ಕರ್ನಾಟಕ

ಕಾಂಗ್ರೆಸ್ ಬಂಡಾಯ ಶಾಸಕರಿಂದ ಸೋಮವಾರವೇ ರಾಜೀನಾಮೆ?

Pinterest LinkedIn Tumblr


ಬೆಂಗಳೂರು: ಯಾವುದೇ ಎಚ್ಚರಿಕೆಗೆ ಬಗ್ಗದ ಬಂಡಾಯ ಕಾಂಗ್ರೆಸ್ ಶಾಸಕರು ರಾಜೀನಾಮೆಗೆ ಮುಂದಾಗಿದ್ದು, ಸೋಮವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನುವ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಬಂಡಾಯ ಶಾಸಕರಾದ ರಮೇಶ್ ಜಾರಕಿಹೋಳಿ, ಮಹೇಶ್ ಕುಮಟಳ್ಳಿ, ಡಾ ಉಮೇಶ್ ಜಾದವ್ ಹಾಗೂ ಬಿ ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ರೆಬೆಲ್ಸ್ ಶಾಸಕರಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಕೊನೆಯ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದ್ದು, ಪಕ್ಷದ ಆದೇಶ, ಸೂಚನೆ ಧಿಕ್ಕರಿಸಿರುವ ಅತೃಪ್ತರಿಗೆ ಪಾಠ ಕಲಿಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದಕ್ಕೆ ಕಾಂಗ್ರೆಸ್ ಅತೃಪ್ತರನ್ನ ಅನರ್ಹ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ನೇತೃತ್ವದಲ್ಲಿ ಸ್ಪೀಕರ್ ಭೇಟಿ ಮಾಡಿ ಅತೃಪ್ತರ ಶಾಸಕರನ್ನ ಅನರ್ಹ ಮಾಡುವಂತೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ತೀರ್ಮಾನಿಸಿದೆ.

ಚಿಂಚೋಳಿ ಶಾಸಕ ಉಮೇಶ್ ಜಾಧವ್ ರಾಜೀನಾಮೆ ಕೊಡುವುದು ಗ್ಯಾರೆಂಟಿ ಆದರೆ ಯಾವಾಗ ಕೊಡ್ತಾರೆ ಅನ್ನೋದು ಕುತೂಹಲವಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಜಾಧವ್ ಸ್ಪರ್ಧಿಸಲಿದ್ದಾರೆ. ಉಳಿದ ರೆಬಲ್ ಶಾಸಕರು ಯಾವಾಗ ರಾಜೀನಾಮೆ ಕೊಡ್ತಾರೋ ಆಗಲೇ ಜಾಧವ್ ಸಹ ರಾಜೀನಾಮೆ ನೀಡಲಿದ್ದಾರೆ ಮುಂದಿನ ದಿನಗಳಲ್ಲಿ ಕಾನೂನು ತೊಡಕಾಗದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಮಾಹಿತಿ ನೀಡಿದ್ದಾರೆ

ಇತ್ತ ಪ್ರಮೋದ್ ಹಿರೇಮನಿ ಎಂಬುವವರು ಮಹೇಶ್ ಕುಮಟಳ್ಳಿ ನಾಪತ್ತೆಯಾಗಿದ್ದಾರೆ, ಹುಡುಕಿಸಿ ಕೊಡಿ ಎಂದು ಹೈಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದು, ತಮ್ಮ ಶಾಸಕ ಮಹೇಶ್ ಕುಮಟಳ್ಳಿ ಅವರು ಮುಂಬೈನ ಹೋಟೆಲ್​ವೊಂದರಲ್ಲಿ ರಮೇಶ್ ಜಾರಕಿಹೊಳಿ ಜೊತೆ ಇದ್ದಾರೆಂದು ಮಾಧ್ಯಮಗಳಲ್ಲೆಲ್ಲಾ ವರದಿಗಳಾಗುತ್ತಿವೆ. ಮಹೇಶ್ ಕುಮಟಳ್ಳಿ ಅವರನ್ನು ರಮೇಶ್ ಜಾರಕಿಹೊಳಿ ಅವರೇ ಅಪಹರಿಸಿ ಗೃಹ ಬಂಧನದಲ್ಲಿಟ್ಟಿರಬಹುದೆಂಬ ಅನುಮಾನವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಯಾವ ಅತೃಪ್ತ ಶಾಸಕರೂ ನನ್ನನ್ನು ಸಂಪರ್ಕಿಸಿಲ್ಲ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಯಲ್ಲಿ ನಾನು ಭೇಟಿ ಮಾಡಿ ನನ್ನ ಬೇಸರದ ಬಗ್ಗೆ ಅವರಿಗೆ ತಿಳಿಸಿದ್ದೇನೆ. ನನಗೆ ಬೇಸರವಿರುವ ಕಾರಣದಿಂದಲೇ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ ಎಂದು ಶಾಸಕ ಬಿ ಸಿ ಪಾಟೀಲ ಹೇಳಿದ್ದಾರೆ.

Comments are closed.