ಕರ್ನಾಟಕ

ರಾಜ್ಯ ಸರ್ಕಾರದಿಂದ ಜನಾರ್ದನ ರೆಡ್ಡಿ ಆಸ್ತಿ ಜಪ್ತಿ!

Pinterest LinkedIn Tumblr


ಬೆಂಗಳೂರು: ಆಂಬಿಡೆಂಟ್ ಬಹುಕೋಟಿ ವಂಚನೆ‌ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಆಸ್ತಿ ಜಪ್ತಿ ಮಾಡಲಾಗಿದೆ.

ರಾಜ್ಯ ಸರ್ಕಾರ ಆದೇಶದ ಮೇರೆಗೆ ರಾಜ್ಯ ಕಂದಾಯ ಇಲಾಖೆ, ಬೆಂಗಳೂರಿನಲ್ಲಿರುವ ಜನಾರ್ದನರೆಡ್ಡಿ ಪಾರಿಜಾತ ನಿವಾಸವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಜನಾರ್ದನರೆಡ್ಡಿ, ಅಲಿಖಾನ್ ಸೇರಿದಂತೆ ಆ್ಯಂಬಿಡೆಂಟ್ ಪ್ರಕರಣದ ಇತರೆ ಆರೋಪಿಗಳ ಆಸ್ತಿಯನ್ನು ಕಂದಾಯ ಇಲಾಖೆ ಜಪ್ತಿ ಮಾಡಿದೆ.

ಒಟ್ಟು 150 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಕೋರ್ಟ್ ಗೆ ಒಪ್ಪಿಸಲು ಕಂದಾಯ ಇಲಾಖೆ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಬಳಿಕ ಕೋರ್ಟ್ ಆದೇಶ ಪಡೆದು ಹರಾಜು ಹಾಕಲು ಕಂದಾಯ ಇಲಾಖೆ ನಿರ್ಧಾರಿಸಿದೆ.

ಏನಿದು ಪ್ರಕರಣ?
2017ರಲ್ಲಿ ಬಹುಕೋಟಿ ವಂಚನೆ ಆರೋಪದಲ್ಲಿ ಆಂಬಿಡೆಂಟ್ ಕಂಪನಿ ವಿರುದ್ಧ ದೇವರಜೀವನಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಇ.ಡಿ. ಅಧಿಕಾರಿಗಳು ಜನವರಿಯಲ್ಲಿ ಕಂಪನಿ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಆನಂತರ ಮತ್ತೊಂದು ದೂರು ದಾಖಲಾದ ಕಾರಣ ಕೇಸನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.

ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಲೋಕ್​ಕುಮಾರ್, ಸಿಸಿಬಿ ಡಿಸಿಪಿ ಎಸ್. ಗಿರೀಶ್ ನೇತೃತ್ವದ ತಂಡ ಆಂಬಿಡೆಂಟ್ ಕಂಪನಿ ಮಾಲೀಕ ಸೈಯದ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು.

‘ರಿಯಲ್ ಎಸ್ಟೇಟ್ ಉದ್ಯಮಿ ಬ್ರಿಜೇಶ್ ರೆಡ್ಡಿ ಮೂಲಕ ಜನಾರ್ದನ ರೆಡ್ಡಿಯನ್ನು ಸಂರ್ಪರ್ಕಿಸಿ, ಇ.ಡಿ.ಯಲ್ಲಿ ದಾಖಲಾದ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಹಾಯ ಕೋರಿದ್ದೆ. ಇದಕ್ಕೆ ಒಪ್ಪಿದ ಜನಾರ್ದನ ರೆಡ್ಡಿ, 20 ಕೋಟಿ ರೂ.ಗಳನ್ನು ಚಿನ್ನದ ರೂಪದಲ್ಲಿ ನೀಡುವಂತೆ ಹೇಳಿದ್ದರು.

ಅದರ ಪ್ರಕಾರ ರೆಡ್ಡಿ ಆಪ್ತ ಅಲಿಖಾನ್​ಗೆ ಪರಿಚಯವಿದ್ದ ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜ್ಯುವೆಲರ್ಸ್ ರಮೇಶ್ ಎಂಬುವರ ಬ್ಯಾಂಕ್ ಖಾತೆಗೆ 18 ಕೋಟಿ ರೂ. ವರ್ಗಾವಣೆ ಮಾಡಿದೆ.

ಆ ನಂತರ ರಮೇಶ್, ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾಪೋರೇಷನ್ ಮಾಲೀಕ ರಮೇಶ್ ಕೊಠಾರಿಗೆ ಕೊಟ್ಟಿದ್ದರು. ಆತ 18 ಕೋಟಿ ರೂ. ಮೌಲ್ಯದ 57 ಕೆಜಿ ಚಿನ್ನದ ಬಿಸ್ಕತ್​ಗಳನ್ನು ಜನಾರ್ದನ ರೆಡ್ಡಿಗೆ ತಲುಪಿಸಿದ್ದ’ ಎಂದು ಸೈಯದ್ ಅಹಮದ್ ಫರೀದ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದರು.

Comments are closed.