ಕರ್ನಾಟಕ

ಖರ್ಗೆಗೆ ಖೆಡ್ಡಾ ತೋಡಲು 2 ವರ್ಷದ ಹಿಂದೆ ಮೋದಿ ಸ್ಕೆಚ್..?

Pinterest LinkedIn Tumblr


ಬೆಂಗಳೂರು: ಉಮೇಶ್ ಜಾಧವ್ ಅವರನ್ನು ಬಿಜೆಪಿಗೆ ಕರೆತಂದು ಕಲಬುರ್ಗಿಯ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಡುವ ಪ್ಲಾನ್ ನಡೆದಿದೆ ಎಂದು ನ್ಯೂಸ್18 ಕನ್ನಡದಲ್ಲಿ ನಿನ್ನೆಯೇ ವರದಿಯಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿಸಲು ಬಿಜೆಪಿ ಇಂಥದ್ದೊಂದು ಮಾಸ್ಟರ್ ಪ್ಲಾನ್ ನಡೆಸಿರುವುದು ಬೆಳಕಿಗೆ ಬಂದಿತ್ತು. ಆದರೆ, ಖರ್ಗೆಯನ್ನು ಹಣಿಯಲು ಮಾಡಿರುವ ಈ ಪ್ಲಾನ್ ಇವತ್ತು ನಿನ್ನೆಯದ್ದಲ್ಲ. ಎರಡು ವರ್ಷದ ಹಿಂದೆಯೇ ರೂಪಿತಗೊಂಡ ಮಹಾ ಮಾಸ್ಟರ್ ಪ್ಲಾನ್ ಅದು. ಪ್ರಧಾನಿ ಮೋದಿ ಅವರೇ ಅಸ್ಥೆ ವಹಿಸಿ ತೋಡಿರುವ ಖೆಡ್ಡಾ ಅದು.

