ಕರ್ನಾಟಕ

ಶಿವಕುಮಾರ ಶ್ರೀಗಳ ಶಿವೈಕ್ಯ ಹಿನ್ನೆಲೆ ಗವಿಮಠ ಜಾತ್ರಾ ಮಹೋತ್ಸವದಲ್ಲಿ ಬದಲಾವಣೆಯಿಲ್ಲ: ಗವಿಸಿದ್ಧೇಶ್ವರ ಶ್ರೀ

Pinterest LinkedIn Tumblr


ಕೊಪ್ಪಳ: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಶ್ರೀಗಳ ಶಿವೈಕ್ಯರಾದ ಹಿನ್ನೆಲೆಯಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಗವಿಮಠದ ಗವಿಸಿದ್ಧೇಶ್ವರ ಶ್ರೀಗಳು ತಿಳಿಸಿದ್ದಾರೆ.

ನಗರದ ಗವಿಮಠದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳವಾರದಿಂದ ಪ್ರಾರಂಭವಾಗುವ ಜಾತ್ರಾ ಕಾರ್ಯಕ್ರಮಗಳು ನಡೆಯುತ್ತವೆ. ನಾಳೆ ಸಂಜೆ 6 ಗಂಟೆಗೆ ಕೆನಡಾದ ಮ್ಯಾಥ್ಯೂ ಪೌರ್ಟಿಯರ್ ದಂಪತಿ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಿದ್ದಗಂಗಾ ಶ್ರೀಗಳ ಅಗಲಿಕೆ ನೋವನ್ನು ತಂದಿದೆ. ಲಕ್ಷಾಂತರ ಜನರಿಗೆ ಅನ್ನ, ಜ್ಞಾನವನ್ನು ನೀಡಿ ಬೆಳಕು ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ತಂದೆ-ತಾಯಿ, ಗುರುವಾಗಿ ಮಾರ್ಗದರ್ಶನ ಮಾಡಿದ್ದಾರೆ. ಹೀಗಾಗಿ ಶ್ರೀಗಳನ್ನು ಜಗತ್ತಿನ ಎಂಟನೇ ಅದ್ಭುತ ಅಂತ ಕರೆಯಬಹುದು ಎಂದು ಹೇಳಿದರು.

ಸಿದ್ದಗಂಗಾ ಶ್ರೀಗಳನ್ನು ಕಳೆದುಕೊಂಡ ನಾಡು ಅನಾಥವಾಗಿದೆ. ಅವರು ಈ ಕಾಲದ ಸರ್ವಶ್ರೇಷ್ಠ ಸಂತರು, ಶಿವಕುಮಾರ ಶ್ರೀಗಳು ಒಬ್ಬ ತಪಸ್ವಿ, ಇಷ್ಟಲಿಂಗ, ಸಮಾಜ ಸೇವಕ, ಕರುಣಾಮಯಿ ಇಷ್ಟು ಗುಣಗಳನ್ನು ಹೊತ್ತು ಭೂಮಿಗೆ ಬಂದ ಭಗವಂತ. ಶ್ರೀಗಳ ಆತ್ಮಕ್ಕೆ ಚಿರಶಾಂತಿ ನೀಡಲಿ ಎನ್ನುವುದಕ್ಕಿಂತ, ಸಿದ್ದಗಂಗಾ ಶ್ರೀಗಳ ಆತ್ಮ ಲಕ್ಷಾಂತರ ಆತ್ಮದಲ್ಲಿ ಬೆರೆಯಲಿ ಅಂತ ದೇವರಲ್ಲಿ ಬೇಡಿಕೊಳ್ಳಬೇಕು ಎಂದರು.

2005ರಲ್ಲಿ ಗವಿಮಠದ ಎರಡು ಸಾವಿರ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ ಅಡಿಗಲ್ಲು ಹಾಗೂ 2006ರಲ್ಲಿ ಉದ್ಘಾಟನೆಯನ್ನು ಶ್ರೀ ಶಿವಕುಮಾರ ಸ್ವಾಮೀಜಿಗಳು ನೆರವೇರಿಸಿದ್ದರು. ಇತ್ತೀಚೆಗೆ ಶ್ರೀಗಳ 111ನೇ ಜನ್ಮದಿನಾಚರಣೆಯಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಅವರಿಂದ ಆಶೀರ್ವಾದ ಪಡೆದಿದ್ದೆ ಎಂದು ಗವಿಸಿದ್ಧೇಶ್ವರ ಸ್ವಾಮೀಜಿ ಸ್ಮರಿಸಿದರು.

Comments are closed.