ಕರ್ನಾಟಕ

ನೀರು ಕೇಳಿದ ಕೆಲಸದವರಿಗೆ ಕಾಫಿ ಮಾಡಿ ಕೊಟ್ಟವಳ ಹತ್ಯೆ!

Pinterest LinkedIn Tumblr


ಮಡಿಕೇರಿ: ತೋಟದ ಒಂಟಿ ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ವೃದ್ಧ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ಮಡಿಕೇರಿಯ ಕುಂಬಳದಾಳು ಗ್ರಾಮದಲ್ಲಿ ನಡೆದಿದೆ.

74 ವರ್ಷದ ರಾಧಾ ಕೊಲೆಯಾದ ವೃದ್ಧೆಯಾಗಿದ್ದು, ಫೆ.21 ರಂದು ಮನೆಯಲ್ಲಿಯೇ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಮನೆಯಲ್ಲಿದ್ದ ಅಮ್ಮ 3 ದಿನಗಳಾದರೂ ಫೋನ್ ಕರೆ ಸ್ವೀಕರಿಸದ ಪರಿಣಾಮ ಮಗ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿತ್ತು.

ಏನಿದು ಪ್ರಕರಣ?
ಕೆಲ ದಿನಗಳ ಹಿಂದೆ ಪಕ್ಕದ ಊರಿನಲ್ಲಿ ಲೈನ್ಮನೆಯಲ್ಲಿ ಉಳಿದುಕೊಂಡಿದ್ದ ಮದನ್, ಸುಬ್ರಹ್ಮಣಿ ಹಾಗೂ ಕಾವ್ಯಾ ರಾಧಾ ಅವರ ಮನೆಗೆ ಕಾಫಿ ಕೊಯ್ಯಲು ಬಂದಿದ್ದರು. ಕಾಫಿ ಕೊಯ್ಲು ಪೂರ್ತಿಯಾದ ಬಳಿಕ ಕಾಫಿ ವ್ಯಾಪಾರ ಮಾಡಿ 2 ಲಕ್ಷ ರೂ. ಹಣವನ್ನು ರಾಧಾ ತೆಗೆದುಕೊಂಡಿದ್ದರು.

ತೋಟಕ್ಕೆ ಕೆಲಸಕ್ಕೆ ಬಂದಿದ್ದ ಆರೋಪಿಗಳು ವೃದ್ಧೆ ಹಣ ಪಡೆದಿರುವುದನ್ನು ಕಂಡು ವೃದ್ಧೆಯ ಹಣ ದೋಚಲು ಟಾರ್ಗೆಟ್ ಮಾಡಿದ್ದರು. ಅದರಂತೆ ಫೆ.21 ರಂದು ಲೈನ್ಮನೆಯಿಂದ ಕುಶಾಲನಗರದ ನಮ್ಮ ಊರಿಗೆ ಹೋಗೋಣ ಎಂದು ಹೊರಟಿದ್ದೆವು. ನಿಮಗೆ ಹೇಳಿ ಹೋಗಲು ಬಂದಿದ್ದೇವೆ. ಕುಡಿಯಲು ನೀರು ನೀಡಿ ಎಂದು ಕೇಳಿ ರಾಧಾ ಅವರ ಮನೆ ಪ್ರವೇಶಿಸಿದ್ದರು. ಇತ್ತ ತೋಟದ ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರು ಎಂಬ ಮಾನವೀಯ ದೃಷ್ಟಿಯಿಂದ ಕಾಫಿ ಮಾಡಿಕೊಡಲು ಅಡುಗೆ ಮನೆಗೆ ತೆರಳಿದ್ದರು. ಮೊದಲೇ ಪ್ಲಾನ್ ಮಾಡಿದಂತೆ ಕಾರ್ಯ ಪ್ರವೃತ್ತರಾದ ಆರೋಪಿಗಳು ಅವರ ಕೈ ಕಾಲು ಕಟ್ಟಿ ಕಳ್ಳತನಕ್ಕೆ ಇಳಿದಿದ್ದರು.

ರಾಧಾ ಅವರ ಬಾಯಿ ಮುಚ್ಚಿ ಆರೋಪಿಗಳು ಹಣ ಹಾಗೂ ಚಿನ್ನಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಭಯಗೊಂಡ ರಾಧಾ ಅವರು ತಮ್ಮಲ್ಲಿದ್ದ ಒಡವೆ ನೀಡಿದ್ದರು. ಆದರೆ ವ್ಯಾಪಾರದಲ್ಲಿ ಬಂದಿದ ಹಣವನ್ನು ಆದಾಗಲೇ ಬ್ಯಾಂಕಿನಲ್ಲಿ ಇಟ್ಟಿದ್ದ ಪರಿಣಾಮ ಆರೋಪಿಗಳಿಗೆ ಹಣ ಸಿಕ್ಕಿರಲಿಲ್ಲ. ಒಡವೆ ನೀಡಿ ಎಲ್ಲವನ್ನೂ ತೆಗೆದುಕೊಂಡು ಹೋಗಿ, ನಾನು ಯಾರಿಗೂ ಹೇಳೋದಿಲ್ಲ ಎಂದು ರಾಧಾ ಅವರು ಅಂಗಲಾಚಿದರೂ ಕೂಡ ಕರುಣೆ ತೋರದೆ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಕೊನೆಗೆ ಅಮ್ಮ ಫೋನ್ ಕರೆಗೆ ಉತ್ತರಿಸಲಿಲ್ಲ ಎಂದು ಮನೆಗೆ ಭೇಟಿ ಕೊಟ್ಟ ವೇಳೆ ರಾಧಾ ಅವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ದೂರು ಪಡೆದ ಕೊಡಗು ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ರಾಧಾ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಒಡವೆಯೊಂದಿಗೆ ಪರಾರಿಯಾಗಿದ್ದ ಆರೋಪಿಗಳು ಮೈಸೂರಿಗೆ ಆಗಮಿಸಿದ್ದರು. ವೃದ್ಧೆ ರಾಧಾ ಅವರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದು, ಎಲ್ಲರೂ ದೂರದ ಊರಿನಲ್ಲಿ ವಾಸಿಸುತ್ತಿದ್ದಾರೆ. ಕೊಲೆ ನಡೆದ ಬಳಿಕ ಕುಟುಂಬಸ್ಥರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದಿದ್ದ ವೇಳೆ ಕೂಲಿ ಕಾರ್ಮಿಕರ ಬಗ್ಗೆ ಮಾಹಿತಿ ಲಭಿಸಿದೆ. ಆರೋಪಿಗಳ ಬೆನ್ನತ್ತಿದ್ದ ಪೊಲೀಸರಿಗೆ ಮೈಸೂರಿನಲ್ಲಿ ಇರುವ ವಿಷಯ ತಿಳಿದು ಬಂದಿದ್ದು, ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Comments are closed.