ಕರ್ನಾಟಕ

ಬಳ್ಳಾರಿ, ರಾಯಚೂರು ಸೇರಿದಂತೆ ಐದು ಜಿಲ್ಲೆಗಳ ಮುಖಂಡರ ಜೊತೆ ಅಮಿತ್ ಶಾ ಮಹತ್ವದ ಸಭೆ

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಈಗಾಗಲೇ ಸಕಲ ಸಿದ್ದತೆ ಆರಂಭಿಸಿದೆ. ಇತ್ತೀಚೆಗಷ್ಟೆ ಪ್ರಧಾನಿ ಮೋದಿ ಹುಬ್ಬಳ್ಳಿಗೆ ಬಂದು ರಣಕಹಳೆ ಮೊಳಗಿಸಿದ್ದರು. ಇದೀಗ ರಾಜ್ಯಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಶಾ ಸರದಿ. ಇಂದು ಬಿಜೆಪಿ ಸಾರಥಿ ರಾಜ್ಯಕ್ಕೆ ಆಗಮಿಸಲಿದ್ದು, ಬೃಹತ್ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಮಿತ್ ಷಾ ಯಾವ ಸ್ಥಳದಲ್ಲಿ ಯಾವ ಕಾರ್ಯಕ್ರಮಗಳಿವೆ, ಐದು ಜಿಲ್ಲೆಗಳ ಸಭೆಯಲ್ಲಿ ಹೊರಡುವ ಫರ್ಮಾನು ಏನು? ಗೊತ್ತಾ?

ಬಿಜೆಪಿ ಸಾರಥಿ, ಚಾಣಕ್ಯ ಅಂತನೇ ಹೆಸರು ವಾಸಿಯಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಾಳೆ ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸಲಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ರಣ ಕಹಳೆ ಮೊಳಗಿಸಿದ್ದರು. ಇದರ ಬೆನ್ನಲ್ಲೆ ಅಮಿತ್ ಶಾ ರಾಜ್ಯಕ್ಕೆ ಬರ್ತಿರೋದು ಕಮಲ ಪಾಳೆಯದಲ್ಲಿ ರಣೋತ್ಸಹ ಇನ್ನೂ ಹೆಚ್ಚಾಗಿದೆ. ನಾಳೆ ಬಿಸಿಲ ನಾಡು ರಾಯಚೂರು ಹಾಗೂ ಗಣಿನಾಡು ಬಳ್ಳಾರಿಗೆ ಷಾ ಭೇಟಿ ನೀಡಲಿದ್ದಾರೆ. ಸಿಂಧನೂರಿನಲ್ಲಿ ನಡೆಯುವ ಮೂರು ಜಿಲ್ಲೆಗಳ ಬೂತ್ ಮಟ್ಟದ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಹೊಸಪೇಟೆಯಲ್ಲಿ ನಡೆಯುವ ಪ್ರಬುದ್ದರ ಸಮ್ಮೇಳನ ಹಾಗೂ ಐದು ಜಿಲ್ಲೆಗಳ ಚುನಾವಣಾ ಉಸ್ತುವಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಇನ್ನು ಮಧ್ಯಾಹ್ನ 3 ಗಂಟೆಗೆ ಬಳ್ಳಾರಿ ಜಿಲ್ಲೆಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಶಾ 3.50ಕ್ಕೆ ಹೆಲಿಕಾಪ್ಟರ್ ಮೂಲಕ ಸಿಂಧನೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಕಾರ್ಯಕರ್ತರ ಸಮಾವೇಶಕ್ಕೆ ತೆರಳಲಿದ್ದಾರೆ. 4 ಗಂಟೆಗೆ ಆರಂಭವಾಗುವ ಸಮಾವೇಶದಲ್ಲಿ ಷಾ ಕಾರ್ಯಕರ್ತರನ್ನ ಉದ್ದೇಶಿಸಿ ಭಾಷಣ ಮಾಡಿ ಹುರಿದುಂಬಿಸಲಿದ್ದಾರೆ. ಇನ್ನು ಈ ಸಮಾವೇಶದಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಸುಮಾರು ಒಂದು ಲಕ್ಷ ಬೂತ್ ಮಟ್ಟದ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ. ಇದಕ್ಕಾಗಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಕಲ ಸಿದ್ಧತೆಗಳನ್ನ ಮಾಡಲಾಗಿದೆ.

ಇನ್ನು ಸಂಜೆ 5.15ಕ್ಕೆ ಸಿಂಧನೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟು, 6 ಗಂಟೆಗೆ ಹೊಸಪೇಟೆಯ ವಿಜಯಶ್ರೀ ಹೆರಿಟೇಜ್ ರೆಸಾರ್ಟ್ ನಲ್ಲಿ ಪ್ರಬುದ್ಧರ ಸಮ್ಮೇಳನದ್ದಲ್ಲಿ ಭಾಗಿಯಾಗಲಿದ್ದಾರೆ. ಈ ಸಮ್ಮೇಳನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಇಂಜಿನಿಯರ್ , ಉಪನ್ಯಾಸಕರು, ವೈದ್ಯರು, ಪ್ರಾಧ್ಯಾಪಕರು ಭಾಗಿಯಾಗಲಿದ್ದಾರೆ. ಇವರನ್ನ ಉದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ. ಬಳಿಕ 7.15ಕ್ಕೆ ಅದೇ ರೆಸಾರ್ಟ್ ನಲ್ಲಿ ಚಿತ್ರದುರ್ಗಾ, ಬಳ್ಳಾರಿ, ದಾವಣಗೆರೆ, ಕೊಪ್ಪಳ, ರಾಯಚೂರು ಜಿಲ್ಲೆಗಳ ಚುನಾವಣಾ ಉಸ್ತುವಾರಿಗಳ ಜೊತೆ ಒಂದು ಗಂಟೆ ಸಭೆ ನಡೆಸಿ, ಚುನಾವಣೆ ತಯಾರಿ ಹಾಗೂ ತಂತ್ರಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಈ ಸಭೆ ಸಾಕಷ್ಟು ಮಹತ್ವವನ್ನು ಪಡೆದಿದೆ. ಈ ಸಭೆ ಬಳಿಕ ಜಿಂದಾಲ್ ವಿಮಾನ ನಿಲ್ದಾಣದಿಂದ 10.45 ಕ್ಕೆ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.

ಈ ಬಾರಿ ಕರ್ನಾಟಕದಲ್ಲಿ 22 ಸೀಟುಗಳನ್ನ ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ, ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಅಖಾಡಕ್ಕೆ ಧುಮುಕಿದೆ. ರಾಜ್ಯದಲ್ಲಿ ಘಟಾನುಘಟಿ ನಾಯಕರನ್ನ ಕರೆಸಿ ಅಬ್ಬರಿಸುತ್ತಿದೆ. ನಾಳೆ ರಾಜ್ಯದಲ್ಲಿ ಶಾ ಸಂಚಾರ ಬಿಜೆಪಿ ಪಾಳೆಯದಲ್ಲಿ ಸಂಚಲನ ಉಂಟುಮಾಡಿದರೂ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಇಂಪ್ಯಾಕ್ಟ್ ಆಗಲಿದೆ ಎನ್ನುವುದು ಆಗಲೇ ಗೊತ್ತಾಗುತ್ತದೆ.

Comments are closed.