ಕರ್ನಾಟಕ

ಸಿದ್ದರಾಮಯ್ಯ ನಮ್ಮ ನಾಯಕರು, ಮತ್ತೆ ಅವರು ಮುಖ್ಯಮಂತ್ರಿ ಆಗಲಿ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ – ಜೆಡಿಎಸ್​ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ. ಕಾಂಗ್ರೆಸ್​ನ ಕೆಲ ಶಾಸಕರು ಈಗಲೂ ಸಿದ್ದರಾಮಯ್ಯ ಅವರೇ ನಮಗೆ ಮುಖ್ಯಮಂತ್ರಿ ಎಂದು ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಬಂದರೆ ಕೆಲವರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. ಈಗ ಸದನದಲ್ಲೇ ಸಿದ್ದರಾಮಯ್ಯ ಅವರನ್ನು ಹೊಗಳಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಹೇಳುತ್ತಾರೆ, ಅದರಲ್ಲಿ ತಪ್ಪೇನಿದೆ ಎಂದಿದ್ದಾರೆ.

ಜತೆಗೆ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು, ಹೀಗಿರುವಾಗ ಅವರು ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಬಯಸುವುದರಲ್ಲಿ ತಪ್ಪೇನು ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಸರ್ಕಾರ ನಡೆಯುತ್ತಿರುವುದೇ ಸಿದ್ದರಾಮಯ್ಯ ಅವರ ಮಾರ್ಗದರ್ಶನದಿಂದ, ಸಿದ್ದರಾಮಣ್ಣ ಸಲಹೆ ಕೊಟ್ಟಿದ್ದಾರೆ ಅದರಂತೆ ನಾವು ನಡೆಯುತ್ತಿದ್ದೇವೆ, ಎಂದರು.

ಮುಂದುವರೆದ ಕುಮಾರಸ್ವಾಮಿ, “ನಾನೇನು ಮುಖ್ಯಮಂತ್ರಿ ಕುರ್ಚಿಗೆ ಗೂಟ ಬಡಿದುಕೊಂಡು ಕೂತಿಲ್ಲ. ಯಾರೂ ಶಾಶ್ವತರಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ. ಇಲ್ಲಿರುವ ಶಾಸಕರಲ್ಲಿ ಹಲವು ಜನ ಕಳೆದ ಐದು ವರ್ಷ ಸಿದ್ದರಾಮಯ್ಯ ಅವರು ಮಾಡಿದ ಅಭಿವೃದ್ಧಿ ಕಾರ್ಯ ಮತ್ತು ಶ್ರಮದಿಂದ ಗೆದ್ದು ಬಂದಿದ್ದಾರೆ. ಕೆಲವರು ಸಿದ್ದರಾಮಯ್ಯ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಅದರಲ್ಲಿ ಕೆಲವರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದಿದ್ದಾರೆ. ಅದರ ಬಗ್ಗೆ ನಾನು ಎಂದೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಸಿದ್ದರಾಮಯ್ಯ ಅವರಿಂದಲೇ ನಮ್ಮ ಸರ್ಕಾರ ಉಳಿದಿದೆ ಎಂದು ಸಾರ್ವಜನಿಕವಾಗಿ ನಾನು ಹೇಳಿದ್ದೇನೆ,” ಎಂದು ಸಿದ್ದರಾಮಯ್ಯರನ್ನು ಎಚ್​ಡಿಕೆ ಹೊಗಳಿದರು.

ತಾವು ವಿಷಕಂಠನಂತೆ ಕೆಲಸ ಮಾಡುತ್ತಿದ್ದೇನೆ ಎಂದು ನೀಡಿದ್ದ ಹೇಳಿಕೆ ಸಂಬಂಧ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ಬಿದ್ದು ಹೋಗುತ್ತದೆ ಎಂದು ಮಾಧ್ಯಮ ಮಿತ್ರರು ನೀಡಿದ್ದ ಗಡುವುಗಳಿಗೆ ಸಂಬಂಧಿಸಿ ಹಾಗೆ ಹೇಳಿದ್ದಾಗಿ ತಿಳಿಸಿದರು. ಇವೆಲ್ಲಾ ವಿಷಗಳನ್ನು ಕುಡಿದು ಸರ್ಕಾರ ಮುಂದೆ ಬಂದಿದೆ ಕಳೆದ ಏಳು ತಿಂಗಳುಗಳಿಂದ ಎಂದರು.

ಶಾಶ್ವತವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿರುವ ಭ್ರಮೆ ನನಗಿಲ್ಲ ಎಂದ ಅವರು ದೇಶದ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದ ಕುಟುಂಬದವನು ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಅಂಟಿಕೊಂಡಿಲ್ಲ ಎಂದಷ್ಟೇ ಹೇಳಿದ್ದು ಬಿಟ್ಟರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಲ್ಲ ಎಂದು ಸಮಜಾಯಿಶಿ ನೀಡಿದರು.

ಒಂದರ್ಥದಲ್ಲಿ ಸಿದ್ದರಾಮಯ್ಯ ಅವರನ್ನು ಹೊಗಳುವ ಉದ್ದೇಶವಾದರೆ ಇನ್ನೊಂದರ್ಥದಲ್ಲಿ ತಮ್ಮಿಬ್ಬರಲ್ಲಿ ಏನೂ ಸಮಸ್ಯೆಯಿಲ್ಲ, ಅತೃಪ್ತ ಶಾಸಕರು ಸುಮ್ಮನಿರಬೇಕು ಎಂಬ ಸಂದೇಶ ರವಾನೆಯೂ ಕುಮಾರಸ್ವಾಮಿ ಅವರ ಮಾತಿನಲ್ಲಿ ಅಡಗಿತ್ತು. ಜತೆಗೆ ಮೇಲ್ನೋಟಕ್ಕೆ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂಬ ಧೋರಣೆಯಿತ್ತೇ ವಿನಃ ಅದರಲ್ಲಿ ರಾಜಕೀಯ ಬಿಟ್ಟು ಮತ್ತಿನ್ನೇನೂ ಇಲ್ಲ ಎಂಬ ಮಾತುಗಳೂ ಪಕ್ಷದೊಳಗೆ ಕೇಳಿ ಬಂದಿದೆ.

Comments are closed.