ಕರ್ನಾಟಕ

ರಾಜ್ಯಾದ್ಯಂತ ಕೇಬಲ್‌ ಟೀವಿ ಬಂದ್‌

Pinterest LinkedIn Tumblr


ಬೆಂಗಳೂರು : ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಜಾರಿಗೊಳಿಸುತ್ತಿರುವ ಗ್ರಾಹಕರೇ ತಮಗೆ ಬೇಕಾದ ಚಾನಲ್‌ಗಳನ್ನು ಆಯ್ಕೆ ಮಾಡುವ ಕೇಬಲ್‌ ಮತ್ತು ಡಿಟಿಎಚ್‌ ನೀತಿ ವಿರೋಧಿಸಿ ಜ.24ರಂದು ಬೆಳಗ್ಗೆ 6ರಿಂದ ರಾತ್ರಿ 10 ರವರೆಗೆ ದಕ್ಷಿಣ ಭಾರತದಾದ್ಯಂತ ಕೇಬಲ್‌ ಟೀವಿ ಬಂದ್‌ ಮಾಡಲು ಕೇಬಲ್‌ ಟೀವಿ ಆಪರೇಟರ್‌ ಸಂಘಟನೆಗಳು ನಿರ್ಧರಿಸಿವೆ.

ಈ ಸಂಬಂಧ ರಾಜ್ಯ ಕೇಬಲ್‌ ಟೀವಿ ಆಪರೇಟರ್‌ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ಮಾತನಾಡಿ, ಗ್ರಾಹಕರು ಮತ್ತು ಕೇಬಲ್‌ ಆಪರೇಟರ್‌ಗಳ ಹಿತದೃಷ್ಟಿಯಿಂದ ದಕ್ಷಿಣ ಭಾರತದಾದ್ಯಂತ ಕೇಬಲ್‌ ಟೀವಿ ಬಂದ್‌ ಮಾಡಲು ತೀರ್ಮಾನಿಸಲಾಗಿದೆ. ಹಾಗಾಗಿ, ಕರ್ನಾಟಕದಲ್ಲೂ ಅಂದು ಕೇಬಲ್‌ ಟೀವಿಗಳು ಬಂದ್‌ ಆಗಲಿವೆ. ಈ ನೂತನ ನೀತಿಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಅಲ್ಲದೆ, ಕೇಬಲ್‌ ಟೀವಿ ಆಪರೇಟರ್‌ಗಳು ಹಾಗೂ ಈ ಉದ್ಯಮ ನಂಬಿರುವ ಕೋಟ್ಯಂತರ ಕುಟುಂಬಗಳು ಬೀದಿಗೆ ಬೀಳಲಿವೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರು.

ದಕ್ಷಿಣ ಭಾರತ ಮಾತ್ರವಲ್ಲ ಉತ್ತರ ಭಾರತ ಹಲವಾರು ರಾಜ್ಯದಲ್ಲಿ ಜ.24ರಂದು ಕೇಬಲ್‌ ಟೀವಿ ಆಪರೇಟಿಂಗ್‌ ಸಿಸ್ಟಂ ಸ್ಥಗಿತಗೊಳಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಗ್ರಾಹಕರಿಗೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗಿದೆ. ಒಂದು ದಿನದ ಮಟ್ಟಿಗೆ ಸಾಂಕೇತಿಕವಾಗಿ ಟೀವಿ ಚಾನಲ್‌ ಬಂದ್‌ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ಈ ನೀತಿ ಹಿಂಪಡೆಯಬೇಕು. ಇಲ್ಲವಾದರೆ ಕೇಬಲ್‌ ಟೀವಿ ಆಪರೇಟರ್‌ಗಳು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Comments are closed.