ಕರ್ನಾಟಕ

ಆನಂದ್ ಸಿಂಗ್-ಗಣೇಶ್ ನಡುವೆ ರಾತ್ರಿ ನಿಜವಾಗಿ ಏನಾಯ್ತು?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ಶಾಸಕರು ತಂಗಿದ್ದ ರೆಸಾರ್ಟಿನಲ್ಲಿ ಆನಂದ್ ಸಿಂಗ್ ಹಾಗೂ ಗಣೇಶ್ ನಡುವೆ ನಡೆದಿರುವ ಬಾಟಲ್ ಗಲಾಟೆಗೆ ಕಾಂಗ್ರೆಸ್ ಶಾಸಕರು ಬೆಚ್ಚಿಬಿದ್ದಿದ್ದಾರೆ. ರಾತ್ರಿ ಪಾರ್ಟಿ ಆರಂಭಗೊಂಡಾಗ ಎಲ್ಲರೊಂದಿಗೆ ಸರಿಯಾಗಿದ್ದ ಶಾಸಕರು ಮದ್ಯದ ಅಮಲು ಏರುತ್ತಿದಂತೆ ಪರಸ್ಪರ ಕಿತ್ತಾಟ ನಡೆಸಿದ್ದಾರೆ.

ಗಲಾಟೆಯಲ್ಲಿ ಶಾಸಕ ಆನಂದ್‍ಸಿಂಗ್ ಕಣ್ಣು, ಎದೆ, ತಲೆಗೆ ಪೆಟ್ಟು ಬಿದ್ದಿದ್ದು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಇತ್ತ ಆನಂದ್ ಅಣ್ಣನಿಗೆ ಏನಾದ್ರೂ ಆದರೆ ಸುಮ್ಮನೆ ಇರುವುದಿಲ್ಲ, ಬಳ್ಳಾರಿಯಲ್ಲಿ ರೌದ್ರಾವಾತರ ನೋಡುತ್ತೀರಿ ಎಂದು ಶಾಸಕ ಆನಂದ್ ಸಿಂಗ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಮದ್ಯದ ಅಮಲಿನಲ್ಲಿದ್ದಾಗ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಹೊಡೆದಾಟ ಆರಂಭವಾಗಿ ಬಳಿಕ ಏನಾಯ್ತು ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದ್ದು ಅದನ್ನು ಇಲ್ಲಿ ನೀಡಲಾಗಿದೆ.

ರಾತ್ರಿ ನಡೆದಿದ್ದೇನು?
ಪಕ್ಷದ ಸಭೆಯ ಬಳಿಕ ರೆಸಾರ್ಟಿನಲ್ಲಿಯೇ ತಂಗಿದ್ದ ಶಾಸಕರು ಮಧ್ಯರಾತ್ರಿ 2 ಗಂಟೆಯವರೆಗೂ ಗಾರ್ಡನ್ ನಲ್ಲಿ ಪಾರ್ಟಿ ಮಾಡುತ್ತ ಕುಳಿತಿದ್ದರು. ಈ ವೇಳೆ ಶಾಸಕ ಆನಂದ್‍ಸಿಂಗ್ ಹಾಗೂ ಗಣೇಶ ಒಟ್ಟಿಗೆ ಕುಳಿತ್ತಿದ್ದರು. ಇತ್ತ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಕೂಡ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾರೆ. ಭೀಮಾನಾಯ್ಕ್ ಬರುತ್ತಿದಂತೆ ಆನಂದ್ ಸಿಂಗ್, “ಈ ಬಾರಿ ನಿನ್ನನ್ನು ಸೋಲಿಸುತ್ತೇನೆ” ಎಂದಾಗ “ಆಯ್ತು ಬಿಡು ಅಣ್ಣ” ಎಂದು ಭೀಮಾ ನಾಯ್ಕ್ ಉತ್ತರಿಸಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಗಣೇಶ್,”ಆನಂದ್ ಅಣ್ಣಾ, ನೀವೂ ಭೀಮಾನಾಯ್ಕ್ ಅವರನ್ನು ಸೋಲಿಸುತ್ತೇನೆ ಎಂದು ಹೇಳ್ತೀರಿ, ಸಂದೀಪ್ ಸಿಂಗ್ ಕಂಪ್ಲಿಯಲ್ಲಿ ನನ್ನ ಸೋಲಿಸುತ್ತೇನೆ ಎನ್ನುತ್ತಾನೆ” ಎಂದು ಹೇಳಿದ್ದಾರೆ. ಇದಕ್ಕೆ,”ಹೌದು, ನಾನು ನಿಮ್ಮ ಇಬ್ಬರನ್ನು ಸೋಲಿಸುತ್ತೇನೆ” ಎಂದು ಆನಂದ್ ಸಿಂಗ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಕೇಳುತ್ತಿದಂತೆ ಶಾಸಕ ಗಣೇಶ್,”ಅಣ್ಣಾ ನೀನು ನನ್ನನ್ನು ಸೋಲಿಸು ನಾನು ಬೇಡ ಎನ್ನುವುದಿಲ್ಲ. ಆದರೆ ಸಂದೀಪ್ ಸಿಂಗ್ ನನ್ನ ಕ್ಷೇತ್ರಕ್ಕೆ ಬಂದರೆ ನಾನು ನಿಮ್ಮನ್ನ ಹೊಸಪೇಟೆಯಲ್ಲಿ ಸೋಲಿಸುತ್ತೇನೆ” ಎಂದು ಕೌಂಟರ್ ಕೊಟ್ಟಿದ್ದಾರೆ. ಈ ಕೌಂಟರ್ ಗೆ ಕೋಪಗೊಂಡ ಆನಂದ್ ಸಿಂಗ್,”ನನ್ನನ್ನೇ ಸೋಲಿಸುತ್ತೇನೆ ಎನ್ನುತ್ತಿಯಾ” ಎಂದು ಹೇಳಿ ಗಣೇಶ್ ಮೇಲೆ ಮುಗಿಬಿದ್ದಾಗ ಇಬ್ಬರೂ ಪರಸ್ಪರ ಕಿತ್ತಾಡಿದ್ದಾರೆ. ಇಬ್ಬರ ಗುದ್ದಾಟ ಕಂಡ ಉಳಿದ ಶಾಸಕರು ಏನು ಮಾಡಲಾಗದೇ ನೋಡುತ್ತಾ ನಿಂತಿದ್ದರು ಎಂದು ಮೂಲಗಳು ತಿಳಿಸಿವೆ.

