ಕರ್ನಾಟಕ

ಫೇಸ್‌ಬುಕ್‌ ಮದುವೆ ಫೇಸ್‌ಬುಕ್‌ನಿಂದಾಗಿ ಕೊಲೆಯಲ್ಲಿ ಅಂತ್ಯ

Pinterest LinkedIn Tumblr


ಬೆಂಗಳೂರು: ಅವರಿಬ್ಬರು ಫೇಸ್‌ಬುಕ್ ಮೂಲಕವೇ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಈಗ ಅದೇ ಫೇಸ್‌ಬುಕ್ ಜೀವಕ್ಕೆ ಎರವಾಗಿದೆ.

ಹೌದು, ಫೇಸ್‌ಬುಕ್ ಮೂಲಕ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ತಿರುಗಿ, ಇಬ್ಬರು ಮದುವೆಯಾಗುವಂತೆ ಮಾಡಿತ್ತು. ಆದರೆ, ಪತ್ನಿಯ ಅತಿಯಾದ ಫೇಸ್‌ಬುಕ್ ಮೋಹ, ಆಕೆ ಹಾಗೂ ಆಕೆಯ ಮೂರು ತಿಂಗಳ ಮಗುವಿನ ಜೀವ ಪಡೆದಿದೆ.

ಗಂಗೊಂಡನಹಳ್ಳಿ ಬಳಿಯ ಮಾದನಾಯಕನಹಳ್ಳಿ ನಿವಾಸಿಯಾದ ರಾಜು ಹಾಗೂ ತುಮಕೂರು ಬಳಿಯ ಕ್ಯಾತಸಂದ್ರ ಮೂಲದ ಸುಷ್ಮಾ (25) ಎಂಬುವರಿಗೆ ಎರಡು ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಸ್ನೇಹವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ ವಿವಾಹಕ್ಕೂ ಮುನ್ನವೇ ಸುಷ್ಮಾ ಗರ್ಭಿಣಿಯಾಗಿದ್ದಳು. ಈ ವಿಷಯ ಗೊತ್ತಾಗಿ ಮನೆಯವರು ವಿವಾಹ ಮಾಡಿಸಿದ್ದರು. ಬಳಿಕ ನವದಂಪತಿ ಮೂರು ತಿಂಗಳ ಮಗುವಿನ ಜತೆ ಗಂಗೊಡನಹಳ್ಳಿಯಲ್ಲಿಯೇ ವಾಸವಾಗಿದ್ದರು.

ಪತ್ನಿ ಸುಷ್ಮಾ ಅತಿಯಾದ ಫೇಸ್‌ಬುಕ್ ಮೋಹ ಬೆಳೆಸಿಕೊಂಡಿದ್ದಳು. ಇದೇ ವಿಷಯಕ್ಕೆ ಪತಿ-ಪತ್ನಿ ಮಧ್ಯ ಜಗಳವಾಗುತ್ತಿತ್ತು. ಪತ್ನಿಗೆ ಫೇಸ್‌ಬುಕ್‌ನಲ್ಲಿ ಬ್ಯುಸಿಯಾಗಿದ್ದು, ದಾರಿ ತಪ್ಪುತ್ತಿದ್ದಾಳೆ ಎಂದು ಆಕೆಯ ಮೇಲೆ ಅನುಮಾನ ಮಾಡಲು ಪ್ರಾರಂಭಿಸಿದ ಪತಿರಾಯ, ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ಕುಂಬಳಗೋಡು ಅರಣ್ಯ ಪ್ರದೇಶದ ಬಳಿಯ ಹೆಜ್ಜಾಲದಿಂದ ಮುತ್ತುರಾಯನಪುರಕ್ಕೆ ಹೋಗುವ ನೀಲಗಿರಿ ತೋಪಿಗೆ ಸುಷ್ಮಾ ಹಾಗೂ ಮಗುವನ್ನು ಕರೆದೊಯ್ದ ಪತಿ, ಪತ್ನಿ ಹಾಗೂ ಮಗುವಿನ ಮೇಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಪತಿ, ಕಲ್ಲಿನಿಂದ ಜಚ್ಚಿ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯಾಧಾರಗಳು ಲಭ್ಯವಾಗದಂತೆ ಪೆಟ್ರೋಲ್ ಸುರಿದು ಬಂಕಿ ಹಚ್ಚಿ ಪರಾರಿಯಾಗಿದ್ದ.

ಪುತ್ರಿ ಹಾಗೂ ಆಕೆಯ ಮಗು ನಾಪತ್ತೆಯಾಗಿದೆ ಎಂದು ಸುಷ್ಮಾಳ ಪೋಷಕರು ಜ.26ರಂದು ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಷ್ಮಾಳ ಪತಿಯನ್ನು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

‘ಪತ್ನಿ ಫೇಸ್‌ಬುಕ್ ಹಾಗೂ ಇನ್‌ಸ್ಟಾ ಗ್ರಾಂನಲ್ಲಿ ಬ್ಯುಸಿಯಾಗಿರುತ್ತಿದ್ದಳು. ಅಪರಿಚಿತರ ಜತೆ ಚಾಟ್ ಮಾಡುತ್ತಿದ್ದಳು. ಈ ನಡುವೆ ಮಗುವಿನ ಕಡೆ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಆಕೆ ಹಾಗೂ ಮಗವಿನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದೇನೆ’ ಎಂದು ಆರೋಪಿ ರಾಜು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

Comments are closed.