ಕರ್ನಾಟಕ

ಆಪರೇಷನ್ ಹಸ್ತ ಸಕ್ಸಸ್, ಪ್ರಹ್ಲಾದ್ ಜೋಶಿ, ಶೆಟ್ಟರ್‌ಗೆ ಮುಖಭಂಗ

Pinterest LinkedIn Tumblr


ಧಾರವಾಡ: ತೀವ್ರ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗಾದೆ ಕೊನೆಗೂ ನಿರೀಕ್ಷೆಯಂತೆ ಕಾಂಗ್ರೆಸ್ ಪಾಲಾಗಿದೆ.

ಇಂದು [ಬುಧವಾರ] ಧಾರವಾಡ ಜಿಪಂ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ನ ವಿಜಯಲಕ್ಷ್ಮಿ ಪಾಟೀಲ್ ಅವರು ಅವಿರೋಧವಾಗಿ ಆಯ್ಕೆಯಾದರು.

ಜಿಪಂ ಒಟ್ಟು 22 ಸಂಖ್ಯಾಬಲ ಹೊಂದಿದ್ದು, ಬಿಜೆಪಿ 10, ಕಾಂಗ್ರೆಸ್‌ 11 ಹಾಗೂ ಒಬ್ಬ ಪಕ್ಷೇ​ತರ ಸದ​ಸ್ಯ​ರಿ​ದ್ದಾರೆ. ಪಕ್ಷೇ​ತರ ಸದ​ಸ್ಯ ಶಿವಾ​ನಂದ ಕರಿ​ಗಾರ ಬೆಂಬಲ ಪಡೆದು ಬಿಜೆಪಿ ಎರಡೂವರೆ ವರ್ಷಗಳ ಹಿಂದೆ ಅಧಿ​ಕಾ​ರದ ಗದ್ದುಗೆ ಏರಿತ್ತು. ಚೈತ್ರಾ ಶಿರೂರ ಅಧ್ಯಕ್ಷೆಯಾಗಿದ್ದರು.

ಆದ್ರೆ ಅಧ್ಯ​ಕ್ಷೆ ಚೈತ್ರಾ ಶಿರೂರ ವರ್ತ​ನೆ ಹಾಗೂ ಅಧಿ​ಕಾ​ರಿ​ಗಳು, ಸದ​ಸ್ಯ​ರೊಂದಿಗೆ ಹೊಂದಾ​ಣಿಕೆ ಇಲ್ಲ​ದಿ​ರುವ ಕಾರಣ ಸ್ವ-ಪಕ್ಷ ಸದ​ಸ್ಯ​ರ​ಲ್ಲಿಯೇ ಭಿನ್ನ​ಮತ ಉಂಟಾ​ಗಿತ್ತು. ಇದರ ಲಾಭ ಪಡೆದ ಕಾಂಗ್ರೆಸ್‌ ಸದ​ಸ್ಯರು ಅವಿ​ಶ್ವಾಸ ಮಂಡಿಸಿದ್ದರಿಂದ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಅವಿಶ್ವಾಸ ನಿರ್ಣಯ ಯಶಸ್ಸಿನ ರೂವಾರಿ ಹಾಗೂ ಪಕ್ಷೇತರ ಸದಸ್ಯ, ಹಾಲಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರನ್ನು ಆಪರೇಷನ್ ಹಸ್ತದೊಂದಿಗೆ ಕಾಂಗ್ರೆಸ್ ಧಾರವಾಡ ಜಿಲ್ಲಾ ಪಂಚಾಯತ್ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಜಿಲ್ಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಹಾಲಿ ಸಂಸದ ಪ್ರಹ್ಲಾಸ್ ಜೋಶಿ ಸೇರಿದಂತೆ ಘಟಾನುಘಟಿ ನಾಯಕರಿದ್ದರೂ ಓರ್ವ ಪಕ್ಷೇತರ ಸದಸ್ಯನನ್ನು ಸೆಳೆಯುವಲ್ಲಿ ಬಿಜೆಪಿ ವಿಫಲವಾಗಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ.

Comments are closed.