ಕರ್ನಾಟಕ

ಆಪರೇಷನ್​​ ಕಮಲ: ಬಿಜೆಪಿಗೆ ಅತೃಪ್ತ ಕಾಂಗ್ರೆಸ್​​ ಮುಖಂಡರು ಸೇರ್ಪಡೆ!

Pinterest LinkedIn Tumblr


ಕೋಲಾರ: ಸಾರ್ವತ್ರಿಕ ಲೋಕಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆಯೇ ಬಯಲು ಸೀಮೆ ಪ್ರದೇಶ ಕೋಲಾರದಲ್ಲಿ ಬಿಜೆಪಿ ಬಲ ಹೆಚ್ಚುತ್ತಲೇ ಇದೆ. ಕಾಂಗ್ರೆಸ್​​, ಜೆಡಿಎಸ್​​​ನಲ್ಲಿ ಗುರುತಿಸಿಕೊಂಡಿದ್ದ ಘಟಾನುಘಟಿ ಸ್ಥಳೀಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪನವರ ಸಮ್ಮುಖದಲ್ಲೇ ಸೇರ್ಪಡೆಯಾಗಿದ್ದು, ಕಾಂಗ್ರೆಸ್​​ ಸಂಸದ ಕೆ.ಎಚ್​​​ ಮುನಿಯಪ್ಪನವರಿಗೆ ಭಾರೀ ಹಿನ್ನಡೆಯಾಗಿದೆ. ಅಲ್ಲದೇ ಬಿಜೆಪಿಯೂ ಸ್ಥಳೀಯ ಕಾಂಗ್ರೆಸ್​​ ನಾಯಕರನ್ನು ಸೆಳೆಯಲು ಮುಂದಾಗಿತ್ತು. ಬಿಎಸ್​​ವೈ ನಿರೀಕ್ಷೆಯಂತೆಯೇ ಅತೃಪ್ತ ಕಾಂಗ್ರೆಸ್ ಮುಖಂಡರು ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ​​​​

ಸೋಲಿಲ್ಲದ ಸರದಾರ ಕೆ.ಎಚ್ ಮುನಿಯಪ್ಪ ಅವರ ವಿರುದ್ಧ ಸದಾ ಕತ್ತಿ ಮಸೆಯುತ್ತಿದ್ದ ಕಾಂಗ್ರೆಸ್ಸಿನ ಸ್ಥಳೀಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಬಾಜಾಚಿ ಚನ್ನಯ್ಯ ಮತ್ತು ಬಿ.ಪಿ ಮುನಿವೆಂಕಟಪ್ಪ ಎಂಬುವರು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲೇ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಿದ್ಧಾರೆ. ಬಿ.ಎಸ್​​​ ಯಡಿಯೂರಪ್ಪನವರ ಸಮ್ಮುಖದಲ್ಲೇ ಸೇರ್ಪಡೆಯಾಗಿದ್ದು, ಸಂಸದ ಮುನಿಯಪ್ಪ ಅವರನ್ನು ಸೋಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ಧಾರೆ.

ಹಿಂದಿನಿಂದಲೂ ದಲಿತ ಹೋರಾಟದ ಮೂಲಕ ಈ ನಾಯಕರು ಸೋಲಿಲ್ಲದ ಸರದಾರ ಮುನಿಯಪ್ಪನವರ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದರು. ಸದಾ ಒಂದಲ್ಲ ಒಂದು ರೀತಿಯ ಪ್ರತಿಭಟನೆ ಮಾಡುವ ಮುಖೇನ ಕಾಂಗ್ರೆಸ್​​ ಸಂಸದರ ವಿರುದ್ಧ ಕೆಂಡಕಾರುತ್ತಲೇ ಬಂದಿದ್ದರು. ಈಗ ಅಧಿಕೃತವಾಗಿ ಬಿಜೆಪಿಯತ್ತ ಮುಖ ಮಾಡಿದ ಇವರು, ಮಾದಿಗ ಸಮುದಾಯದ ಮತಗಳನ್ನು ಕಾಂಗ್ರೆಸ್ಸಿನಿಂದ ದೂರ ಮಾಡಲು ಮುಂದಾಗಿದ್ದಾರೆ.

