ಕರ್ನಾಟಕ

ಸಿದ್ಧಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಏಕಿಲ್ಲ?

Pinterest LinkedIn Tumblr


ಬೆಂಗಳೂರು: ಸಿದ್ಧಗಂಗಾ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ‘ಭಾರತ ರತ್ನ’ ಗೌರವಕ್ಕೆ ಪರಿಗಣಿಸದೇ ಇರುವ ಕೇಂದ್ರ ಸರಕಾರದ ನಿಲುವಿಗೆ ವ್ಯಾಪಕ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ತ್ರಿವಿಧ ದಾಸೋಹದ ಮೂಲಕ ನಾಡಿನ ಮನೆಮಾತಾಗಿದ್ದ ಶತಾಯುಷಿ ಶ್ರೀಗಳಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಬೇಕೆಂಬುದು ಕನ್ನಡಿಗರು ಹಲವು ವರ್ಷಗಳ ನಿರೀಕ್ಷೆ. ಯಡಿಯೂರಪ್ಪ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಈ ಹಿಂದೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ನಾಲ್ಕು ದಿನದ ಹಿಂದೆ ಶ್ರೀಗಳು ಶಿವೈಕ್ಯರಾದ ಬಳಿಕ, ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿಯಾದರೂ ನೀಡಬೇಕೆಂದು ಅಸಂಖ್ಯಾತ ಕನ್ನಡಿಗರು ಆಗ್ರಹಿಸಿದ್ದರು. ಇದರ ಹೊರತಾಗಿಯೂ ಕೇಂದ್ರ ಸರಕಾರ ಈ ಗೌರವಕ್ಕೆ ಶ್ರೀಗಳನ್ನು ಪರಿಗಣಿಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರಕಾರ ಕೆಲವರ್ಷಗಳ ಹಿಂದೆ ಶ್ರೀಗಳಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿತ್ತು.

ಈ ನಡುವೆ, ‘ಶ್ರೀಗಳು ಪ್ರಶಸ್ತಿಗೆ ಹಾತೊರೆಯುತ್ತಿರಲಿಲ್ಲ. ಈ ಬಾರಿ ಶ್ರೀಗಳಿಗೆ ಪ್ರಶಸ್ತಿ ಘೋಷಿಸದಿರಲು ತಾಂತ್ರಿಕ ಕಾರಣಗಳು ಇರಬಹುದು. ಒಂದಲ್ಲ ಒಂದು ದಿನ ಅವರಿಗೆ ಭಾರತ ರತ್ನ ಸಿಕ್ಕಿಯೇ ಸಿಗುತ್ತದೆ’ ಎಂದು ಕೆಲವರು ಸಮಾಧಾನದ ಮಾತನಾಡಿದ್ದಾರೆ.

ಇದು ದುರದೃಷ್ಟಕರ. ರಾಜ್ಯ ಸರಕಾರ ಹಲವಾರು ಬಾರಿ ಶಿಫಾರಸು ಮಾಡಿದ್ದರೂ ಕೇಂದ್ರ ಸರಕಾರ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಘೋಷಿಸಿಲ್ಲ.
– ಸಿದ್ದರಾಮಯ್ಯ, ಮಾಜಿ ಸಿಎಂ

“ಕೆಲವು ಸಾಧಕರಿಗೆ ಮರಣೋತ್ತರವಾಗಿಯಾದರೂ ಪ್ರಶಸ್ತಿ ಘೋಷಣೆಯಾಗಿದ್ದು ಸಂತಸ ತಂದಿದೆ. ಆದರೆ ಸಿದ್ಧಗಂಗಾ ಶ್ರೀ ಸೇರಿದಂತೆ ಹಲವು ಅರ್ಹರಿಗೆ ಪ್ರಶಸ್ತಿ ನಿರೀಕ್ಷಿಸಿದ ನಮಗೆ ತೀವ್ರ ನಿರಾಸೆಯಾಗಿದೆ.”
-ಎಚ್‌ ಡಿ ಕುಮಾರಸ್ವಾಮಿ, ಸಿಎಂ

“ಪ್ರಣಬ್‌, ಭೂಪೇನ್‌ ಹಜಾರಿಕಾ, ನಾನಾಜಿ ಅವರಿಗೆ ಭಾರತರತ್ನ ನೀಡಿರುವುದು ಅತ್ಯಂತ ಸೂಕ್ತ. ಇವರೊಂದಿಗೆ ಸಿದ್ಧಗಂಗಾ ಶ್ರೀಗಳ ಹೆಸರೂ ಇದ್ದಿದ್ದರೆ ಭಾರತರತ್ನದ ಮೆರುಗು ಬಹಳಷ್ಟು ಹೆಚ್ಚುತ್ತಿತ್ತು ಎಂಬುದು ಎಲ್ಲರ ಭಾವನೆ.”
-ಸುರೇಶ್‌ ಕುಮಾರ್‌, ಬಿಜೆಪಿ ಶಾಸಕ

“ಶ್ರೀಗಳಿಗೆ ‘ಭಾರತ ರತ್ನ’ ಘೋಷಿಸದಿರುವುದು ದುರದೃಷ್ಟಕರ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲೇ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಸಮ್ಮಿಶ್ರ ಸರಕಾರ ಕೂಡ ಮನವಿ ಮಾಡಿದರೂ ಕೇಂದ್ರ ಸ್ಪಂದಿಸಿಲ್ಲ.”
-ಜಿ. ಪರಮೇಶ್ವರ್‌, ಡಿಸಿಎಂ

Comments are closed.