ಅಂತರಾಷ್ಟ್ರೀಯ

ವಿಂಡೋಸ್ 10 ಮೊಬೈಲ್ ಖರೀದಿಸಬೇಡಿ: ಮೈಕ್ರೋಸಾಫ್ಟ್

Pinterest LinkedIn Tumblr


ವಾಷಿಂಗ್ಟನ್: ಸ್ಮಾರ್ಟ್ ಫೋನ್ ಮಾರುಕಟ್ಟೆಯಿಂದಲೇ ದೂರ ಸರಿಯಲು ಮೈಕ್ರೋಸಾಫ್ಟ್ ಮುಂದಾಗಿದ್ದು, ವಿಂಡೋಸ್ 10 ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಳಸುವ ಗ್ರಾಹಕರು ಆಂಡ್ರಾಯ್ಡ್ ಅಥವಾ ಐಓಎಸ್ ಆಪರೇಟಿಂಗ್ ಆಧಾರಿತ ಫೋನಿಗೆ ಶಿಫ್ಟ್ ಆಗುವಂತೆ ಮನವಿ ಮಾಡಿಕೊಂಡಿದೆ.

ವಿಂಡೋಸ್ 10 ಮೊಬೈಲ್ ಓಎಸ್‍ಗೆ 2019ರ ಜೂನ್ 11ಕ್ಕೆ ಸಪೋರ್ಟ್ ನೀಡುವುದನ್ನು ನಿಲ್ಲಿಸುತ್ತೇವೆ. ಸೆಕ್ಯೂರಿಟಿ ಅಪ್‍ಡೇಟ್, ನಾನ್ ಸೆಕ್ಯೂರಿಟಿ ಹಾಟ್ ಫಿಕ್ಸ್, ಉಚಿತವಾಗಿ ಸಿಗುವ ಸಪೋರ್ಟ್ ಆಯ್ಕೆಗಳನ್ನು 2019ರ ಡಿಸೆಂಬರ್ 10ಕ್ಕೆ ಸ್ಥಗಿತಗೊಳಿಸುತ್ತೇವೆ ಎಂದು ಮೈಕ್ರೋಸಾಫ್ಟ್ ತನ್ನ ಸಪೋರ್ಟ್ ಮೈಕ್ರೋಸಾಫ್ಟ್ ಪೇಜ್ ನಲ್ಲಿ ಹೇಳಿಕೊಂಡಿದೆ.

ಡಿಸೆಂಬರ್ 10ರ ನಂತರವೂ ಫೋನ್ ಬಳಸಬಹುದೇ ಎನ್ನುವ ಪ್ರಶ್ನೆಗೆ, ವಿಂಡೋಸ್ 10 ಮೊಬೈಲ್ ಓಎಸ್ ಬಳಸಬಹುದು. ಆದರೆ ಈ ಓಎಸ್‍ಗೆ ಯಾವುದೇ ಭದ್ರತಾ ಸೌಲಭ್ಯ ನೀಡುವುದಿಲ್ಲ ಎಂದು ಹೇಳಿಕೊಂಡಿದೆ. ಸಂಬಂಧ ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುಂತೆ ಸಪೋರ್ಟ್ ಮೈಕ್ರೋಸಾಫ್ಟ್ ಪೇಜ್ ನಲ್ಲಿ ಪ್ರಶ್ನೋತ್ತರ ಮಾದರಿಯಲ್ಲಿ ಫೋನಿಗೆ ಸಪೋರ್ಟ್ ನಿಲ್ಲಿಸುತ್ತಿರುವ ವಿಚಾರವನ್ನು ತಿಳಿಸಿದೆ.