ಇಲ್ಲಿಯವರೆಗೂ ಕೆ.ಎಚ್​ ಮುನಿಯಪ್ಪನವರು ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ. ಹೀಗಾಗಿ ಈ ಬಾರಿ ಕಾಂಗ್ರೆಸ್​​ ಸಂಸದರನ್ನು ಸೋಲಿಸಬೇಕೆಂಬ ಪಣ ತೊಟ್ಟಿದ್ದೇವೆ. ಈಗಾಗಲೇ ಇದಕ್ಕೆ ಸಿದ್ದತೆ ನಡೆಸಿಕೊಂಡಿದ್ದೇವೆ. ಚುನಾವಣೆಗಾಗಿ ಮಾದಿಗ ಸಮುದಾಯದ ಮತಗಳನ್ನ ಸೆಳೆಯುವ ತಂತ್ರ ಹೆಣೆಯಲಾಗಿದೆ. ನಾವು ಈ ಬಾರಿ ಕಾಂಗ್ರೆಸ್ಸಿಗೆ ಮಾದಿಗ ಸಮುದಾಯದ ಮತಗಳನ್ನು ಹಾಕಿಸೋಲ್ಲ. ಹಾಗಾಗಿ ಕೆಲಸ ಮಾಡದ ಕಾಂಗ್ರೆಸ್ಸಿಗಲ್ಲದೇ, ಈ ಸಲ ಬಿಜೆಪಿಗೆ ಮತಚಲಾಯಿಸಿ ಎನ್ನುತ್ತಾರೆ ಇತ್ತೀಚೆಗೆ ಬಿಜೆಪಿ ಸೇರಿದ ಕಾಂಗ್ರೆಸ್​​ ಅತೃಪ್ತ ಮುಖಂಡರು.

ಸೋಲಿಲ್ಲದ ಸರದಾರ ಸಂಸದ ಮುನಿಯಪ್ಪ ಇದುವರೆಗೂ ಲೋಕಸಭಾ ಚುನಾವಣೆಯಲ್ಲಿ ಸೋಲೇ ಕಂಡಿಲ್ಲ. ಕಳೆದ 7 ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಸೋಲುಣಿಸಿರುವ ಮುನಿಯಪ್ಪ ಜಿಲ್ಲೆಯನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಿದ್ದಾರೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಸತತ ಸೋಲನುಭವಿಸಿರುವ ಮುನಿಯಪ್ಪ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಜಯಗಳಿಸಿಲ್ಲ.

ವಿಧಾನಸಭೆ ಚುನಾವಣೆ ಕಡೆ ಅಷ್ಟೊಂದು ಒಲವು ತೋರದ ಮುನಿಯಪ್ಪ ಸ್ಥಳೀಯ ನಾಯಕರಿಗೆ ಚುನಾವಣಾ ಉಸ್ತುವಾರಿ ನೀಡಿದ್ದಾರೆ. ಆದರೆ ಲೋಕಸಭೆ ಚುನಾವಣೆ ವಿಚಾರಕ್ಕೆ ಬಂದರೆ ಮುನಿಯಪ್ಪ ಎಲ್ಲರಿಗಿಂತ ಒಂದೆಜ್ಜೆ ಮುಂದಿರುತ್ತಾರೆ. ಹಾಗಂತ ಇವರು ಜನ ಮೆಚ್ಚಿದ ನಾಯಕರೂ ಆಗಿಲ್ಲ. ಸಮಯೋಚಿತ ರಾಜಕೀಯ, ಜೊತೆಗೆ ಮೀಸಲು ಕ್ಷೇತ್ರವಾದ್ದರಿಂದ ಜಾತಿ ಲೆಕ್ಕಾಚಾರದಿಂದಲೂ ಮುನಿಯಪ್ಪ ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕೋಲಾರ ಕೇಶವ ಮುನಿಯಪ್ಪಗೆ ಪ್ರತಿರೋಧ ಒಡ್ಡಿದ್ದು ಬಿಟ್ಟರೆ, ಬಿಜೆಪಿ ಜಿಲ್ಲೆಯಲ್ಲಿ ಹೇಳ ಹೆಸರಿಲ್ಲದಂತಾಗಿತ್ತು. ಕ್ಷೇತ್ರದಲ್ಲಿ ಸತತ 7 ಬಾರಿ ಗೆಲುವಿಗೆ ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳ ಸಹಕಾರ ಇದೆ ಎಂಬ ಅಭಿಪ್ರಾಯವಿದೆ. ಬಿಎಸ್ ಯಡಿಯೂರಪ್ಪ ಹಾಗೂ ಎಚ್‍ಡಿ ದೇವೇಗೌಡರ ಬಳಿ ಆತ್ಮೀಯತೆ ಬೆಳೆಸಿಕೊಂಡಿರುವ ಮುನಿಯಪ್ಪ ತಮ್ಮ ವಿರೋಧದ ಅಭ್ಯರ್ಥಿಯನ್ನಾಗಿ ಅವರೇ ಆಯ್ಕೆ ಮಾಡಿಕೊಂಡು ಜಯ ಗಳಿಸುವುದಾಗಿ ಹೇಳುತ್ತಾರೆ ಇಲ್ಲಿಯ ಜನರು.

Comments are closed.