ಕರ್ನಾಟಕ

ಮುಂಬೈನಲ್ಲಿರುವ ಶಾಸಕರ ಫೋನ್ ಸ್ವಿಚ್ಡ್​ ಆಫ್, ಚಿಕ್ಕಮಗಳೂರು ಎಸ್ಟೇಟ್​ನಲ್ಲಿ ಶಾಸಕ ಗಣೇಶ್​

Pinterest LinkedIn Tumblr


ಬೆಂಗಳೂರು: ಮೈತ್ರಿ ಸರ್ಕಾರದ ನಾಯಕರಲ್ಲಿ ಈ ಬಾರಿ ಸಂಕ್ರಾಂತಿ ಸಂಭ್ರಮ ಕಾಣುತ್ತಿಲ್ಲ. ಆಪರೇಷನ್ ಕಮಲಕ್ಕೆ ಥರಗುಟ್ಟಿ ಹೋಗಿರುವ ಕೈ ನಾಯಕರು ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಮುಂಬೈನಲ್ಲಿ ಬೀಡುಬಿಟ್ಟಿರುವ ಶಾಸಕರ ಮನವೊಲಿಸಿ ಕರೆತರಲು ಸ್ವತಃ ಡಿಕೆಶಿ ಅವರು ಅಲ್ಲಿಗೆ ಇಂದು ಪ್ರಯಾಣ ಬೆಳೆಸಲಿದ್ದಾರೆ. ಆನಂದ್​ ಸಿಂಗ್ ಕೈ ಮುಖಂಡರ ಸಮ್ಮುಖದಲ್ಲಿ ಇದ್ದು, ಮತ್ತೊಬ್ಬ ಅತೃಪ್ತ ಕಂಪ್ಲಿ ಗಣೇಶ್​ ಚಿಕ್ಕಮಗಳೂರಿನ ಅನಿಲ್​ ಲಾಡ್​ಗೆ ಸೇರಿದ ಎಮ್ಮೆ ಖಾನ್​ ಎಸ್ಟೇಟ್​ನಲ್ಲಿ ಇದ್ದಾರೆ ಎನ್ನಲಾಗಿದೆ.

ಇಂದು ಬೆಳಗ್ಗೆ ಅತೃಪ್ತ ಪಕ್ಷೇತರ ಶಾಸಕ ಶಂಕರ್ ಅವರೊಂದಿಗೆ ಫೋನಿನಲ್ಲಿ ಮಾತನಾಡಿದ್ದ ಡಿಕೆಶಿ ವಿರುದ್ಧ ಶಂಕರ್ ಫುಲ್ ಗರಂ ಆಗಿ ಮಾತನಾಡಿದ್ದಾರೆ ಎನ್ನಲಾಗಿದೆ. “ನೀವ್ಯಾರು ನನ್ನ ಕೇಳಲು. ನಾನು ಕಾಂಗ್ರೆಸ್ ಶಾಸಕ ಅಲ್ಲ. ನನ್ನನ್ನು ಮಂತ್ರಿ ಸ್ಥಾನದಿಂದ ತೆಗೆಯುವಾಗ ಎಲ್ಲೋಗಿದ್ರಿ. ಯಾವುದೇ ಕಾರಣಕ್ಕೂ ನಿಮಗೆ ನನ್ನ ಬೆಂಬಲವಿಲ್ಲ,” ಎಂದು ಖಡಕ್​ ಆಗಿ ನೇರವಾಗಿ ಡಿಕೆಶಿ ಅವರಿಗೆ ಶಂಕರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಗೊಂದಲಕ್ಕೆ ಒಳಗಾದ ಡಿಕೆಶಿ ಕೂಡಲೇ ಭೈರತಿ ಬಸವಾರಾಜ್​ಗೆ ಕರೆ ಮಾಡಿ, ಶಂಕರ್ ಮನವೊಲಿಸಿ, ಕರೆವತರುವಂತೆ ಒತ್ತಡ ಹೇರಿದ್ದಾರೆ. ಭೈರತಿ ಬಸವರಾಜ್ ತಂಗಿಯನ್ನೇ ಮದುವೆ ಆಗಿರೋ ಶಂಕರ್. ಸಂಬಂಧದ ಮೂಲಕ ಶಂಕರ್ ಮನವೊಲಿಕೆ ಪ್ಲಾನ್ ಮಾಡಲಾಗಿದೆ.

