ಕರ್ನಾಟಕ

ಹುತಾತ್ಮ ಯೋಧ ಗುರು ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ನಟ ಪ್ರಕಾಶ್ ರೈ ಮೇಲೆ ಹಲ್ಲೆಗೆ ಯತ್ನ

Pinterest LinkedIn Tumblr


ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಬಲಿಯಾದ ವೀರಯೋಧ ಎಚ್. ಗುರು ಅವರ ಅಂತ್ಯಕ್ರಿಯೆ ಸ್ವಗ್ರಾಮ ಮದ್ದೂರಿನ ಗುಡಿಗೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಈ ಮಧ್ಯೆ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ನಟ ಪ್ರಕಾಶ್ ರೈ ಅವರ ವಿರುದ್ಧ ಕೆಲವು ಜನರು ಘೋಷಣೆ ಕೂಗಿ, ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಇಂದು ಬೆಳಗ್ಗೆ ಮೃತ ಯೋಧ ಗುರು ಮನೆಗೆ ತೆರಳಿದ್ದ ಪ್ರಕಾಶ್ ರೈ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ನೆರವು ನೀಡುವುದಾಗಿ ತಿಳಿಸಿದ್ದರು. ಮೃತಯೋಧನ ಅಂತಿಮ ದರ್ಶನ ಪಡೆಯಲು ಪ್ರಕಾಶ್ ರೈ ಸಂಜೆಯವರೆಗೂ ಅಲ್ಲಿಯೇ ಇದ್ದರು. ನಂತರ ಕೆ.ಎಂ.ದೊಡ್ಡಿ ಬಳಿ ಪ್ರಕಾಶ್​ ರೈ ಸಾರ್ವಜನಿಕರನ್ನು ಉದ್ದೇಶಿಸಿ, ನಮ್ಮ ಮೇಲೆ ಇಂತಹ ದಬ್ಬಾಳಿಕೆ, ದಾಳಿಗಳು ನಡೆದಾಗ ನಾವು ನಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ನಿಂತು, ಇಂತಹ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೇಕು ಎಂದು ಹೇಳಿದರು. ಈ ವೇಳೆ ನೆರೆದಿದ್ದ ಜನರ ಮಧ್ಯೆ ಇಂತಹ ಘಟನೆ ನಡೆದಾಗ ಮಾತ್ರ ನೀವು ಸೈನಿಕರ ಪರವಾಗಿ ಮಾತನಾಡಿ, ಉಳಿದ ವೇಳೆ ಪ್ರತಿದಿನ ಸೈನಿಕರ ವಿರುದ್ಧವಾಗಿ ಮಾತನಾಡಿ ಎಂದು ವ್ಯಕ್ತಿಯೊಬ್ಬ ಹೇಳಿದರು. ಈ ಹೇಳಿಕೆಗೆ ಹಲವು ಮಂದಿ ದನಿಗೂಡಿಸಿದರು. ಪ್ರಕಾಶ್​ ರೈ ಎಷ್ಟೇ ಮನವಿ ಮಾಡಿದರೂ ಗದ್ದಲ ಕಡಿಮೆಯಾಗಲಿಲ್ಲ. ಈ ವೇಳೆ ಕೆಲ ವ್ಯಕ್ತಿಗಳು ಪ್ರಕಾಶ್ ರೈ​ ಕಡೆಗೆ ನುಗ್ಗಿ, ಹಲ್ಲೆಗೆ ಮುಂದಾದರು. ತಕ್ಷಣ ಎಚ್ಚೆತ್ತ ಪೊಲೀಸರು ಅವರನ್ನು ಸುತ್ತುವರೆದು ಸುರಕ್ಷಿತವಾಗಿ ಅಲ್ಲಿಂದ ಕರೆದೊಯ್ದರು.

ಕುಟುಂಬಕ್ಕೆ ನೆರವು ನೀಡುವುದಾಗಿ ಪ್ರಕಾಶ್ ರೈ ಭರವಸೆ:

ಹುತಾತ್ಮ ಯೋಧ ಗುರು ಅವರ ಸ್ವಗ್ರಾಮ ಗುಡಿಗೆರೆಗೆ ನಟ ಪ್ರಕಾಶ್​​ ರೈ ಭೇಟಿ ನೀಡಿ ಸೈನಿಕನ ಕುಟುಂಬಕ್ಕೆ ಸಾಂತ್ವನ ಹೇಳಿ, ಉಗ್ರರ ಕೃತ್ಯವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದು ಆಘಾತಕಾರಿ ದುಃಖದ ವಿಷಯ. ಮಗನ ಅಗಲಿಕೆ ನೋವನ್ನು ಸಹಿಸಲಾಗದು. ಸ್ವಾರ್ಥಕ್ಕಲ್ಲ, ದೇಶ ಸೇವೆಗಾಗಿ ಮಗನನ್ನು ಮೀಸಲಿಟ್ಟಿದ್ದರು ಎಂದು ಭಾವುಕರಾದರು. ವಾರದೊಳಗೆ ಮತ್ತೆ ಹುತಾತ್ಮ ಯೋಧನ ಮನೆಗೆ ಬರುವುದಾಗಿ ತಿಳಿಸಿದರು. ಅವರ ಕಷ್ಟಗಳಲ್ಲಿ ಭಾಗಿಯಾಗಿ, ಕುಟುಂಬದ ಸಾಲ, ಸಹೋದರರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

Comments are closed.