ಕರ್ನಾಟಕ

ಪ್ರತಿ ಬಜೆಟ್ ವೇಳೆ ಕೂಗು ಏಳುವ ಸ್ವಾಮಿನಾಥನ್ ವರದಿಯಲ್ಲಿ ಏನಿದೆ?

Pinterest LinkedIn Tumblr


ಬೆಂಗಳೂರು: ಹಸಿರು ಕ್ರಾಂತಿಯ ನೇತಾರ ಪ್ರೊಫೆಸರ್ ಎಂ.ಎಸ್‌.ಸ್ವಾಮಿನಾಥನ್ ನೇತೃತ್ವದಲ್ಲಿ 2004ರಲ್ಲಿ ನಿಯೋಜನೆಗೊಂಡ ಸಮಿತಿ 5 ಹಂತಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ರೈತರ ಸ್ಥಿತಿ-ಗತಿ ಸುಧಾರಣೆಗೆ ಯಾವೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡುತ್ತದೆ.

ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿಗೆ ವೈಜ್ಞಾನಿಕ ಪದ್ಧತಿ, ಹನಿ ನೀರಾವರಿ ಅಳವಡಿಕೆ ಸೇರಿದಂತೆ ಅನೇಕ ಅಂಶಗಳ ಜಾರಿ ಹೇಗೆ ಮಾಡಬೇಕು ಎಂಬುದನ್ನು ವರದಿ ಹೇಳುತ್ತಾ ಹೋಗುತ್ತದೆ. ಆದರೆ ಈ ವರದಿ ಕೇವಲ ರಾಜಕಾರಣಕ್ಕೆ, ಮತ ಗಳಿಕೆಗೆ ಆಶ್ವಾಸನೆ ನೀಡುವುದಕ್ಕೆ ಬಳಕೆಯಾಗುತ್ತಿರುವುದು ನಮ್ಮ ಮುಂದೆ ಇರುವ ಸತ್ಯ.

ಕೃಷಿ ಕ್ಷೇತ್ರದ ಅಭಿವೃದ್ಧಿ, ಸುಸ್ಥಿರ ಕೃಷಿ, ನೀರಾವರಿ ವ್ಯವಸ್ಥೆ, ಒಣಭೂಮಿ ಬೇಸಾಯ, ಕೃಷಿ ಉತ್ತೇಜನ ಯೋಜನೆಗಳ ಬಗ್ಗೆ ಅನೇಕ ಶಿಫಾರಸುಗಳಿವೆ. ಕೇಂದ್ರ ಸರಕಾರ 2004ರ ನವೆಂಬರ್‌ 18ರಂದು ಪ್ರೊ. ಎಂ.ಎಸ್‌. ಸ್ವಾಮಿನಾಥನ್‌ ಅವರ ಅಧ್ಯಕ್ಷತೆಯಲ್ಲಿ ರೈತರಿಗಾಗಿ ರಾಷ್ಟ್ರೀಯ ಆಯೋಗವನ್ನು (ನ್ಯಾಷನಲ್‌ ಕಮಿಷನ್‌ ಆನ್‌ ಫಾರ್ಮರ್ಸ್‌) ರಚಿಸಿತು.

ಸ್ವಾಮಿನಾಥನ್‌ ಆಯೋಗವು 2004ರ ಡಿಸೆಂಬರ್, 2005ರ ಆಗಸ್ಟ್‌, ಡಿಸೆಂಬರ್‌ ಮತ್ತು 2006ರ ಏಪ್ರಿಲ್‌ನಲ್ಲಿ ಹಂತ ಹಂತವಾಗಿ ತನ್ನ ವರದಿಗಳನ್ನು ಸರಕಾರಕ್ಕೆ ಸಲ್ಲಿಸಿತ್ತು. 2006ರ ಅಕ್ಟೋಬರ್‌ 4ರಂದು ತನ್ನ ಅಂತಿಮ ವರದಿಯನ್ನು ಆಯೋಗ ಕೇಂದ್ರ ಸರಕಾರಕ್ಕೆ ಸಲ್ಲಿಸಿತು. ಪರಿಶೀಲನೆ ನಡೆಸಿ ಜಾರಿ ಮಾಡುತ್ತೇವೆ ಎಂದು ಅಂದಿನ ಕೇಂದ್ರ ಸರಕಾರ ಹೇಳಿದ್ದರೂ ಇಲ್ಲಿವರಿಗೆ ಯಾವ ಅಂಶಗಳು ಜಾರಿಯಾಗಿಲ್ಲ ಎನ್ನುವುದು ಮಾತ್ರ ದೇಶದ ದುರಂತ.