ಅಷ್ಟಕ್ಕೂ ಮೋದಿ ಅವರಿಗೇಕೆ ಕಲಬುರ್ಗಿ ಕ್ಷೇತ್ರದ ಬಗ್ಗೆ ಇಷ್ಟು ಆಸಕ್ತಿ? ಇದಕ್ಕೆ ಒಂದು ಬಲವಾದ ಕಾರಣವಿದೆ. ದೆಹಲಿಯ ಸಂಸತ್​ನಲ್ಲಿ 2 ವರ್ಷದ ಹಿಂದೆ ನಡೆದ ಘಟನೆಯೇ ಮೋದಿ ಜಿದ್ದಿಗೆ ಕಾರಣವಾಗಿದೆ. ವಿಪಕ್ಷ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆ ಅಂದು ಸಂಸತ್​ನಲ್ಲಿ ಪ್ರಧಾನಿ ಮೋದಿ ವಿರುದ್ಧ ಅನೇಕ ಗುರುತರ ಆರೋಪ ಮಾಡಿದ್ದರು. ಖರ್ಗೆ ವಿನಾಕಾರಣ ಹಾಗೂ ನಿರಾಧಾರ ಟೀಕೆ ಮಾಡಿದರೆಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅಂದು ಖರ್ಗೆ ಟೀಕೆ ಮಾಡುವಾಗ ಪ್ರಧಾನಿ ಮೋದಿ ಪ್ರತ್ಯುತ್ತರ ಅಥವಾ ತಿರುಗೇಟು ಕೊಡುವ ಗೋಜಿಗೆ ಹೋಗದೆ ಎಲ್ಲರಲ್ಲೂ ಅಚ್ಚರಿ ಸೃಷ್ಟಿಸಿದ್ದರು. ಅದಕ್ಕಿಂತಲೂ ಶಾಕಿಂಗ್ ಕೊಟ್ಟಿದ್ದು ಮೋದಿ ಕೊಟ್ಟ ತಣ್ಣನೆಯ ಹೇಳಿಕೆ. “ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದು ಕೊನೆಯ ಲೋಕಸಭೆ. ಮಾತಾಡಲಿ ಬಿಡಿ” ಎಂದು ಮೋದಿ ನೀಡಿದ ಆ ಹೇಳಿಕೆ ಸೋನಿಯಾ, ರಾಹುಲ್ ಮತ್ತು ಸ್ವತಃ ಖರ್ಗೆಯವರಿಗೇ ಆಶ್ಚರ್ಯ ತಂದಿತ್ತು. ಯಾವುದೋ ಸಾರ್ವಜನಿಕ ಸಮಾವೇಶದಲ್ಲಿ ಮೋದಿ ಈ ಮಾತು ಆಡಿದ್ದರೆ ಅದು ಕೇವಲ ವಾಗ್ದಾಳಿಯಾಗಿರುತ್ತಿತ್ತು. ಆದರೆ, ಸಂಸತ್​ನಲ್ಲಿ ಮೋದಿ ಗಂಭೀರವಾಗಿ ಆಡಿದ ಆ ಮಾತಿನ ಹಿಂದಿನ ತೀವ್ರತೆ ಬೇರೆಯದೇ ಇತ್ತು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಹರಕೆಯ ಕುರಿ ಮಾಡಿದೆ. ಅವರನ್ನು ಮೂಲೆಗುಂಪು ಮಾಡಲಾಗುತ್ತದೆ ಎಂಬರ್ಥದಲ್ಲಿ ಮೋದಿ ಹೇಳಿದ್ದಿರಬಹುದೆಂದು ಭಾವಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಮೋದಿ ಲೆಕ್ಕಾಚಾರವೇ ಬೇರೆ ಆಗಿತ್ತು. ಹಲವು ದಶಕಗಳಿಂದ ಹೈದರಾಬಾದ್-ಕರ್ನಾಟಕ ಭಾಗದಲ್ಲಿ, ಅದರಲ್ಲೂ ಕಲಬುರ್ಗಿಯಲ್ಲಿ ಖರ್ಗೆ ಪ್ರಭಾವ ಅಚ್ಚಳಿಯದೇ ಇದೆ. ಖರ್ಗೆ ಅವರು ಸತತ 10 ಬಾರಿ ಚುನಾವಣೆ ಜಯಿಸಿದಂಥ ಸರದಾರ.

ಇಷ್ಟು ವರ್ಷ ಖರ್ಗೆ ಅನುಭವಿಸಿರುವ ಅಧಿಕಾರದ ದರ್ಪಕ್ಕೆ ಬ್ರೇಕ್ ಹಾಕಬೇಕು ಎಂಬುದು ಮೋದಿ ಲೆಕ್ಕಾಚಾರ. ಆಗಿನಿಂದಲೇ ಖರ್ಗೆ ಅವರಿಗೆ ಖೆಡ್ಡಾ ತೋಡಲು ಮೋದಿ ಆಸಕ್ತಿ ತೋರಿದ್ದಾರೆ. ಕಲಬುರ್ಗಿಯಲ್ಲಿ ಅವರನ್ನು ಸೋಲಿಸುವಂಥ ಪ್ರಬಲ ಅಭ್ಯರ್ಥಿಯ ತಲಾಶ್ ನಡೆಯುತ್ತಲೇ ಇದೆ. ಆಗ ಬಿಜೆಪಿಯ ಕಣ್ಣಿಗೆ ಬಿದ್ದದ್ದು ಉಮೇಶ್ ಜಾಧವ್. ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯ ನೆರಳಿನಲ್ಲೇ ಬೆಳೆದವರು ಈ ಉಮೇಶ್ ಜಾಧವ್. ಖರ್ಗೆ ಕುಟುಂಬದ ಕಿರುಕುಳದಿಂದ ಬೇಸತ್ತವರು ಅವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಉಮೇಶ್ ಜಾಧವ್ ಈಗ ಕಲಬುರ್ಗಿಯಲ್ಲಿ ತಕ್ಕಮಟ್ಟಿಗೆ ಪ್ರಭಾವ ಬೆಳೆಸಿಕೊಂಡಿದ್ದಾರೆ.

