ಕರ್ನಾಟಕ

ಕೂಡಲಸಂಗಮ ಸ್ವಾಮೀಜಿಯಿಂದ ಶರದ್ ಪವಾರ್ ಗೆ ಬಸವ ಪ್ರಶಸ್ತಿ ಘೋಷಣೆ

Pinterest LinkedIn Tumblr


ವಿಜಯಪುರ: ಕೇಂದ್ರ ಮಾಜಿ ಸಚಿವ ಶರದ್ ಪವಾರ್ ಅವರಿಗೆ ಈ ಬಾರಿಯ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಬಸವ ಕೃಷಿ ಪ್ರಶಸ್ತಿ ಪ್ರಕಟವಾಗಿದೆ. ಇಲ್ಲಿ ಸುದ್ದಿಗೋಷ್ಠಿಯ್ಲಲಿ ಮಾತನಾಡಿದ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, ಕೂಡಲ ಸಂಗಮ ಪಂಚಮಸಾಲಿ ಪೀಠದಿಂದ ನೀಡುವ 2019ನೇ ವರ್ಷದ ಪ್ರತಿಷ್ಠಿತ ಪ್ರಶಸ್ತಿಯನ್ನು ಶರದ್ ಪವಾರ್ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಫೆಬ್ರವರಿ ಎರಡನೇ ವಾರದಲ್ಲಿ ಕೂಡಲ ಸಂಗಮದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಈ ಬಸವ ಕೃಷಿ ಪ್ರಶಸ್ತಿ ರೂ. 1 ಲಕ್ಷ ನಗದು ಹಾಗೂ ತಾಮ್ರದ ಸ್ಮರಣ ಫಲಕ ಒಳಗೊಂಡಿರಲಿದೆ. ಕಳೆದ ವರ್ಷದ ಬಸವ ಕೃಷಿ ಪ್ರಶಸ್ತಿಯನ್ನು ತಮಿಳುನಾಡಿನ ವಿಶ್ವಖ್ಯಾತ ಕೃಷಿ ಸಂಶೋಧಕ ಡಾ. ಎಂ.ಎಸ್. ಸ್ವಾಮಿನಾಥನ್ ಅವರಿಗೆ ನೀಡಲಾಗಿತ್ತು. ಅದಕ್ಕೂ ಹಿಂದೆ, ತ್ರಿಪುರಾದ ಮಾಜಿ ಸಿಎಂ ಮಾಣಿಕ್ ಸರ್ಕಾರ್ ಅವರಿಗೂ ಈ ಗೌರವ ನೀಡಲಾಗಿತ್ತು.

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ:
ಇದೇ ವೇಳೆ, ಬಸವ ಜಯಮೃತ್ಯುಂಜಯ ಸ್ವಾಮಿಗಳು ಲಿಂಗಾಯತ ಸ್ವತಂತ್ರ ಹೋರಾಟ ಮುಂದುವರಿಸುವ ಸುಳಿವು ನೀಡಿದರು. “ಲಿಂಗಾಯತ ಸ್ವತಂತ್ರ ಹೋರಾಟ ಕೈಬಿಟ್ಟಿಲ್ಲ. ಸೂಕ್ತ ದಾಖಲಾತಿ ಸಂಗ್ರಹಿಸಿ ಕಾನೂನಾತ್ಮಕ ಹೋರಾಟ ಮಾಡಲಾಗುವುದು. ಕೇಂದ್ರ ಸರಕಾರ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಮನವಿ ತಿರಸ್ಕರಿಸಿದೆ. ಆದರೆ ತಮ್ಮ ಹೋರಾಟ ಇಷ್ಟಕ್ಕೇ ನಿಲ್ಲುವುದಿಲ್ಲ. ಪ್ರಧಾನಿಯನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು” ಎಂದು ಅವರು ತಿಳಿಸಿದರು.

ಇದೇ ವೇಳೆ ಮೇಲರ್ಗಕ್ಕೆ ಶೇ. 10ರಷ್ಟು ಮೀಸಲಾತಿ ನೀಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ವಾಗತಿಸಿದರು.

Comments are closed.