ಕರ್ನಾಟಕ

ನಟಸಾರ್ವಭೌಮ ಚಿತ್ರ ನೋಡಲು ರಜೆ ಕೇಳಿದ ಮೈಸೂರು ವಿದ್ಯಾರ್ಥಿನಿಗೆ ಪುನೀತ್ ಸಲಹೆ

Pinterest LinkedIn Tumblr


ಬೆಂಗಳೂರು: ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಬಿಡುಗಡೆಯ ದಿನ ತನಗೆ ರಜೆ ನೀಡಬೇಕು ಎಂದು ರಜಾ ಅರ್ಜಿ ಬರೆದ ಮೈಸೂರು ವಿದ್ಯಾರ್ಥಿನಿಗೆ ಪುನೀತ್ ಅಪ್ಪು ಸಲಹೆ ನೀಡಿದ್ದಾರೆ.

ಚಿತ್ರದ ಕುರಿತು ಪಬ್ಲಿಕ್ ಟಿವಿ ನಟ ಪುನೀತ್ ಅವರನ್ನು ಸಂದರ್ಶನ ನಡೆಸಿತ್ತು. ಈ ವೇಳೆ ಮಾತನಾಡುತ್ತಾ, ಮೈಸೂರು ವಿದ್ಯಾರ್ಥಿನಿ ಚಿತ್ರ ರಿಲೀಸ್ ದಿನದಂದು ತನಗೆ ರಜೆ ನೀಡಬೇಕು ಎಂದು ಬರೆದಿರುವ ಪತ್ರದ ವಿಚಾರ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಪುನೀತ್, ತುಂಬಾ ಧನ್ಯವಾದಗಳು. ದಯವಿಟ್ಟು ಈ ರೀತಿ ಮಾಡಿಕೊಳ್ಳಬೇಡಿ ಎಂದು ಕೈ ಮುಗಿದು ಕೇಳಿಕೊಂಡರು. ಒಬ್ಬಳು ವಿದ್ಯಾರ್ಥಿನಿಯಾಗಿ ಮೊದಲು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ. ಪ್ರೀತಿ, ವಿಶ್ವಾಸ ಹಾಗೆಯೇ ಉಳಿಸಿಕೊಳ್ಳಿ. ಓದು ಮುಗಿದ ಬಳಿಕ ಸಿನಿಮಾ ವೀಕ್ಷಿಸಿ ಎಂದು ಸಲಹೆ ನೀಡಿದ್ದಾರೆ.

ಅಪ್ಪ-ಅಮ್ಮನಿಗೆ ಧನ್ಯವಾದ:
ನಿಮ್ಮ ಕಂಡ್ರೆ ಯಾಕೆ ಎಲ್ಲರಿಗೂ ಇಷ್ಟ ಎಂದು ಇದೇ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೊದಲು ನನ್ನ ತಂದೆ-ತಾಯಿಗೆ ಧನ್ಯವಾದ ತಿಳಿಸಿದ್ರು. ಚಿಕ್ಕವಯಸ್ಸಿನಿಂದಲೇ ಸಿನಿಮಾಗಳನ್ನು ಮಾಡುತ್ತಿದ್ದೇನೆ ಅಲ್ಲವೇ? ಅದಕ್ಕೆ ಚಿಕ್ಕವರಿಂದ ಹಿಡಿದು ತಾತ-ಮುತ್ತಾತರವರೆಗೂ ನನ್ನ ಕಂಡರೆ ಇಷ್ಟ ಆಗಿರಬಹುದು. ಇನ್ನು ಮಕ್ಕಳಾದ ತಕ್ಷಣ ತಂದೆ-ತಾಯಿ ತಮ್ಮ ಮಕ್ಕಳಲ್ಲಿ ನಾವು ಚಿಕ್ಕವರಿದ್ದಾಗ ಈ ಹಾಡು ನೋಡುತ್ತಿದ್ದೆವು ನೋಡು ಅಂತ ಹೇಳುತ್ತಾರೆ. ಹೀಗೆ ನೋಡುತ್ತಾ ನೋಡುತ್ತಾ ಅವರು ಇಷ್ಟಪಟ್ಟಿರಬಹುದು ಅಂದ್ರು.

ಸಾಮಾಜಿಕ ಜಾಲತಾಣದಲ್ಲೂ ಕೆಲವು ಬಾರಿ ತೋರಿಸುವುದನ್ನು ನಾನು ಗಮನಿಸಿದ್ದೇನೆ. ಪೋಸ್ಟರ್ ನೋಡಿಕೊಂಡು ಮಕ್ಕಳು ಯಾರು ಅಂತ ಗುರುತು ಹಿಡಿಯುವುದು, ಫೋನಿನಲ್ಲಿ ಫೋಟೋ ತೋರಿಸೋದನ್ನು ನೋಡಿದ್ದೇನೆ. ಇವೆಲ್ಲವನ್ನೂ ನೋಡಿದ್ರೆ ನನಗೆ ತುಂಬಾ ಸಂತಸವಾಗುತ್ತದೆ. ನನಗೂ ಮಕ್ಕಳೆಂದರೆ ತುಂಬಾ ಪ್ರೀತಿ. ತುಂಬಾನೇ ಇಷ್ಟ ಪಡುತ್ತೇನೆ. ಆ ಮಕ್ಕಳಲ್ಲಿ ಸಾಕಷ್ಟು ಮುಗ್ಧತೆ ಇರುತ್ತದೆ. ಒಟ್ಟಿನಲ್ಲಿ ನನ್ನನ್ನು ಸಿನಿಮಾ ರಂಗಕ್ಕೆ ಕರೆದುಕೊಂಡು ಬಂದ ನನ್ನ ತಂದೆ-ತಾಯಿಗೆ ಧನ್ಯವಾದಗಳು ಎಂದರು.

ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ.ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. `ರಣವಿಕ್ರಮ’ ಸಿನಿಮಾದ ಬಳಿಕ ಪುನೀತ್ ರಾಜ್‍ಕುಮಾರ್ ಹಾಗೂ ಪವನ್ ಒಡೆಯರ್ ಒಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರ ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ನಮ್ಮ ಕನ್ನಡಿಗರು ಎಲ್ಲೆಲ್ಲ ಇದ್ದಾರೆ ಅಲ್ಲೆಲ್ಲ ಸಿನಿಮಾ ರಿಲೀಸ್ ಮಾಡುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

Comments are closed.