ಕರ್ನಾಟಕ

ಚೀನಾ ವಸ್ತುಗಳ ಮೇಲೆ ನಿಷೇಧ ಯಾಕಿಲ್ಲ: ನಿರ್ಮಲಾ ಸೀತಾರಾಮನ್‍ಗೆ ವಿದ್ಯಾರ್ಥಿಗಳ ಪ್ರಶ್ನೆ

Pinterest LinkedIn Tumblr


ಬೆಂಗಳೂರು: ರಾಜಾಜಿನಗರದ ಕೆಎಲ್‍ಇ ಸೊಸೈಟಿ ಸ್ಕೂಲ್‍ನಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಅವರು ವಿದ್ಯಾರ್ಥಿಗಳ ಜೊತೆ ಭಾನುವಾರ ಸಂವಾದ ಕಾರ್ಯಕ್ರಮ ನಡೆಸಿದರು. ಚೈನಾ ವಸ್ತುಗಳ ಮೇಲೆ ನಿಷೇಧ ಹೇರುವುದು, ಪುಲ್ವಾಮಾ ದಾಳಿ ಸೇರಿದಂತೆ ಅನೇಕ ವಿಚಾರವಾಗಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದರು.

ಪಾಕಿಸ್ತಾನ ಬಗ್ಗೆ ತಲೆಕೆಡಿಸಿಕೊಂಡಿರುವ ನಾವು ಚೀನಾವನ್ನ ಮರೆತಿರುವುದೇಕೆ? ಚೈನಾ ಉತ್ಪನ್ನಗಳ ಮೇಲೆ ನಿಷೇಧ ಏಕೆ ಹೇರುತ್ತಿಲ್ಲ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್ ಅವರು, ಚೈನಾ ವಸ್ತುಗಳಿಗೆ ನಿಷೇಧ ಹೇರುವುದು ಅಷ್ಟು ಸುಲಭವಲ್ಲ. ಒಂದು ವೇಳೆ ನಿಷೇಧ ಹೇರಿದರೆ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಪೆಟ್ಟು ಬೀಳುತ್ತದೆ. ಚೀನಾದಿಂದ ಬರುತ್ತಿರುವ ಕಡಿಮೆ ದರದ ವಸ್ತುಗಳಿಂದಲೇ ಅನೇಕ ಸಣ್ಣ ಕೈಗಾರಿಕೆಗಳು ನಡೆಯುತ್ತಿವೆ. ಚೈನಾದ ವಸ್ತುಗಳನ್ನ ನಿಷೇಧಿಸಿದರೆ ಅದು ನಮ್ಮ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಕಡಿಮೆ ದರದ ವಸ್ತುಗಳು ಗಗನಕ್ಕೇರಿದರೆ ಅದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸುವ ಮೂಲಕ ಉತ್ತರ ನೀಡಿದರು.

ಅಮೆರಿಕವು ಒಸಮಾ ಬಿನ್ ಲ್ಯಾಡನ್ ಹತ್ಯೆ ಮಾಡಿದಂತೆ ಪುಲ್ವಾಮಾದಲ್ಲಿ ದಾಳಿ ಮಾಡಿದ ಉಗ್ರರಿಗೆ ತಿರುಗೇಟು ನೀಡಲು ಸಾಧ್ಯವಿಲ್ಲವೇ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 40 ಹುತಾತ್ಮ ಯೋಧರ ಬಲಿದಾನ ನೀರಿನಲ್ಲಿ ಹೋಮವಾಗಲು ಬಿಡುವುದಿಲ್ಲ. 2014ರ ನಂತರ ಉಗ್ರರ ಉಪಟಳ ಕಡಿಮೆಯಾಗಿದೆ ಎಂದು ಉತ್ತರಿಸುವ ಮೂಲಕ ಪ್ರತಿಕಾರದ ಸುಳಿವು ಬಿಟ್ಟುಕೊಟ್ಟರು.

ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಕಳೆದ ಚುನಾವಣೆ ಬಿಜೆಪಿಯನ್ನು ಗೆಲ್ಲಿಸಿದ್ದು ಮುಖ್ಯವಲ್ಲ. ಈ ಬಾರಿ ಬಹುಮತದಿಂದ ಜಯಗಳಿಸುವಂತೆ ಮಾಡುವುದು ನಮಗೆ ಮುಖ್ಯವಾಗಿದೆ. ಒಂದು ವೇಳೆ 2019ರ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಸರ್ಕಾರ ರಚನೆ ಮಾಡಿದರೆ ಮುಂದಿನ 50 ವರ್ಷಗಳ ಕಾಲ ನಮ್ಮ ಪಕ್ಷವೇ ಅಧಿಕಾರದಲ್ಲಿರುತ್ತೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಅಭಿವೃದ್ಧಿಗಳನ್ನು ಪ್ರಸ್ತಾಪಿಸಿದ ಸಚಿವರು, ದಿನದ ಇಪ್ಪತ್ತು ನಾಲ್ಕು ಗಂಟೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕೆಲಸ ಮಾಡುತ್ತಿದೆ. ಒಂದೇ ಒಂದು ರೂಪಾಯಿ ವ್ಯರ್ಥವಾಗದಂತೆ ದೇಶದ ಖಜಾನೆಯನ್ನು ಉಪಯೋಗಿಸಿದ್ದೇವೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರಕ್ಕೆ ಬರುತ್ತೆಂದು ನಾನು ತುಂಬಾ ವಿಶ್ವಾಸ ಹೊಂದಿದ್ದೇನೆ ಎಂದರು.

