ಕರ್ನಾಟಕ

ನಿಖಿಲ್‌‌‌‌ ಸುಮಲತಾ ಸ್ಪರ್ಧೆಗೆ ವಿರೋಧ

Pinterest LinkedIn Tumblr


ಮಂಡ್ಯ: ಜಿಲ್ಲೆಯ ಜನಸಾಮಾನ್ಯರ ಬದುಕಿನ ಸಮಸ್ಯೆಗಳ ಬಗ್ಗೆ ಅರಿವಿಲ್ಲದ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳೆಂದು ಬಿಂಬಿಸಲಾಗುತ್ತಿರುವುದು ಖಂಡನೀಯ ಎಂದು ಕರ್ನಾಟಕ ಜನಶಕ್ತಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ರೈತ ಸಭಾಂಗಣದ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಪ್ರತಿಮೆ ಎದುರು ಸೇರಿದ ಕಾರ್ಯಕರ್ತರು ರಕ್ತಸಂಬಂಧದ ಹೊರತಾಗಿ ಬೇರ‍್ಯಾವ ಮಾನದಂಡವು ಇರದ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳೆಂದು ಬಿಂಬಿಸುತ್ತಿರುವುದು ಸರಿಯಾದ ಆಯ್ಕೆಯಲ್ಲ ಎಂದು ಕಿಡಿಕಾರಿದರು.

ರೈತ ಸಂಘದ ನಾಗಣ್ಣ ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 16 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಅವರಲ್ಲಿ ಒಬ್ಬರು ಸ್ಪರ್ಧಿಸಲು ಸಾಧ್ಯವಿರಲಿಲ್ಲವೆ. ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾರನ್ನು ಅಭ್ಯರ್ಥಿ ಮಾಡಲು ಹೊರಟ್ಟಿರುವುದು ಖಂಡನೀಯ. ಜಿಲ್ಲೆಯ ಕಾಳಜಿ ಇರುವವರು ಅಭ್ಯರ್ಥಿಗಳಾಗಲಿ ಎಂದರು.

ನಿಖಿಲ್ ಸ್ಪರ್ಧೆ ಎಷ್ಟರ ಮಟ್ಟಿಗೆ ಸರಿ?:
ದೇವೇಗೌಡರ ಕುಟುಂಬದಲ್ಲಿ ಈಗಾಗಲೇ ಎಂಪಿ, ಸಿಎಂ, ಇಬ್ಬರು ಸಚಿವರು, ಇಬ್ಬರು ಶಾಸಕರು ಜಿಪಂ ಸದಸ್ಯರಾಗಿ ಏಳು ಜನರು ಅಧಿಕಾರ ಅನುಭವಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರ ಇಬ್ಬರು ಮೊಮ್ಮಕ್ಕಳು ಕಣಕ್ಕಿಳಿಯುವುದು ಖಚಿತವಾಗಿದೆ. ಮಂಡ್ಯ ಜಿಲ್ಲೆಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಎಷ್ಟು ಸರಿ. ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಯಾವ ಮಹತ್ವದ ಗುಣವನ್ನು ನಿಖಿಲ್ ಕುಮಾರಸ್ವಾಮಿಯಲ್ಲಿ ಕಂಡಿದ್ದೀರಾ ಎಂಬ ಬಗ್ಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿರುವ ಎಂಟು ಶಾಸಕರು ತಿಳಿಸಬೇಕು ಎಂದು ಕರ್ನಾಟಕ ಜನಶಕ್ತಿಯ ಸಿದ್ದರಾಜು ಪ್ರಶ್ನಿಸಿದರು.

ಸುಮಲತಾಗೆ ಯಾವ ಮಾನದಂಡವಿದೆ?
ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಮಾಡುವುದರ ಹಿಂದೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಅಧಿಕಾರ ದಾಹದ ತಮ್ಮ ಕುಟುಂಬದವರಿಗೆ ಅಧಿಕಾರ ನೀಡಲು ಹೊರಟಿರುವ ಇವರಿಗೆ ಜಿಲ್ಲೆಯಲ್ಲಿ ಸಮರ್ಥ ಅಭ್ಯರ್ಥಿಗಳು ಕಾಣುತ್ತಿಲ್ಲ. ಅಂಬರೀಶ್ ಹೆಸರೊಂದನ್ನು ಬಿಟ್ಟರೆ ಸುಮಲತಾ ಅವರಿಗೆ ಬೇರೆ ಯಾವ ಮಾನದಂಡವೂ ಇಲ್ಲ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಇಬ್ಬರಿಗೂ ಅರಿವಿಲ್ಲ. ಮಂಡ್ಯ ಜನತೆ ಇವರಿಬ್ಬರನ್ನು ತಿರಸ್ಕರಿಸಿ ಜಿಲ್ಲೆಯ ಬಗ್ಗೆ ಅರಿವಿರುವ ವ್ಯಕ್ತಿಗೆ ಮತಚಲಾಯಿಸಬೇಕು ಎಂದು ಸಮತಾ ರಂಗದ ಎಸ್.ಎಚ್.ಲಿಂಗೇಗೌಡ ಹೇಳಿದರು.

Comments are closed.