ಇಬ್ಬರ ಗುದ್ದಾಟದ ಮಧ್ಯೆ ಬಾಟಲ್ ಕೈಗೆ ತೆಗೆದುಕೊಂಡ ಗಣೇಶ್ ಎಣ್ಣೆ ಮತ್ತಿನಲ್ಲಿ ಅಕ್ಷರಶಃ ಮೃಗದಂತೆ ವರ್ತಿಸುತ್ತಿದ್ದರು. ಗಲಾಟೆ ಜೋರಾಗುತ್ತಿದ್ದಂತೆ ಆನಂದ್ ಸಿಂಗ್ ಗ್ಯಾಲರಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆಗೆ ಆನಂದ್ ಸಿಂಗ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಆನಂದ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಎಡಭಾಗದ ಎದೆಯ ಮೇಲೆ ಹತ್ತಿ ನಿಂತು ಗಣೇಶ್ ತುಳಿದಿದ್ದಾರೆ. ಪರಿಸ್ಥಿತಿ ಮಿತಿಮಿರುತ್ತಿದಂತೆ ಮಧ್ಯಪ್ರವೇಶಿಸಿದ ಭೀಮಾನಾಯ್ಕ್, ಗಣೇಶ್ ಅವರನ್ನು ಕೊಠಡಿಗೆ ಕಳುಹಿಸಿದರೆ, ಹೋಟೆಲ್ ಸಿಬ್ಬಂದಿ ಆನಂದ್ ಸಿಂಗ್ ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಇತ್ತ ಕೊಠಡಿಗೆ ತೆರಳಿದರೂ ಸುಮ್ಮನಾಗದ ಗಣೇಶ್ ಮತ್ತೆ ಚೀರಾಟ ನಡೆಸಿ ಗದ್ದಲ ಮುಂದುವರಿಸಿದ್ದರು ಎನ್ನಲಾಗಿದೆ.

ಇಬ್ಬರ ನಡುವಿನ ಗಲಾಟೆಯಲ್ಲಿ ಆನಂದ್ ಸಿಂಗ್ ಅವರ ಬಲಬಾಗದ ಹಣೆ, ಕಣ್ಣಿನ ಭಾಗಕ್ಕೆ ಹೊಡೆತ ಬಿದ್ದಿದೆ. ಬಲವಾದ ಏಟಿಗೆ ಪ್ರಜ್ಞೆ ತಪ್ಪಿ ಬಿದ್ದ ಆನಂದ್ ಸಿಂಗ್ ಕುಸಿದು ಬೀಳುತ್ತಿದ್ದಂತೆ ಎಡಭಾಗದ ಎದೆಯ ಮೇಲೆ ಹತ್ತಿ ನಿಂತು ಗಣೇಶ್ ತುಳಿದ ಪರಿಣಾಮ ಎಡ ಭಾಗದ ಪಕ್ಕೆಲುಬಿಗೆ ಏಟಾಗಿದೆ. ಆನಂದ್ ಸಿಂಗ್ ಬಲ ಕಣ್ಣು ಊದಿ ಕೊಂಡಿದ್ದು ಕಣ್ಣಿನ ಭಾಗಕ್ಕೆ ಗಂಭೀರ ಗಾಯವಾಗಿದೆ ಎನ್ನುವ ವಿಚಾರವನ್ನು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

Comments are closed.