ಇನ್ನು ಮುಳಬಾಗಿಲು ಶಾಸಕ ನಾಗೇಶ್ ಸಂಪರ್ಕಕ್ಕೂ ಡಿಕೆಶಿ ಪ್ರಯತ್ನ ನಡೆಸಿದ್ದಾರೆ. ಆದರೆ, ನಾಗೇಶ್​ ಡಿಕೆಶಿ ಕರೆಯನ್ನು ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ. ಕರೆ ಸ್ವೀಕರಿಸದ ಕಾರಣ ಕೊತ್ತೂರು ಮಂಜುನಾಥ್ ಗೆ ಕರೆ ಮಾಡಿದ ಡಿಕೆಶಿ, “ಅದೇನು ಮಾಡ್ತೀಯೋ ಗೊತ್ತಿಲ್ಲ.
ನೀನು ಹೇಳಿದ್ದಕ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕದೆ, ನಾಗೇಶ್ ಗೆ ಬೆಂಬಲ ನೀಡಿದ್ದು. ಈಗ ನಾಗೇಶ್ ಬಿಜೆಪಿ ಅಂತಿದ್ದಾನೆ. ನಾಗೇಶ್ ಕರೆದುಕೊಂಡು ಬರುವ ಕೆಲಸ ನಿಂದು. ಅದೇನ್ ಮಾಡ್ತೀಯೋ ಗೊತ್ತಿಲ್ಲ,” ಎಂದು ಗದರಿ ಹೇಳಿದ್ದಾರೆ ಎನ್ನಲಾಗಿದೆ.

ಆಪರೇಷನ್ ಕಮಲ ಮೂಲಕ ರಾಜಕೀಯ ಸಂಚಲನ ಸೃಷ್ಟಿಮಾಡುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಕಾಂಗ್ರೆಸ್​ ಮುಖಂಡರು ಹರಿಹಾಯ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೆಸಾರ್ಟ್​ ರಾಜಕೀಯದ ಮೂಲಕ ಸಂವಿಧಾನದ ಆಶಯದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಿರಿ. ನಿಮ್ಮ ನಿಯತ್ತನ್ನು ಮೊದಲು ಜನರಿಗೆ ತೋರಿಸಿ ಎಂದು ಅವರು ಟ್ವಿಟರ್​ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಅತೃಪ್ತ ಶಾಸಕರ ಪಟ್ಟಿಯಲ್ಲಿದ್ದಾರೆ ಎನ್ನಲಾದ ಹೊಸಪೇಟೆ ಆನಂದ್​ ಸಿಂಗ್​ ಅವರನ್ನು ಇಂದು ಕುಮಾರಕೃಪಾದಲ್ಲಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್​ ಮುಖಂಡರ ಸಭೆಗೆ ಸಚಿವ ಡಿಕೆಶಿ ಕರೆದುಕೊಂಡು ಬಂದರು. ಈ ವೇಳೆ ಪ್ರತಿಕ್ರಿಯೆ ನೀಡಿರುವ ಆನಂದ್​ ಸಿಂಗ್ ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಬಿಟ್ಟುಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮುಂಬೈನಲ್ಲಿರುವ ಶಾಸಕರ ಫೋನ್ ಸ್ವಿಚ್ಡ್​ ಆಫ್

ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಮನವೊಲಿಸಿ ಕರೆದುಕೊಂಡು ಬರಲು ಇಂದು ಡಿಕೆ ಶಿವಕುಮಾರ್ ಮುಂಬೈಗೆ ತೆರಳುತ್ತಿದ್ದಾರೆ. ಒಂದು ವೇಳೆ ಡಿಕೆ ಶಿವಕುಮಾರ್ ಬಂದು ನಮ್ಮನ್ನು ಸಮಾಧಾನಪಡಿಸಿದರೆ ಹೇಗೆ ಅನ್ನೋ ಭಯದಿಂದ ಶಾಸಕರು ತಮ್ಮ ಮೊಬೈಲ್ ಸ್ವೀಚ್ಡ್​ ಆಫ್ ಮಾಡಿಕೊಂಡಿದ್ದಾರೆ. ಡಿಕೆಶಿ ಬರುವ ಮಾಹಿತಿ ಅರಿತ ಬಿಎಸ್ ಯಡಿಯೂರಪ್ಪ ಅವರು ಶಾಸಕರಿಗೆ ಮೊಬೈಲ್ ಸ್ವೀಚ್ ಆಫ್ ಮಾಡುವಂತೆ ಸೂಚನೆ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ‌ಕೂಡ ಮುಂಬೈನಲ್ಲಿರೋ ಶಾಸಕರ ಸಂಪರ್ಕಕ್ಕೆ ಯತ್ನ ನಡೆಸಿದ್ದಾರೆ.

ಕುಮಾರಕೃಪಾ ಅತಿಥಿ ಗೃಹದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಮುಂಬೈಗೆ ಹೋಗಿರುವ ಶಾಸಕರು ಒಂದಿಬ್ರು ಇರಬಹುದು. ನೀವು ಮಾಧ್ಯಮದಲ್ಲಿ 15 ಜನ ಅಂತ ತೋರಿಸುತ್ತಿದ್ದೀರಿ. ಹೋಗಿದ್ರೆ ಮೂರು ಜನ ಹೋಗಿರಬಹುದು ಅಷ್ಟೇ. ಮಾಧ್ಯಮದ ವರದಿ ನೋಡಿ ಮುಂಜಾಗ್ರತೆಯ ಕ್ರಮಕ್ಕಾಗಿ ವೇಣುಗೋಪಾಲ್ ಸಾಹೇಬ್ರು ಬಂದಿದ್ದಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಯಾವುದೇ ಅನುಮಾನ ಬೇಡ. ಅವರು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಹೋದ್ರೆ, ಸಂವಿಧಾನಿಕವಾಗಿ ಏನು ಮಾಡಬೇಕೊ ಅದನ್ನ ಮಾಡ್ತೇವೆ. ಉಮೇಶ್ ಜಾದವ್ ಬಿಜೆಪಿಗೆ ಹೋಗಲ್ಲ. ಮೊಬೈಲ್ ಅನ್ನು ಚಿಂಚೊಳ್ಳಿಯಲ್ಲಿ ಬಿಟ್ಟು ಹೋಗಿದ್ದಾರೆ. ಅವರ ಸಹೋದರನ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ಚಿಂಚೋಳಿ ಕೈ ಶಾಸಕ ಉಮೇಶ್ ಜಾಧವ್ ಸಚಿವ ಸ್ಥಾನ ನೀಡದ್ದಕ್ಕೆ ಮುನಿಸಿಕೊಂಡಿದ್ದರು. ಇದರ ಲಾಭ ಪಡೆಯಲು ಮುಂದಾದ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಜಾಧವ್ ಗೆ ಬಿಜೆಪಿ ಟಿಕೆಟ್ ಆಪರ್ ನೀಡಿದೆ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಯುವಂತೆ ಮನವೊಲಿಕೆ ಮಾಡಿದೆ. ಕಮಲ ಪಾಳಯ ಸಂಪರ್ಕದಲ್ಲಿರುವ ಜಾಧವ್​ನನ್ನು ಕರೆತರುವ ಬಗ್ಗೆ ಕೈ ನಾಯಕರು ಪ್ರಯತ್ನಿಸುತ್ತಿದ್ದು, ಇದೀಗ ಅವರ ಸಹೋದರ ರಾಮಚಂದ್ರ ಜಾಧವ್ ಮೂಲಕ ಸಂಧಾನಕ್ಕೆ ಪ್ಲಾನ್ ಮಾಡಿದ್ದಾರೆ.

Comments are closed.