ಕರ್ನಾಟಕ

ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಅಂತ್ಯ, ಹಾಲಿ 10 ಸಂಸದರಿಗೆ ಟಿಕೆಟ್.!

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ನಡುವೆ ಟಿಕೆಟ್ ಫೈಟ್ ಜೋರಾಗಿದೆ. ಕಾಂಗ್ರೆಸ್ ಹಾಲಿ ಸಂಸದರು ಇರುವ ಕ್ಷೇತ್ರಕ್ಕೆ ಜೆಡಿಎಸ್ ಕಣ್ಣಿಟ್ಟಿದೆ. ಆದ್ರೆ ಕಾಂಗ್ರೆಸ್ ಬಿಟ್ಟು ಕೊಡಲು ತಯಾರಿಲ್ಲ.

ಈ ಬಗ್ಗೆ ಇಂದು [ಸೋಮವಾರ] ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದೆ. ಕಾಂಗ್ರೆಸ್ ಹಾಲಿ 10 ಸಂಸದರಿಗೆ ಟಿಕೆಟ್ ನೀಡೋದು ಖಚಿತವಾಗಿದ್ದು, ಹಾಲಿ ಸಂಸದರ ಕ್ಷೇತ್ರಗಳನ್ನ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.

ಇನ್ನು ಜೆಡಿಎಸ್ ಕಾಂಗ್ರೆಸ್ ನ ಹಾಲಿ ಸಂಸದರಿರುವ ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಆದರೆ, ಮೋದಿ ಅಲೆ ಇರುವಾಗಲೇ 9 ಸಂಸದರು ರಾಜ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

ಈಗ ಮೋದಿ ಅಲೆ ಕಡಿಮೆಯಾಗಿದೆ. ಹೀಗಾಗಿ ಗೆದ್ದ ಕ್ಷೇತ್ರ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಸಂಸದ ವೀರಪ್ಪ ಮೊಯ್ಲಿ ಸೇರಿದಂತೆ ಇತರೆ ಸಂಸದರು ಪಟ್ಟು ಹಿಡಿದಿದ್ದರು. ಸಂಸದರ ಒತ್ತಡಕ್ಕೆ ಮಣಿದು 10 ಹಾಲಿ ಸಂಸದರಿಗೆ ಟಿಕೆಟ್ ನೀಡಲು ಇಂದಿನ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧಾರವಾಗಿದೆ.

ಇಬ್ಬರು ಅಲ್ಪಸಂಖ್ಯಾತರಿಗೆ ಟಿಕೆಟ್
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲು ಕಾಂಗ್ರೆಸ್​ ತೀರ್ಮಾನಿಸಿದೆಯಂತೆ. ಬೆಂಗಳೂರು ಸೆಂಟ್ರಲ್ ಹಾಗೂ ಬೀದರ್ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಸೆಂಟ್ರಲ್ ಹಾಗೂ ಬೀದರ್ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತ ಮತಗಳು ಇವೆ. ಹಾಗಾಗಿ ಅಲ್ಪಸಂಖ್ಯಾತರನ್ನ ಕಣಕ್ಕಿಳಿಸಿದರೆ ಗೆಲುವು ಸರಳ ಎನ್ನುವುದು ರಾಜ್ಯ ಕಾಂಗ್ರೆಸ್​ ನಾಯಕರ ಲೆಕ್ಕಾಚಾರ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಈಗಾಗಲೇ ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ರಿಜ್ವಾನ್ ಅರ್ಷದ್, ರೋಷನ್ ಬೇಗ್, ಬಿ.ಕೆ ಹರಿಪ್ರಸಾದ್, ಸಾಂಗ್ಲಿಯಾನ ಹೆಸರುಗಳು ಚಾಲ್ತಿಯಲ್ಲಿವೆ. ಬೀದರ್ ಕ್ಷೇತ್ರದಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್​ ಪಕ್ಕಾ ಆಗಿದೆ.

ಒಂದು ವೇಳೆ, ಜೆಡಿಎಸ್‌ ಏನಾದ್ರೂ ಈ ಎರಡರಲ್ಲಿ ಯಾವ ಕ್ಷೇತ್ರಕ್ಕಾದರೂ ಪಟ್ಟು ಹಿಡಿದರೆ, ಕಾಂಗ್ರೆಸ್​ ಬೇರೊಂದು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Comments are closed.