ಕರ್ನಾಟಕ

ಕಡಿಮೆ ಅಂಕ ಬಂತೆಂದು ಆತ್ಮಹತ್ಯೆಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿನಿ

Pinterest LinkedIn Tumblr

ಬಳ್ಳಾರಿ : ನಮ್ಮ ಮಕ್ಕಳು ಚೆನ್ನಾಗಿ ಓದಿ ಇಂಜಿನಿಯರ್, ಡಾಕ್ಟರ್ ಆಗಲಿ ಎಂದು ಬಯಸುತ್ತೇವೆ. ಆದರೆ ಈಗಿನ ಮಕ್ಕಳು ಸಣ್ಣ ಪುಟ್ಟ ವಿಷಯಕ್ಕೂ ಅನಾಹುತ ಮಾಡಿಕೊಂಡು ಬಿಡುತ್ತಿದ್ದಾರೆ. ಉಚಿತ ವೈದ್ಯಕೀಯ ಸೀಟ್ ಪಡೆದ ಪ್ರತಿಭಾವಂತೆ ವಿದ್ಯಾರ್ಥಿನಿಯೊಬ್ಬಳು ಕೇವಲ ಆರೇ ಆರು ಅಂಕ ಕಡಿಮೆ ಬಂತೆಂದು ತನ್ನ ಜೀವವನ್ನೇ ಕಳೆದು ಕೊಂಡಿದ್ದಾಳೆ.

ಈ ಯುವತಿಯ ಹೆಸರು ವಿದ್ಯಾ. ಬಳ್ಳಾರಿಯ ಕೃಷ್ಣನಗರ‌ ಕ್ಯಾಂಪ್ ಎಂಬ ಪುಟ್ಟ ಗ್ರಾಮದಿಂದ ಬಂದ ವಿದ್ಯಾರ್ಥಿನಿ ವಿದ್ಯಾ ಪರಿಶ್ರಮದಿಂದ ಬಳ್ಳಾರಿಯ ವಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಉಚಿತವಾಗಿ ಮೆಡಿಕಲ್ ಸೀಟು ಪಡೆದಿದ್ದಳು. ಎಂಬಿಬಿಎಸ್ ಎರಡು ಸೆಮಿಸ್ಟರ್ ಮುಗಿಸಿ ಮೂರನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ ಎರಡನೇ ಸೆಮಿಸ್ಟರ್ ನಲ್ಲಿ ಮೈಕ್ರೋ ಬಯಾಲಜಿ ವಿಷಯದಲ್ಲಿ ಅಂಕಗಳು ಕಡಿಮೆ ಬಂದವು ಎನ್ನುವ ಕಾರಣಕ್ಕೆ ಮನನೊಂದು ನೇಣಿಗೆ ಶರಣಾಗಿದ್ದಾಳೆ.

ಹಿಂದುಳಿದ ಬಳ್ಳಾರಿ ಜಿಲ್ಲೆಯ ಕುಗ್ರಾಮದಿಂದ ಬಂದ ವಿದ್ಯಾರ್ಥಿನಿ ಉಚಿತ ಎಂಬಿಬಿಎಸ್ ಸೀಟು ಪಡೆಯುವುದು ಸಣ್ಣ ವಿಷಯವಲ್ಲ. ಸದಾ ವಿದ್ಯಾಭ್ಯಾಸದಲ್ಲಿ ಮುಂದಿದ್ದ ವಿದ್ಯಾ ತನ್ನ ಎರಡನೇ ಸೆಮಿಸ್ಟರ್ ನ ಮೈಕ್ರೋ ಬಯಾಲಜಿ ಫಲಿತಾಂಶ ನಿನ್ನೆಯಷ್ಟೆ ಬಂದಿತ್ತು.

ಉಳಿದ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದ್ದ ವಿದ್ಯಾ ಮೈಕ್ರೋ ಬಯಾಲಜಿ ವಿಷಯದಲ್ಲಿ ಕೇವಲ ಆರು ಅಂಕ ಕಡಿಮೆ ಬಂದಿದ್ದಕ್ಕೆ ಬಳ್ಳಾರಿಯ ವಿದ್ಯಾನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಮಗಳು ನೇಣಿಗೆ ಶರಣಾದ ವಿಷಯ ತಿಳಿಯುತ್ತಿದ್ದಂತೆ ಪೋಷಕರು ಹಾಗೂ ಸಹಪಾಠಗಳು ಶಾಕ್‌ ಆಗಿದ್ದಾರೆ. ಕೇವಲ ಆರೇ ಆರು ಅಂಕ ಕಡಿಮೆ ಬಂದು ಒಂದು ವಿಷಯದಲ್ಲಿ ಫೇಲಾಗಿದ್ದಕ್ಕೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ ಎನ್ನುತ್ತಾರೆ ವಿಮ್ಸ್ ನಿರ್ದೇಶಕ ಡಾ. ಕೃಷ್ಣಸ್ವಾಮಿ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಶಾಸಕ ಶ್ರೀರಾಮುಲು ಭೇಟಿ ನೀಡಿ ಪೋಷಕರಿಗೆ ಸ್ವಾಂತನ ಹೇಳಿದರು. ಶವಾಗಾರದಲ್ಲಿ ಮೃತ ಸ್ನೇಹಿತೆಯ ದೇಹ ನೋಡಿ ಸಹಪಾಠಿಗಳು ಕಣ್ಣೀರು ಹಾಕಿದರು.

ವಿದ್ಯಾ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ವಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ನೀರವ ಮೌನ ಮಡುಗಟ್ಟಿದೆ. ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ವಿದ್ಯಾಳ ಪೋಷಕರು ಓದು ಓದು ಎಂದು ಒತ್ತಾಯವೇನು ಮಾಡುತ್ತಿದ್ದಿಲ್ಲ. ಆದರೆ ಈಗಿನ ಮಕ್ಕಳು ಓದುವುದರಲ್ಲಿ ಮುಂದಿದ್ದರೂ ಸಣ್ಣಪುಟ್ಟ ವಿಷಯಗಳಿಗೆ ಕೆಟ್ಟ ನಿರ್ಧಾರ ತೆಗೆದುಕೊಳ್ಳುವುದು, ನನ್ನಿಂದ ಎದುರಿಸಲು ಆಗುವುದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಸರದ ಸಂಗತಿ‌.

Comments are closed.