ವೇದಿಕೆಯಲ್ಲಿ ಒಂದಾಂದ ನಂತರ ಒಂದು ಯೋಜನೆಗಳನ್ನು ಗಂಟೆಗಟ್ಟಲೆ ಹೇಳಿಕೊಂಡು ಹೋಗಬಹುದು. 2014ರಲ್ಲಿ ಕೇಂದ್ರ ಸರ್ಕಾರ ರಚನೆಯಾದಾಗಿನಿಂದ ಯೋಜನೆಗಳು, ನಿರ್ಧಾರಗಳು ಬೆಳೆಯುತ್ತ ಬಂದಿವೆ. ನಿಮ್ಮ ನಿರ್ದಿಷ್ಟ ಪ್ರಶ್ನೆಗಳಿಗೆ ನಾನು ಖುಷಿಯಿಂದ ಉತ್ತರಿಸುವೆ. ಆಹಾರ ಭದ್ರತೆ, ಅಗತ್ಯ ವಸ್ತುಗಳ ಬೆಲೆ ಇನ್ನಿತರ ವಿಚಾರಗಳು ಹಿಂದೆ ಹೇಗಿದ್ದವು ಈಗ ಹೇಗಿದೆ ಅನ್ನುವ ವ್ಯತ್ಯಾಸ ನಿಮಗೆ ತಿಳಿದಿರಲಿ. ಜಿಎಸ್‍ಟಿ, ಕಪ್ಪು ಹಣ ವಿಚಾರಗಳು ಜಾರಿಗೆ ಬರುತ್ತಾ ಎನ್ನುವುದು ಪ್ರಶ್ನೆಯಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಭಾರತದ ಜೊತೆ ವಿಶ್ವದ ಅನೇಕ ದೇಶಗಳು ಉತ್ತಮ ಆಂತರಿಕ ಸಂಬಂಧ ಹೊಂದಿವೆ. ಇದು ಪ್ರಧಾನಿ ಅವರಿಂದ ಸಾಧ್ಯವಾಗಿದೆ. ಪ್ರಗತಿ ಕಾರ್ಯಕ್ರಮದ ಮೂಲಕ ಜಿಲ್ಲಾಧಿಕಾರಿ ಜೊತೆ ಮೋದಿ ನೇರವಾಗಿ ಚರ್ಚಿಸುತ್ತಾರೆ. ಇದು ಅವರ ಗುಣ ಎಂದರು.

ಕಾಂಗ್ರೆಸ್ ಸರ್ಕಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು, ಯುಪಿಎ ಅವಧಿಯಲ್ಲಿ ರಕ್ಷಣಾ ವ್ಯವಸ್ಥೆ ಕುಲಗೆಟ್ಟಿತ್ತು. ಸೈನಿಕರಿಗೆ ಬಂದೂಕು ಇದ್ದರೆ ಬುಲೆಟ್ ಇರುತ್ತಿರಲಿಲ್ಲ. ಬುಲೆಟ್ ಪ್ರೂಫ್ ಜಾಕೆಟ್ ಇರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಮಾರ್ಗದರ್ಶನದಲ್ಲಿ ಸಮಸ್ಯೆಗಳನ್ನು ನಾನು ನಿವಾರಿಸಿದ್ದೇನೆ. ಒಂದು ವರ್ಷದಲ್ಲಿ ಭಾರತೀಯ ರಕ್ಷಣಾ ವಲಯವನ್ನು ಬಲಗೊಳಿಸಲಾಗಿದೆ. ಒಂದೊಂದು ರೂಪಾಯಿಯನ್ನು ರಕ್ಷಣಾ ವಲಯಕ್ಕೆ ಸದ್ಬಳಕೆ ಆಗಿದೆ. ರಕ್ಷಣಾ ವಲಯಕ್ಕೆ ಮೀಸಲಿಟ್ಟ ಪ್ರತಿ ಅನುದಾನವನ್ನು ಒಂದೇ ವರ್ಷದಲ್ಲಿ ಸದ್ಬಳಕೆ ಮಾಡಿಕೊಂಡಿದ್ದೇವೆ. ಪ್ರತಿ ವರ್ಷ ಬರುವ ಅನುದಾನ ಎಲ್ಲೂ ದುರ್ಬಳಕೆಯಾಗದಿದ್ದರೆ ರಕ್ಷಣಾ ವಲಯ ಎಷ್ಟು ಬಲಗೊಳ್ಳುತ್ತದೆಂದು ನೀವೇ ಯೋಚಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು.

Comments are closed.