ಕರ್ನಾಟಕ

ಮರಳಿದ ಕಾಂಗ್ರೆಸ್ ಅತೃಪ್ತ ಶಾಸಕರು; ಗುರುಗ್ರಾಮ ರೆಸಾರ್ಟ್​ನಿಂದ ತೆರಳುತ್ತಿರುವ ಬಿಜೆಪಿ ಶಾಸಕರು

Pinterest LinkedIn Tumblr


ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ರೆಸಾರ್ಟ್​ ರಾಜಕೀಯ ಅಂತಿಮ ಘಟ್ಟಕ್ಕೆ ಬಂದಂತೆ ಕಾಣುತ್ತಿದೆ. ಆಪರೇಷನ್ ಕಮಲ ಮಾಡಿಯೇ ತೀರುತ್ತೇವೆ ಎಂದು ಹರಿಯಾಣದ ಗುರುಗ್ರಾಮ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಶಾಸಕರು ಮತ್ತು ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತೇವೆ ಎಂದು ಪಣತೊಟ್ಟಿದ್ದ ಕೈ ಅತೃಪ್ತ ಶಾಸಕರು ಯಾವುದೂ ಸಾಕಾರಗೊಳ್ಳದ ಕಾರಣ ಒಬ್ಬೊಬ್ಬರಾಗಿ ದೆಹಲಿ, ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಮೈತ್ರಿ ಸರ್ಕಾರ ರಚನೆ ಆದಾಗಿನಿಂದಲೂ ಆಪರೇಷನ್ ಕಮಲ ಮಾಡಲು ಹೋಗಿ ಎಡವುತ್ತಲೇ ಇರುವ ಬಿಜೆಪಿ ಮತ್ತೆ ಆಪರೇಷನ್ ಕಮಲದಿಂದ ಕೈ ಸುಟ್ಟುಕೊಂಡಿದೆ. ಪಕ್ಷದ ಶಾಸಕರಿಗೆ ಯಾವುದೇ ಸೂಚನೆ ನೀಡದೆ, ಅವರನ್ನೆಲ್ಲಾ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿಸಿದ್ದ ಬಿ.ಎಸ್​.ಯಡಿಯೂರಪ್ಪ ಅವರು ಶಾಸಕರಿಗೆ ಯಾವೊಂದು ಸೂಚನೆಯನ್ನು ನೀಡಿರಲಿಲ್ಲ. ಅಲ್ಲಿದ್ದ ಶಾಸಕರಿಗೂ ಏನಾಗುತ್ತಿದೆ ಎಂಬ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ, ಇದೀಗ ಆಪರೇಷನ್ ಕಮಲ ಹಳ್ಳ ಹಿಡಿದ ಹಿನ್ನೆಲೆಯಲ್ಲಿ ಒಬ್ಬೊಬ್ಬರಾಗಿ ರೆಸಾರ್ಟ್​ನಿಂದ ಜಾಗ ಖಾಲಿ ಮಾಡುತ್ತಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ರೆಸಾರ್ಟ್ ನಲ್ಲಿದ್ದ ಬೊಮ್ಮಾಯಿ, ಹಾಗೂ ಶ್ರೀರಾಮುಲು ಅಲ್ಲಿಂದ ತೆರಳಿದ್ದಾರೆ. ಯಡಿಯೂರಪ್ಪ ಅವರು ಅಲ್ಲಿ ಇಲ್ಲದ ಕಾರಣಕ್ಕೆ ವಿಶ್ವಾಸ ಕಳೆದುಕೊಂಡ ಶಾಸಕರು ಹೋಟೆಲ್​ನಿಂದ ಹೊರಡಲು ಸಜ್ಜಾಗಿದ್ದಾರೆ.

ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿ.ಎಸ್​.ಯಡಿಯೂರಪ್ಪ ಅವರು ಹೋಟೆಲ್​ನಲ್ಲಿರುವ ಶಾಸಕರೆಲ್ಲ ಒಂದೇ ಬಾರಿಗೆ ಹೊರಗೆ ಬಂದರೆ ಮಾಧ್ಯಮದ ಮುಂದೆ ಏನು ಹೇಳುತ್ತಾರೋ ಎಂಬ ಭಯದಲ್ಲಿದ್ದಾರೆ. ಅದಕ್ಕಾಗಿಯೇ ಅಲ್ಲಿರುವ ಯಾವ ಶಾಸಕರಿಗೆ ಅಲ್ಲಿಂದ ಹೊರಡಬೇಕೇ, ಬೇಡವೇ ಎಂಬುದರ ಬಗ್ಗೆ ಸ್ಪಷ್ಟ ಸೂಚನೆ ನೀಡಿಲ್ಲ ಎನ್ನಲಾಗುತ್ತಿದೆ.

“ದೆಹಲಿ ಸಮೀಪದ ಐಷಾರಾಮಿ ರೆಸಾರ್ಟ್​ನಲ್ಲಿ ಮೋಜು-ಮಸ್ತಿ ಮುಗಿಸಿಕೊಂಡು ರಾಜ್ಯಕ್ಕೆ ವಾಪಸ್ಸಾಗುತ್ತಿರುವ ಬಿಜೆಪಿ ಶಾಸಕರಿಗೆ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಇಷ್ಟು ದಿನ ತಮ್ಮ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ತೋರಿದ್ದ ಶಾಸಕರು ಇನ್ನು ಮುಂದೆಯಾದರೂ ತಮ್ಮ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಗಮನ ಹರಿಸುತ್ತಾರೆ ಎಂಬ ನಂಬಿಕೆ ಹೊಂದಿದ್ದೇನೆ,” ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಮುಂಬೈ ಹೋಟೆಲ್​ನಲ್ಲಿ ಬೀಡುಬಿಟ್ಟಿದ್ದ ಅತೃಪ್ತ ಶಾಸಕರಲ್ಲಿ ಮೂರು ಮಂದಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಅತೃಪ್ತರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ ಹಾಗೂ ಉಮೇಶ್​ ಜಾಧವ್ ಮಾತ್ರ ಮುಂಬೈನಲ್ಲಿದ್ದಾರೆ.

ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್​ ಪಡೆದ ನಂತರ ಕಾಂಗ್ರೆಸ್​ನ ಆರು ಶಾಸಕರು ಎರಡನೇ ಹಂತದಲ್ಲಿ ಜನವರಿ 19ರಂದು ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗಿತ್ತು. ಇದನ್ನು ಅರಿತ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಅವರು ಜನವರಿ 18ರಂದು ಸಿಎಲ್​ಪಿ ಸಭೆ ಕರೆದು ವಿಪ್​ ಜಾರಿ ಮಾಡಲಾಗಿದೆ. ಒಂದು ವೇಳೆ ನಾಳೆ ನಡೆಯುವ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್​ನ ಯಾವೊಬ್ಬ ಶಾಸಕರು ತಪ್ಪಿಸಿಕೊಂಡರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಸಿದ್ದರಾಮಯ್ಯ ನೀಡಿದ್ದಾರೆ. ಸಿಎಲ್​ಪಿ ಸಭೆಗೆ ಗೈರಾಗಿ, ವಿಪ್​ ಉಲ್ಲಂಘಿಸಿದರೆ ತಮ್ಮ ಶಾಸಕ ಸ್ಥಾನಕ್ಕೆ ಕುತ್ತು ಬರಲಿದೆ ಎಂಬುದನ್ನು ಅರಿತಿರುವ ಅತೃಪ್ತ ಶಾಸಕರು ಮುಂಬೈನಿಂದ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಇನ್ನು ಅತೃಪ್ತರ ತಂಡದಲ್ಲಿದ್ದ ಬಳ್ಳಾರಿ ಶಾಸಕ ನಾಗೇಂದ್ರ ಬೆಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ಕೋರ್ಟ್​ ವಿಚಾರಣೆಗೆ ಇಂದು ಹಾಜರಾದರು. ನಂತರ ಸಿಎಲ್​ಪಿ ಸಭೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಕೂಡ ನನಗೆ ಕೋರ್ಟ್ ಇದೆ. ಹೀಗಾಗಿ ಸಿಎಲ್​ಪಿ ಸಭೆಗೆ ಹೋಗುವುದು ಸ್ವಲ್ಪ ಕಷ್ಟ ಇದೆ. ನೋಡಬೇಕು. ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments are closed.