ಕರ್ನಾಟಕ

ಯಡಿಯೂರಪ್ಪ ತಂತ್ರಕ್ಕೆ ಡಿಕೆಶಿ ಪ್ರತಿತಂತ್ರ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಮೇಲಾಟ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್​ನ ಅತೃಪ್ತ ಶಾಸಕರನ್ನು ಸೆಳೆಯುವ ಯತ್ನದಲ್ಲಿ ಬಿಜೆಪಿ ಇರುವಾಗಲೇ; ಸಚಿವ ಡಿ.ಕೆ ಶಿವಕುಮಾರ್​​ ಪ್ರತಿತಂತ್ರ ರೂಪಿಸಿದ್ದಾರೆ. ಬಿಎಸ್​ವೈ ಆಪರೇಷನ್​​ ಕಮಲ ಇನ್ನು ನಿಲ್ಲಿಸಿದ ಕಾರಣ, ಬಿಜೆಪಿಯಲ್ಲಿನ ಅಸಮಾಧಾನಿತ ಶಾಸಕರನ್ನು ಸೆಳೆಯಲು ‘ಆಪರೇಷನ್ ಹಸ್ತ’ ಶುರುವಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ಸಿನ ಕಟ್ಟಾಳು ಮತ್ತು ಸಚಿವ ಡಿ.ಕೆ ಶಿವಕುಮಾರ್​​​ ಭಾರೀ ತಂತ್ರ ಹೂಡಿದ್ದಾರೆ. ಈ ಬಗ್ಗೆ ನ್ಯೂಸ್​​-18 ಜತೆಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ನಾಯಕ ಮುಂದಿನ ನಡೆಯೇನು ಎಂಬುದನ್ನು ಬಹಿರಂಗಪಡಿಸುವುದಿಲ್ಲ. ನಾವು ನಮ್ಮ ಪ್ರಯತ್ನದಲ್ಲಿದ್ದೇವೆ. ಒಂದು ವೇಳೆ ನಮ್ಮ ಪಕ್ಷದ ಶಾಸಕರು ಬಿಜೆಪಿ ಸೇರಿದರೆ, ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಬಿಜೆಪಿ ಕೆಲಸ ಅದರ ಪಾಡಿಗೆ ಮಾಡಲೀ, ನಮ್ಮ ಯೋಜನೆ ನಮ್ಮ ಬಳಿಯಿದೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಖಡಕ್​​ ಆಗಿ ತಮ್ಮ ದಾಟಿಯಲ್ಲೇ ತಿಳಿಸಿದ್ದಾರೆ.

ಇನ್ನು ಕಾಂಗ್ರೆಸ್​ ತಂತ್ರಕ್ಕೆ ಬಿಎಸ್​​.ಯಡಿಯೂರಪ್ಪ ಬೆದರಿದ್ದಾರೆ. ಹೀಗಾಗಿಯೇ ಫೆಬ್ರವರಿ 2ಕ್ಕೆ ಅತೃಪ್ತ ಬಿಜೆಪಿ ಶಾಸಕರ ಜತೆ ಸಭೆ ನಡೆಯಲಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗುತ್ತದೆ ಎಂಬ ವಿಶ್ವಾಸದಲ್ಲಿದ್ದ ಬಿಜೆಪಿಯವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಆಪರೇಷನ್ ಹಸ್ತ ಮತ್ತು ತೆನೆಗೆ ಬಿಜೆಪಿ ಶಾಸಕರು ಒಳಗಾದದಂತೆ ನೋಡಿಕೊಳ್ಳಲು ಬಿ.ಎಸ್​.ಯಡಿಯೂರಪ್ಪ ಎಚ್ಚರವಹಿಸಿದ್ದಾರೆ.

ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಬಂಡಾಯದ ಬಿಸಿ, ಇನ್ನೂ ಹಾಗೆ ಇದೆ. ಕಾಂಗ್ರೆಸ್​ ಶಾಸಕರನ್ನು ಆಪರೇಷನ್ ಕಮಲ ಖೆಡ್ಡಾಗೆ ಬೀಳಿಸುವುದು; ಅವರ ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರ ಅಸ್ಥಿರಗೊಳಿಸಿ; ಬಿಜೆಪಿ ಸರ್ಕಾರ ರಚನೆ ಮಾಡುವುದು ಬಿ.ಎಸ್​.ಯಡಿಯೂರಪ್ಪ ಅವರ ಪ್ಲಾನ್​. ಆದರೆ, ಬಿಜೆಪಿ ಪ್ಲಾನ್​ಗೆ ಜೆಡಿಎಸ್​ ಮತ್ತು ಕಾಂಗ್ರೆಸ್​ ಪ್ರತ್ಯುತ್ತರ ನೀಡಿದೆ.

ಬಿಜೆಪಿಯವರು ಕಾಂಗ್ರೆಸ್​, ಜೆಡಿಎಸ್​ನಿಂದ ಒಬ್ಬ ಶಾಸಕರನ್ನು ಕರೆದುಕೊಂಡು ಹೋದರೆ, ನಾವು ಅವರ ಪಕ್ಷದಿಂದ ಆರು ಶಾಸಕರನ್ನು ಕರೆತರುತ್ತೇವೆ ಎಂದು ಎರಡೂ ಪಕ್ಷದವರೂ ಸವಾಲು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ತಮ್ಮ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರೆಲ್ಲ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಲು ರೆಸಾರ್ಟ್​ಗೆ ಶಿಫ್ಟ್​ ಮಾಡುವ ಸಾಧ್ಯತೆಯಿದೆ.

Comments are closed.