ಕರ್ನಾಟಕ

ಮೈತ್ರಿ ಪಕ್ಷಗಳ ಗುದ್ದಾಟ; ಸಿದ್ದರಾಮಯ್ಯ ವಿರುದ್ಧ ಸಿಡಿದ ಗೌಡರು

Pinterest LinkedIn Tumblr


ಬೆಂಗಳೂರು: ಕಳೆದೆರಡು ದಿನಗಳಿಂದ ಜೆಡಿಎಸ್​ ಮತ್ತು ಕಾಂಗ್ರೆಸ್​ ನಡುವೆ ಇದ್ದ ಮುಸುಕಿನ ಗುದ್ದಾಟ ಮುನ್ನೆಲೆಗೆ ಬಂದಿದೆ. ಎರಡೂ ಪಕ್ಷಗಳ ನಾಯಕರು ಒಬ್ಬರ ಮೇಲೊಬ್ಬರು ಬಹಿರಂಗ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಸಚಿವ ಪುಟ್ಟರಂಗ ಶೆಟ್ಟಿ, ಶಾಸಕ ಎಸ್​.ಟಿ. ಸೋಮಶೇಖರ್​, ಸಚಿವ ಎಂಟಿಬಿ ನಾಗರಾಜ್, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಜೆಡಿಎಸ್​ ಮತ್ತು ಕುಮಾರಸ್ವಾಮಿ ವಿರುದ್ಧ ಪ್ರತ್ಯಕ್ಷ ಮತ್ತು ಪರೋಕ್ಷ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯನವರೇ ಈಗಲೂ ನಮ್ಮ ಸಿಎಂ, ಕುಮಾರಸ್ವಾಮಿಯವರಿಗೆ ಪ್ರಬುದ್ಧತೆ ಇಲ್ಲ ಎಂದು ಟೀಕಿಸಿದ್ದರು. ಇದರಿಂದ ಬೇಸರಗೊಂಡಿದ್ದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದರು. ಜೊತೆಗೆ, ಪದೇಪದೆ ಕಾಂಗ್ರೆಸ್​ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು.

ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಇದೀಗ ಮೌನ ಮುರಿದಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆಯಿಲ್ಲ ಎಂದು ಬಿಜೆಪಿ ಟೀಕಿಸುತ್ತಿದ್ದಾಗಲೆಲ್ಲ ತಮ್ಮ ಮತ್ತು ಕಾಂಗ್ರೆಸ್​ ನಡುವೆ ಎಲ್ಲವೂ ಸರಿಯಾಗಿಯೇ ಇದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದ ದೇವೇಗೌಡರು ಇದೀಗ ಕಾಂಗ್ರೆಸ್​ ನಾಯಕರ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ. ಪರಸ್ಪರ ವೈರಿಗಳಾಗಿದ್ದ ದೇವೇಗೌಡರು ಮತ್ತು ಸಿದ್ದರಾಮಯ್ಯ ಮೈತ್ರಿ ಸರ್ಕಾರ ರಚನೆಯಾದ ನಂತರ ಅನೇಕ ಬಾರಿ ಒಟ್ಟಿಗೇ ಕಾಣಿಸಿಕೊಂಡಿದ್ದರು. ಗುರು-ಶಿಷ್ಯರ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಅಸಮಾಧಾನ ಈಗ ಜೋರಾಗಿ ಹೊಗೆಯಾಡುತ್ತಿದ್ದು, ಸಮ್ಮಿಶ್ರ ಸರ್ಕಾರ ಉರುಳುತ್ತದಾ ಅಥವಾ ನಿಲ್ಲುತ್ತದಾ ಎಂಬ ಚರ್ಚೆಗೆ ಕಾರಣವಾಗಿದೆ.

ಇನ್ಯಾವ ರೀತಿ ಸರ್ಕಾರ ನಡೆಸಬೇಕು?:

ಕಾಂಗ್ರೆಸ್ ಶಾಸಕರಿಗೆ ಸಿಎಂ ಕುಮಾರಸ್ವಾಮಿ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ. ಈ ರೀತಿ ಕಾಂಗ್ರೆಸ್ ಶಾಸಕರು ಪ್ರತಿನಿತ್ಯ ಹೇಳಿಕೆ ನೀಡುತ್ತಿದ್ದಾರೆ. ಒಂದು ನಿಗಮ ಬಿಟ್ಟರೆ ಉಳಿದೆಲ್ಲ ಸ್ಥಾನವನ್ನು ಕಾಂಗ್ರೆಸ್​ಗೆ ಕೊಟ್ಟಿದ್ದೇವೆ.ಇನ್ನೂ ಹೇಗೆ ಆಡಳಿತ ನಡೆಸಬೇಕು ಎಂದು ನಮಗೆ ಗೊತ್ತಾಗುತ್ತಿಲ್ಲ. ಎಷ್ಟು ದಿನ ಹೀಗೆ ನಡೆದುಕೊಳ್ಳುತ್ತೀರಿ? ಪ್ರತಿ ಶಾಸಕರು ಒಂದೊಂದು ಮಾತಾಡುತ್ತಾರೆ. ನಾವೀಗ ಅಂತಿಮಘಟ್ಟಕ್ಕೆ ಬಂದು ನಿಂತಿದ್ದೇವೆ ಎಂದು ದೇವೇಗೌಡರು ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್​ ನಾಯಕರ ನಡವಳಿಕೆ ಬಗ್ಗೆ ಬೇಸರ ಹೊರಹಾಕಿದ್ದಾರೆ.

