಅಂಬರೀಷ್ ಅವರು ಇದ್ದಾಗ ಸಂಬಂಧಿಕರು ಮನೆಗೆ ಬಂದು ಹೋಗುತ್ತಿದ್ದರು. ಅವರು ನಿಧನರಾಗಿ 3 ತಿಂಗಳಾದರೂ ಈ ಸಂಬಂಧಿಕರು ಒಂದು ಫೋನ್ ಮಾಡಿ ಆರೋಗ್ಯ ವಿಚಾರಿಸಿಲ್ಲ ಎಂದು ಸುಮಲತಾ ಅಂಬರೀಷ್ ಅವರು ಪರೋಕ್ಷವಾಗಿ ಡಿ.ಸಿ. ತಮ್ಮಣ್ಣ ಅವರನ್ನು ಟೀಕಿಸಿದರು..

ಸುಮಲತಾ ಅಂಬರೀಷ್ ಅವರು ಈ ವೇಳೆ ಕುಟುಂಬ ರಾಜಕಾರಣ ವಿರುದ್ಧ ಮಾತನಾಡಿ ಜೆಡಿಎಸ್ ಪಕ್ಷವನ್ನು ಪರೋಕ್ಷವಾಗಿ ತಿವಿದರು. “ಅಂಬರೀಷ್ ಅವರು ಕುಟುಂಬ ರಾಜಕಾರಣ ಮಾಡಲಿಲ್ಲ. ತಮ್ಮ ಕುಟುಂಬಕ್ಕಿಂತ ಬೇರೆಯವರನ್ನು ಬೆಳೆಸುವ ಗುಣ ಹೊಂದಿದ್ದರು,” ಎಂದವರು ಹೇಳಿದರು.

“ಈಗ ನನ್ನ ಜೊತೆ ಯಾರಿದ್ದಾರೆ? ನಾನು ಮತ್ತು ನನ್ನ ಪುತ್ರ ಅಭಿಷೇಕ್ ಮಾತ್ರ ಇರೋದು. ನೀವು ಈಗ ನನ್ನ ಜೊತೆ ಇದ್ದೀರಿ” ಎಂದು ಮಂಡ್ಯದ ಅಭಿಮಾನಿಗಳಿಗೆ ಸುಮಲತಾ ಅಂಬರೀಷ್ ಕೃತಜ್ಞತೆ ಸಲ್ಲಿಸಿದರು.

ಈಗ ನಾವು ಯಾರಿಗೂ ಉತ್ತರ ಕೊಡುವ ಅಗತ್ಯವಿಲ್ಲ. ಚುನಾವಣೆ ಬಂದಾಗ ನೀವೇ ಉತ್ತರ ಕೊಡಿ ಎನ್ನುವ ಮೂಲಕ ಸುಮಲತಾ ಅವರು ಚುನಾವಣೆ ರಣಕಹಳೆ ಊದಿದರು.

Comments are closed.