
ಬೆಂಗಳೂರು : ಶೀಲ ಶಂಕಿಸಿ ಪತಿ ಪತ್ನಿಗೆ ವಾಟ್ಸಾಪ್ ಸಂದೇಶ ಕಳಿಸುತ್ತಿದ್ದು, ಇದರಿಂದ ಬೇಸತ್ತ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಛತ್ತೀಸ್ ಗಢದ ರಾಯಪುರದ ಯುವತಿಗೆ ಬೆಂಗಳೂರು ಮೂಲದ ಯುವಕ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದು, ಈ ಪರಿಚಯ ಸ್ನೇಹವಾಗಿ ನಂತರ ಪ್ರೀತಿಸಿ ವಿವಾಹವಾಗಿದ್ದರು.
2016 ರ ಜನವರಿ 22 ರಂದು ಮನೆಯವರ ವಿರೋಧದ ನಡುವೆಯೂ ಸರಳವಾಗಿ ಇಬ್ಬರು ವಿವಾಹವಾಗಿದ್ದರು. ಆದರೆ ವಿವಾಹದ ಬಳಿಕ ಯುವತಿಯನ್ನು ತವರಲ್ಲಿ ಬಿಟ್ಟಿದ್ದು, ಮನೆಯವರನ್ನು ಒಪ್ಪಿಸಿ ಕರೆದುಕೊಂಡು ಬರುವುದಾಗಿ ಭರವಸೆ ನೀಡಿದ್ದ.
ಹೀಗೆ ಒಂದೂವರೆ ವರ್ಷ ರಾಯಪುರದ ಪತ್ನಿಯ ಮನೆಗೆ ಹೋಗಿ ಬರುತ್ತಿದ್ದ ಬೆಂಗಳೂರಿನ ಯುವಕ, ಕಳೆದ ನವೆಂಬರ್ ನಲ್ಲಿ ನಾರಾಯಣಪುರದಲ್ಲಿ ಮನೆ ಮಾಡಿ ಪತ್ನಿಯನ್ನ ಕರೆಸಿಕೊಂಡಿದ್ದ.
ಯುವತಿ ಪೋಷಕರು ಮಗಳ ಯೋಗಕ್ಷೇಮ ವಿಚಾರಿಸಲು ಸಂದೇಶ ಕಳಿಸಿದ್ದನ್ನು ನೋಡಿ ಆಕೆಯ ಶೀಲ ಶಂಕಿಸಿ ಕಿರುಕುಳ ನೀಡಲು ಆರಂಭಿಸಿದ್ದ. ನೀನು ನಡತೆಗೆಟ್ಟವಳು. ನಿನಗೆ ಅಕ್ರಮ ಸಂಬಂಧವಿದೆ, ವಿಚ್ಚೇಧನ ಕೊಡು ಎಂದು ಪೀಡಿಸುತ್ತಿದ್ದು, ನಿತ್ಯ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ.
ಪತಿಯ ಹಿಂಸೆ ತಾಳದ ಪತ್ನಿ ತನ್ನ ಹುಟ್ಟೂರಿಗೆ ತೆರಳಿ ರಾಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಪ್ರಕರಣವೀಗ ಬೆಂಗಳೂರಿಗೆ ವರ್ಗಾವಣೆಯಾಗಿದ್ದು, ವರದಕ್ಷಿಣೆ ಕಿರುಕುಳ ಹಾಗೂ ಜೀವಬೆದರಿಕೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸದ್ಯ ಯುವತಿಯಿಂದ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿರುವ ಮಹದೇವಪುರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
Comments are closed.