ಗೂಗಲ್ ಆಂಡ್ರಾಯ್ಡ್ ಮತ್ತು ಆಪಲ್ ಕಂಪನಿಯ ಐಓಎಸ್ ಗೆ ಸ್ಪರ್ಧೆ ಎನ್ನುವಂತೆ ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಆಪರೇಟಿಂಗ್ ಸಿಸ್ಟಂ ಅನ್ನು 2010ರಲ್ಲಿ ಬಿಡುಗಡೆಗೊಳಿಸಿತ್ತು. ಬಳಿಕ ನೋಕಿಯಾ, ಸ್ಯಾಮ್ ಸಂಗ್, ಎಲ್‍ಜಿ, ಎಚ್‍ಟಿಸಿ, ಮೈಕ್ರೋಮ್ಯಾಕ್ಸ್, ಕಾರ್ಬನ್, ಲಾವಾ ಇನ್ನಿತರ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಫೋನ್ ಬಿಡುಗಡೆ ಮಾಡತೊಡಗಿತ್ತು. ಈ ನಡುವೆ 2013-14ರಲ್ಲಿ ಮೈಕ್ರೋಸಾಫ್ಟ್ ನೋಕಿಯಾ ಕಂಪನಿಯನ್ನು ಖರೀದಿ ಮಾಡಿತ್ತು. ಲೂಮಿಯಾ ಸೀರಿಸ್ ನಲ್ಲಿ ಉತ್ತಮ ಕ್ಯಾಮೆರಾ ಫೀಚರ್ ಇರುವ ಫೋನ್ ಗಳನ್ನು ನೋಕಿಯಾ ಬಿಡುಗಡೆ ಮಾಡತೊಡಗಿತು. ಆದರೆ ಆಂಡ್ರಾಯ್ಡ್ ಮತ್ತು ಐಓಎಸ್ ಅಬ್ಬರದ ಮಧ್ಯೆ ವಿಂಡೋಸ್ ಫೋನ್/ ಟ್ಯಾಬ್ಲೆಟ್ ಗಳು ಗ್ರಾಹಕರನ್ನು ಸೆಳೆಯಲು ವಿಫಲವಾಗತೊಡಗಿತು.

ಡೆವಲಪರ್ ಗಳು ಆ್ಯಪ್ ಗಳನ್ನು ತಯಾರಿಸಲು ಹೆಚ್ಚಿನ ಆಸಕ್ತಿ ತೋರಿಸದ ಕಾರಣ ವಿಂಡೋಸ್ ಫೋನ್ ಸ್ಟೋರಿನಲ್ಲಿ ಅಪ್ಲಿಕೇಶನ್ ಗಳ ಸಂಖ್ಯೆ ಕಡಿಮೆ ಇತ್ತು. ಇದರ ಜೊತೆಯಲ್ಲೇ ಮೊಬೈಲ್ ಕಂಪನಿಗಳು ಆಂಡ್ರಾಯ್ಡ್ ನತ್ತ ಮುಖ ಮಾಡಿದ್ದು ಮೈಕ್ರೋಸಾಫ್ಟ್ ಗೆ ಬಲವಾದ ಹೊಡೆತ ಬಿತ್ತು. ಯೂಸರ್ ಇಂಟರ್ ಫೇಸ್ ಗ್ರಾಹಕರಿಗೆ ಇಷ್ಟವಾಗಿರಲ್ಲ. ಈ ಎಲ್ಲ ಕಾರಣದಿಂದ ಕೊನೆಗೆ ನೋಕಿಯಾ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಫೋನ್ ಬಿಡುಗಡೆ ಮಾಡದೇ ಇರಲು ನಿರ್ಧರಿಸಿತು. ಗೂಗಲ್ ಮತ್ತು ಆಪಲ್ ಕಂಪನಿಗಳು ವರ್ಷ ವರ್ಷ ಆಂಡ್ರಾಯ್ಡ್, ಐಓಎಸ್ ಗೆ ಅಪ್‍ಡೇಟ್ ಮಾಡುತ್ತಿದ್ದರೆ ಮೈಕ್ರೋಸಾಫ್ಟ್ ವಿಂಡೋಸ್ 10 ಫೋನ್ ಓಎಸ್ ಬಿಡುಗಡೆ ಮಾಡಿದ್ದು 2015 ರಲ್ಲಿ. ಯಾವಾಗ ಮಾರುಕಟ್ಟೆಯಲ್ಲಿ ತನಗೆ ಸ್ಥಾನ ಇಲ್ಲ ಎನ್ನುವುದು ಗೊತ್ತಾಯಿತೋ ಸ್ಮಾರ್ಟ್ ಫೋನ್ ಓಎಸ್ ಕ್ಷೇತ್ರದಿಂದ ನಿಧಾನವಾಗಿ ಹಿಂದಕ್ಕೆ ಸರಿದು ಈಗ ಶಾಶ್ವತವಾಗಿ ಗುಡ್‍ಬೈ ಹೇಳಲು ಮೈಕ್ರೋಸಾಫ್ಟ್ ನಿರ್ಧರಿಸಿದೆ.

Comments are closed.