ಕರ್ನಾಟಕ

ಕುಡಿಯುವ ನೀರಿಗೆ ವಿಷ ಬೆರೆಸಿದ ಕಿಡಿಗೇಡಿಗಳು!: ತಪ್ಪಿದ ಮತ್ತೊಂದು ದುರಂತ

Pinterest LinkedIn Tumblr


ಬೆಂಗಳೂರು: ಕುಡಿಯುವ ನೀರಿಗೆ ವಿಷ ಬೆರೆಸಿದ ಪ್ರಕರಣವೊಂದು ಬಯಲಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಖಾಪುರದಲ್ಲಿ ಕುಡಿಯುವ ನೀರಿಗೆ ಕಿಡಿಗೇಡಿಗಳು ವಿಷ ಬೆರೆಸಿದ್ದಾರೆ. ಮೂದನೂರ ಎಂಬ ಗ್ರಾಮದಿಂದ ಕುಡಿಯುವ ನೀರನ್ನು ಶಾಖಾಪೂರ, ತೆಗ್ಗೆಳ್ಳಿ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಇಲ್ಲಿಂದ ಬೇರೆ ಕಡೆ ಕುಡಿಯುವ ನೀರು ಸರಬರಾಜು ಆಗುತ್ತಿರುವುದನ್ನು ಸಹಿಸದ ಕಿಡಿಗೇಡಿಗಳು, ಬಾವಿಗೆ ವಿಷ ಹಾಕಿದ್ದಾರೆ. ಆದರೆ ಇಲ್ಲಿಯವರೆಗೂ ವಿಷ ಹಾಕಿದ ಪಾಪಿಗಳು ಯಾರೆಂದು? ಖಾತ್ರಿಯಾಗಿಲ್ಲ ಎಂದು ಹೇಳಲಾಗಿದೆ. ಇನ್ನು ಅದೃಷ್ಟವಶಾತ್​ ಯಾರು ಈ ನೀರನ್ನು ಕುಡಿಯದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾಡಳಿತ ಕೂಡ ಸ್ಪಷ್ಟಪಡಿಸಿದೆ.

ಈ ಹಿಂದೆ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದಲ್ಲಿಯೂ ಇಂತಹುದೇ ಘಟನೆ ನಡೆದಿತ್ತು.ಮಾರಮ್ಮ ದೇವಿಯ ಪ್ರಸಾದದಲ್ಲಿ ವಿಷ ಬೆರಿಸಲಾಗಿತ್ತು. ವಿಷ ಪ್ರಸಾದವನ್ನು ಸೇವಿಸಿದ್ದ ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಭಕ್ತರು ಸಾವನ್ನಪ್ಪಿದ್ದರು. ಕೆಲವರು ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು. 100 ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಅಲ್ಲದೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಪ್ರತಿ ಮೃತ ಕುಟುಂಬಕ್ಕೆ 5 ಲಕ್ಷ ರೂಪಾಯಿಯಂತೇ ಪರಿಹಾರ ನೀಡಲಾಗಿತ್ತು.

ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತಿ ಮಾರಮ್ಮ ದೇವಸ್ಥಾನದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಪ್ರಸಾದ ತಿಂದ ಕೆಲ ಹೊತ್ತಲ್ಲೇ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬಳಿಕ ಅಸ್ವಸ್ಥಗೊಂಡ 80 ಕ್ಕೂ ಹೆಚ್ಚು ಮಂದಿಯನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಿಸಲಾಯಿತು. ಮೈಸೂರಿನ ಕೆಆರ್ ಆಸ್ಪತ್ರೆ, ಜೆಎಸ್​ಎಸ್ ಆಸ್ಪತ್ರೆಗಳಿಗೂ ಅನೇಕರನ್ನು ದಾಖಲಿಸಲಾಯಿತು. ಮೈಸೂರಿನ ಆ ಎರಡು ಆಸ್ಪತ್ರೆಗಳಲ್ಲಿ ಇಬ್ಬರು ಸಾವನ್ನಪಿದ್ದಾರೆ. ಚಾಮರಾಜನಗರದ ಸ್ಥಳೀಯ ಆಸ್ಪತ್ರೆಗಳಲ್ಲಿ ಒಟ್ಟು 20 ಮಂದಿ ಮರಣ ಹೊಂದಿದ್ದಾರೆ. ಭಕ್ತರು ತಿಂದುಂಡ ಪ್ರಸಾದ ಎಲೆಯಲ್ಲಿ ಅಳಿದುಳಿದ ಅನ್ನ ತಿಂದ 60ಕ್ಕೂ ಹೆಚ್ಚು ಕಾಗೆಗಳೂ ಸಾವನ್ನಪ್ಪಿವೆ.

ಈ ದುರಂತದ ಬಳಿಕ ಮಾರಮ್ಮ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸರ್ಕಾರ ಚಿಂತನೆ ಕೂಡ ನಡೆಸಿತ್ತು. ಈ ಬಗ್ಗೆ ಮುಜರಾಯಿ ಇಲಾಖೆ ಸಚಿವ ರಾಜಶೇಖರ್​ ಪಾಟೀಲ್ ಸಿಎಂ ಕುಮಾರಸ್ವಾಮಿ ಹಾಗೂ ಮುಜರಾಯಿ ಇಲಾಖೆಯ​ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿತ್ತು. ಖಾಸಗಿಯವರ ವಶದಲ್ಲಿದ್ದ ಸುಳ್ವಾಡಿ ಮಾರಮ್ಮ ದೇವಾಲಯವನ್ನು ಹನೂರು ತಹಶೀಲ್ದಾರ್​ ಸೀಜ್​ ಮಾಡಿದ್ದರು. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದ ಚಾಮರಾಜನಗರ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿದ್ದರು.

Comments are closed.