ಕಳೆದೆರಡು ಲೋಕಸಭಾ ಚುನಾವಣೆಗಳಲ್ಲಿ ಕಲಬುರ್ಗಿಯಲ್ಲಿ ಕಾಂಗ್ರೆಸ್ ಎದುರು ಬಿಜೆಪಿ ಪ್ರಬಲ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ. ಈಗ ಉಮೇಶ್ ಜಾಧವ್ ಅವರು ಬಿಜೆಪಿ ಅಭ್ಯರ್ಥಿಯಾದರೆ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಬಹುದು ಎಂಬುದು ಕಮಲಪಾಳಯದ ಲೆಕ್ಕಾಚಾರ. ಹೀಗಾಗಿ, ಉಮೇಶ್ ಜಾಧವ್ ಅವರನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಿದೆ.

ಬಿಜೆಪಿ ಬರಲು ನೀಡಿದ ಆಹ್ವಾನವನ್ನು ಉಮೇಶ್ ಜಾಧವ್ ಮೊದಲಿಗೆ ಒಪ್ಪಿರಲಿಲ್ಲ. ಆದರೆ, ಲೋಕಸಭೆಗೆ ಟಿಕೆಟ್ ಕೊಡುವ ಭರವಸೆ ಸಿಕ್ಕ ನಂತರ ಜಾಧವ್ ಆಸಕ್ತಿ ತೋರಲು ಆರಂಭಿಸಿದರು. ಬಿಜೆಪಿ ಪರವಾಗಿ ಸ್ಪರ್ಧಿಸಿದರೆ ಘಟಾನುಘಟಿ ನಾಯಕರು ಉಸ್ತುವಾರಿ ವಹಿಸಿ ಗೆಲ್ಲಿಸಿಕೊಂಡು ಬರುತ್ತೇವೆ. ಪ್ರಧಾನಿ ಮೋದಿಯೇ ಖುದ್ದಾಗಿ ಪ್ರಚಾರ ಮಾಡುತ್ತಾರೆ ಎಂಬಿತ್ಯಾದಿ ಆಶ್ವಾಸನೆಗಳು ಸಿಕ್ಕನಂತರ ಜಾಧವ್ ಬಿಜೆಪಿ ಸೇರುವ ಸಂಕಲ್ಪ ಮಾಡಿದ್ದಾರೆನ್ನಲಾಗಿದೆ.

ಕಲಬುರ್ಗಿಯ ಸ್ಥಳೀಯ ಪ್ರಬಲ ಬಿಜೆಪಿ ನಾಯಕರಾದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ ಅವರಿಗೆ ಉಮೇಶ್ ಜಾಧವ್ ಅವರನ್ನು ಗೆಲ್ಲಿಸುವ ಗುರಿ ನೀಡಲಾಗಿದೆ. ಅಲ್ಲದೇ, ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೂ ಕೂಡ ಉಮೇಶ್ ಜಾಧವ್ ಅವರನ್ನು ಮಾನಸಿಕವಾಗಿ ಒಪ್ಪಿಕೊಳ್ಳುವಂತೆ ಪ್ರೇರೇಪಿಸಲಾಗಿದೆ.

ಆದರೆ, ವಿಪಕ್ಷ ನಾಯಕನಾಗಿ ತಮ್ಮ ತೀಕ್ಷ್ಣ ಮಾತುಗಳಿಂದ ಇನ್ನಷ್ಟು ಪ್ರಭಾವ ಹೆಚ್ಚಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ವರ್ಷದ ಚುನಾವಣೆಯಲ್ಲಿ ಸೋಲಿಸುವುದು ಬಿಜೆಪಿಗೆ ಅಷ್ಟು ಸುಲಭವಾ? ಒಟ್ಟಾರೆ ಕಲಬುರ್ಗಿ ಲೋಕ ಹಣಾಹಣಿ ಸಾಕಷ್ಟು ಕುತೂಹಲ ಮೂಡಿಸಿರುವುದಂತೂ ಹೌದು.

Comments are closed.