ರಾಷ್ಟ್ರದಲ್ಲಿ ಹಲವು ಸಮ್ಮಿಶ್ರ ಸರ್ಕಾರಗಳು ಬಂದಿವೆ. ನಾನು ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಪ್ರಧಾನಿ ಆಗಿದ್ದೆ. ರಾಜ್ಯದಲ್ಲಿ ಧರ್ಮಸಿಂಗ್ ಜೊತೆ ಮೈತ್ರಿ ಮಾಡಿಕೊಂಡಿದ್ದಾಗ ಸರ್ಕಾರದಲ್ಲಿ ಷರತ್ತುಗಳು ಇರಲಿಲ್ಲ. ಅವರ ಸರ್ಕಾರ ಬೀಳೋಕೆ ನಾನಾಗಲಿ ಕುಮಾರಸ್ವಾಮಿ ಆಗಲಿ ಕಾರಣರಲ್ಲ. ಇವತ್ತು ಅದೇ ಕಾಂಗ್ರೆಸ್ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಅವರಿಗೆ ನೋವಾಗಿದ್ದಕ್ಕೆ ಸಿಎಂ ಸ್ಥಾನ ಬಿಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.

ಸಿದ್ದರಾಮಯ್ಯಗೆ ಮತ್ತೊಮ್ಮೆ ಪಟ್ಟವೇರುವ ಆಸೆಯಿತ್ತೇ?:

ಇಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಪರೋಕ್ಷ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ, ಸಿದ್ದರಾಮಯ್ಯ ಜೆಡಿಎಸ್​ ಅಧ್ಯಕ್ಷರಾಗಿದ್ದಾಗ ಯಾವ ಕೆಲಸವನ್ನೂ ಮಾಡಿಲ್ಲ. ಆಗ ನನಗಾಗಿರುವ ನೋವು ದೇವರಿಗೆ ಮಾತ್ರ ಗೊತ್ತು. ಸೋನಿಯಾ ಗಾಂಧಿ ಮೇಲೆ ಒತ್ತಡ ಹಾಕಿದರೆ ಮತ್ತೊಮ್ಮೆ ನಾನೇ ಸಿಎಂ ಆಗುತ್ತಿದ್ದೆ ಎಂದು ಅವರು ಆಗಾಗ ಹೇಳುತ್ತಿದ್ದರು. ಮೈತ್ರಿ ಸರ್ಕಾರ ರಚನೆಯ ಬಗ್ಗೆ ಚರ್ಚಿಸಲು ದೆಹಲಿಗೆ ಹೊರಡುವಾಗಲೂ ಸಿದ್ದರಾಮಯ್ಯ ತಮ್ಮನ್ನೇ ಸಿಎಂ ಮಾಡಬಹುದಿತ್ತು ಎಂದು ಹೇಳಿದ್ದರು.

ಕಾಂಗ್ರೆಸ್​ನಲ್ಲಿ ಹೆಚ್ಚು ಶಾಸಕರಿದ್ದರು. ಆದರೆ, ನಮ್ಮಲ್ಲಿ ಅಷ್ಟು ಶಾಸಕರು ಇರಲಿಲ್ಲ. ಹಾಗಾದರೆ, ಸರ್ಕಾರ ನಡೆಸಬೇಕಾದವರು ಯಾರು ಎಂಬ ತಳಮಳ ಎದುರಾಗಿತ್ತು. ಸೋನಿಯಾಗಾಂಧಿ ಅವರ ಪ್ರತಿನಿಧಿಗಳು ಬಂದು ಕುಮಾರಸ್ವಾಮಿಯವರನ್ನು ಸಿಎಂ ಮಾಡಲು ಬಯಸುವುದಾಗಿ ಹೇಳಿದರು. ಹೀಗಾಗಿ, ಕಾಂಗ್ರೆಸ್​ ಹೈಕಮಾಂಡ್​ ನಿರ್ಧಾರದಂತೆ ಕುಮಾರಸ್ವಾಮಿ ಸಿಎಂ ಆದರು ಎಂದು ಹೇಳುವ ಮೂಲಕ ಇಷ್ಟು ದಿನ ಹೊಗೆಯಾಡುತ್ತಿದ್ದ ಅಸಮಾಧಾನವನ್ನು ದೇವೇಗೌಡರು ಹೊರಹಾಕಿದ್ದಾರೆ.

Comments are closed.