ವರದಿಯ ಕೆಲ ಪ್ರಮುಖ ಶಿಫಾರಸುಗಳು ಹೀಗಿವೆ

* ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಕೃಷಿಯನ್ನು ಸೇರಿಸಬೇಕು. ಅಂದರೆ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸಮಾನ ಹಕ್ಕು ಸಿಗುತ್ತದೆ.
* ವ್ಯವಸ್ಥಿತ ಭೂ ಹಂಚಿಕೆ ಹಾಗೂ ನಿರ್ವಹಣೆಗಾಗಿ ‘ರಾಷ್ಟ್ರೀಯ ಭೂ ಬಳಕೆ ಸಲಹಾ ಸೇವೆ’ಯನ್ನು ಆರಂಭಿಸಬೇಕು
* ಎಲ್ಲಾ ಕೃಷಿ ಭೂಮಿಗೂ ವ್ಯವಸ್ಥಿತವಾಗಿ ನೀರನ್ನು ಒದಗಿಸುವಂಥ ನೀರಾವರಿ ಯೋಜನೆಗಳನ್ನು ರೂಪಿಸುವ ಜವಾಬ್ದಾರಿ ಸರ್ಕಾರಗಳದ್ದು
* ಉತ್ತಮ ಇಳುವರಿಯ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತನೆ ಮಾಡುವ ಕ್ರಮ ಕೈ ಬಿಡಬೇಕು
* ಭೂ ಅಭಿವೃದ್ಧಿ, ನಾಲೆ ವ್ಯವಸ್ಥೆ, ನೀರನ್ನು ಸಂರಕ್ಷಣೆ, ಕೃಷಿ ಸಂಶೋಧನೆ ಹಾಗೂ ಗ್ರಾಮೀಣ ರಸ್ತೆ ಸುಧಾರಣಗೆ ಆದ್ಯತೆ.
* ಸುಲಭ ಮತ್ತು ಸರಳ ಮಣ್ಣು ಪರೀಕ್ಷೆ. ಮಣ್ಣಿನ ಗುಣಮಟ್ಟ ವೃದ್ಧಿಗೆ ಸ್ಥಳೀಯ ಕಾರ್ಯಕ್ರಮ, ಜಾಗೃತಿ
* ರೈತರಿಗೆ ಸರಳ ಸಾಲ, ಬೆಳೆಗಳಿಗೆ ಶೇ. 4ಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿಕೆ
* ರೈತರ ಮರುಪಾವತಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ವಸೂಲಿ. ಅನಿವಾರ್ಯ ಎದುರಾದರೆ ಮಾತ್ರ ಸಾಲ ಮನ್ನಾ
* ಅಂತರ್ಜಲ ಮರುಪೂರಣ, ಮಳೆ ನೀರು ಸಂಗ್ರಹ ಜಾಗೃತಿ, ಬಾವಿ ಮತ್ತು ಕೆರೆಗೆ ಮಳೆ ನೀರು ಸಂಗ್ರಹ
* ಸರಕಾರದಿಂದಲೇ ಕೃಷಿ ಕ್ಷೇತ್ರದಲ್ಲಿ ಹೂಡಿಕೆ
* ಕೃಷಿ ವಿಪತ್ತು ನಿಧಿ ಸ್ಥಾಪನೆಯಾಗಬೇಕು
* ಕೃಷಿ ಉತ್ಪಾದನೆ ಹಾಗೂ ಗುಣಮಟ್ಟ ಹೆಚ್ಚಿಸಲು ಕೃಷಿ ವಲಯಕ್ಕೆ ಹೆಚ್ಚಿನ ಹೂಡಿಕೆಯನ್ನು ಸರಕಾರ ಮಾಡಬೇಕು.
* ಆಹಾರ ಭದ್ರತೆಗಾಗಿ ದೇಶದೆಲ್ಲೆಡೆ ಒಂದೇ ತೆರನಾದ ಹಂಚಿಕೆ ವ್ಯವಸ್ಥೆ ಜಾರಿಗೆ ತರಬೇಕು.
* ಮಹಿಳೆಯರಿಗೆ ಕಿಸಾನ್‌ ಕಾರ್ಡ್, ತಳಿ ಅಭಿವೃದ್ಧಿಗೆ ಉತ್ತೇಜನ
*ಈ ರೀತಿ ವರದಿ ಹಲವಾರು ಅಂಶಗಳನ್ನು ಹೇಳಿದ್ದು ಭೂಮಿ ಹಂಚಿಕೆ, ಆಹಾರ ಬೆಳೆ, ಪ್ರದೇಶವಾರು ಬೆಳೆ ಉತ್ತೇಜನದ ಬಗ್ಗೆಯೂ ತಿಳಿಸಿದೆ.

Comments are closed.