ಕರ್ನಾಟಕ

ಜೆಡಿಎಸ್ ಗೂಂಡಾವರ್ತನೆ ವಿರುದ್ಧ ಬಿಜೆಪಿಯಿಂದ ಕೇಂದ್ರ ಗೃಹ ಸಚಿವರಿಗೆ ದೂರು?

Pinterest LinkedIn Tumblr


ಬೆಂಗಳೂರು: ಆಪರೇಷನ್ ಕಮಲದ ಆಡಿಯೋ ಬಿಡುಗಡೆಯಿಂದ ಮುಖಭಂಗಕ್ಕೊಳಗಾಗಿರುವ ಭಾರತೀಯ ಜನತಾ ಪಕ್ಷಕ್ಕೆ ಈಗ ಪ್ರೀತಂ ಗೌಡ ಪ್ರಕರಣವು ಹುಲ್ಲುಕಡ್ಡಿಯ ಆಸರೆ ಒದಗಿಸಿದೆ. ಹಾಸನದ ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರೆನ್ನಲಾದ ದುಷ್ಕರ್ಮಿಗಳ ಗುಂಪು ಇವತ್ತು ದಾಳಿ ನಡೆಸಿ ಗಲಾಟೆ ಮಾಡಿತ್ತು. ಈ ಗಲಾಟೆಯಲ್ಲಿ ಪ್ರೀತಂ ಗೌಡ ಅವರ ಬೆಂಬಲಿಗನೊಬ್ಬನಿಗೆ ಗಂಭೀರ ಗಾಯವಾಗಿದೆ. ಆಪರೇಷನ್ ಕಮಲದ ಆಡಿಯೋದಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಪ್ರೀತಂ ಗೌಡ ಹಗುರವಾಗಿ ಮಾತನಾಡಿರುವುದು ಕೇಳಿಬಂದಿದ್ದು, ಇದರಿಂದಾಗಿ ಜೆಡಿಎಸ್ ಕಾರ್ಯಕರ್ತರು ಶಾಸಕನ ಮನೆ ಮೇಲೆ ದಾಳಿ ಎಸಗಿದ್ದಾರೆನ್ನಲಾಗಿದೆ.

ಪ್ರೀತಂ ಗೌಡ ಒಬ್ಬ ಜನಪ್ರಿಯ ಶಾಸಕ. ಹಾಸನದಲ್ಲಿ ಇವರ ಬೆಳವಣಿಗೆಯನ್ನು ಸಹಿಸದೆ ಈ ಗಲಾಟೆ ಮಾಡಲಾಗುತ್ತಿದೆ. ಇದು ಗೂಂಡಾ ಸರಕಾರವಾಗಿದೆ. ಈ ದಾಳಿ ಘಟನೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಅವರೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ, ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಬಳಿ ದೂರು ನೀಡುವುದಾಗಿಯೂ ಬಿಎಸ್​ವೈ ಹೇಳಿದ್ದಾರೆ.

ಪ್ರೀತಮ್ ಗೌಡ ಅವರ ನಿವಾಸದ ಮೇಲೆ ನಡೆದಿರುವ ದಾಳಿ ಘಟನೆಯನ್ನು ಬಿಜೆಪಿಯ ಎಲ್ಲಾ ನಾಯಕರು ಬಲವಾಗಿ ಖಂಡಿಸಿದ್ದಾರೆ. ರಾಜ್ಯ ಸರಕಾರವು ಸರ್ವಾಧಿಕಾರ ಧೋರಣೆ ತೋರುತ್ತಿದೆ. ಇದು ಗೂಂಡಾಪ್ರವೃತ್ತಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಗಿದೆ. ಧ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ ಮೊದಲಾದವರು ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಸ್ವತಃ ಪ್ರೀತಮ್ ಗೌಡ ಅವರು, ತಾನು ಇಂಥದ್ದಕ್ಕೆಲ್ಲಾ ಜಗ್ಗುವುದಿಲ್ಲ. ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರವಾಗಿ ಮುಂದುವರಿಸುವುದಾಗಿ ಹೇಳಿದ್ದಾರೆ. ಪ್ರೀತಮ್ ಗೌಡ ಅವರ ತಾಯಿ ಗೌರಮ್ಮ ಕೂಡ ತಮ್ಮ ಮಗನನ್ನ ಸಮರ್ಥಿಸಿಕೊಂಡು ಮಾತನಾಡಿದ್ದಾರೆ. ತಮ್ಮ ಮಗ ಯಾವ ತಪ್ಪೂ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರೀತಮ್ ಗೌಡ ನಿವಾಸದ ಮೇಲೆ ಯಾವುದೇ ದಾಳಿ ಮಾಡದಂತೆ ಜೆಡಿಎಸ್ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Comments are closed.